ಮ್ಯಾಗಿ ನೂಡಲ್ಸ್ ಭಾರತದಲ್ಲಿನ ಅತ್ಯಂತ ಜನಪ್ರಿಯ ತಿಂಡಿಗಳಲ್ಲಿ ಒಂದಾಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಈ ಮ್ಯಾಗಿಯನ್ನು ತಿನ್ನಲು ಇಷ್ಟಪಡುತ್ತಾರೆ. ಅದೇಷ್ಟೆ ಬಗೆಯ ನೂಡಲ್ಸ್ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ, ಹೆಚ್ಚಿನ ಭಾರತೀಯರು ಮ್ಯಾಗಿ ನೂಡಲ್ಸ್ ಮಾತ್ರ ಇಷ್ಟ ಪಡುತ್ತಾರೆ. ಹಾಗೂ ಅನೇಕರು ಮ್ಯಾಗಿಗೆ ತರಕಾರಿ, ಕಾಳುಗಳು ಹಾಗೂ ಮಸಾಲೆ ಪದಾರ್ಥಗಳನ್ನು ಸೇರಿಸಿ ತಮ್ಮದೇ ಆವೃತ್ತಿಯ ರುಚಿಕರ ಮ್ಯಾಗಿಯನ್ನು ತಯಾರಿಸುತ್ತಾರೆ. ಇನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಬೀದಿ ಬದಿಯ ವ್ಯಾಪಾರಿಗಳು ತಮ್ಮದೇ ಆವೃತ್ತಿಯಲ್ಲಿ ಬೆಣ್ಣೆ, ಮಸಾಲೆ ತರಕಾರಿ, ಚೀಸ್ ಗಳ ಸಂಯೋಜನೆಯೊಂದಿಗೆ ರುಚಿಕರ ಮ್ಯಾಗಿಯನ್ನು ತಯಾರಿಸುವ ವೀಡಿಯೋಗಳು ಹರಿದಾಡುತ್ತಿರುತ್ತವೆ. ಆದರೆ ಇಲ್ಲೊಬ್ಬ ಭೂಪ ವಿಸ್ಕಿಯೊಂದಿಗೆ ತನ್ನದೇ ಆದ ಮ್ಯಾಗಿ ಆವೃತ್ತಿಯನ್ನು ಸಿದ್ಧಪಡಿಸಿದ್ದಾನೆ. ಈ ವಿಲಕ್ಷಣ ಆಹಾರ ತಯಾರಿಕೆಯ ವೀಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ.
ಯಶ್ ಕೆ ಎಕ್ಸ್ಪರಿಮೆಂಟ್ (@yash ke experiments) ಎಂಬ ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ಈ ವಿಸ್ಕಿ-ಮ್ಯಾಗಿ ತಯಾರಿಕೆಯ ವೀಡಿಯೋವನ್ನು ಹರಿಬಿಡಲಾಗಿದೆ. ಈ ವೈರಲ್ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ನೀರಿನ ಬದಲಾಗಿ ಸಾರಾಯಿ ಬಳಸಿಕೊಂಡು ಮ್ಯಾಗಿಯನ್ನು ಬೇಯಿಸುವುದನ್ನು ಕಾಣಬಹುದು. ಆ ವ್ಯಕ್ತಿ ಮೊದಲಿಗೆ ಒಂದು ಪ್ಯಾನ್ ತೆಗೆದುಕೊಂಡು ಅದಕ್ಕೆ ಮ್ಯಾಗಿ ನೂಡಲ್ಸ್ ಹಾಕುತ್ತಾನೆ. ಜೊತೆಗೆ ಒಂದು ಬಾಟಲಿ ಆಲ್ಕೋಹಾಲ್ ಕೂಡಾ ಸೇರಿಸುತ್ತಾನೆ. ಅದನ್ನು ಸ್ವಲ್ಪ ಕುದಿಸಿದ ಬಳಿಕ ಅದಕ್ಕೆ ಮ್ಯಾಗಿ ಮಸಾಲೆ ಹಾಕಿ ಇನ್ನೊಮ್ಮೆ ಚೆನ್ನಾಗಿ ಬೇಯಿಸುತ್ತಾನೆ. ನಂತರ ಮ್ಯಾಗಿ ತಯಾರಿಕೆಯ ಸಂಪೂರ್ಣ ಪ್ರಕ್ರಿಯೆ ಮುಗಿದ ಬಳಿಕ ಈ ವಿಲಕ್ಷಣ ಮ್ಯಾಗಿಯನ್ನು ಸವಿದು ಈ ಮ್ಯಾಗಿ ಯಾವುದೇ ಆಲ್ಕೋಹಾಲ್ ರುಚಿಯನ್ನು ಹೊಂದಿಲ್ಲ ಮತ್ತು ಇದು ಸಾಮಾನ್ಯ ಮ್ಯಾಗಿಯಂತೆಯೇ ಇದೆ ಎಂದು ವೀಕ್ಷಕರಿಗೆ ತಿಳಿಸುತ್ತಾನೆ.
ಇದನ್ನೂ ಓದಿ:Viral Video: ಆನೆ- ಘೇಂಢಾಮೃಗದ ಕಾದಾಟ: ಈ ಕಾಳಗದಲ್ಲಿ ಜಯ ಯಾರಿಗೆ?
ಮ್ಯಾಗಿಯನ್ನು ವಿಸ್ಕಿಯೊಂದಿಗೆ ತಯಾರಿಸುವುದರ ಮುಖ್ಯ ಉದ್ದೇಶವೆಂದರೆ ಅಡುಗೆ ಬೇಯಿಸುವ ಪ್ರಕ್ರಿಯೆಯಲ್ಲಿ ಆಲ್ಕೋಹಾಲ್ ಆವಿಯಾಗುತ್ತದೆಯೇ ಎಂದು ಪರೀಕ್ಷಿಸಲು ಈ ವ್ಯಕ್ತಿ ಬಯಸಿದ್ದನು. ಹಾಗಾಗಿ ಈ ಒಂದು ಪ್ರಯೋಗವನ್ನು ಮಾಡಿದ್ದಾನೆ.
ಈ ವೈರಲ್ ವಿಡಿಯೋ 122 ಸಾವಿರ ವೀಕ್ಷಣೆಗಳನ್ನು ಹಾಗೂ 2.1 ಸಾವಿರ ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಹಲವು ಕಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ಆಹಾರವನ್ನು ವ್ಯರ್ಥಮಾಡುವ ಈ ರೀತಿಯ ವೀಡಿಯೋಗಳನ್ನು ಯಾರೇ ಮಾಡಿದರೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಕಿಡಿ ಕಾರಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಈ ರೀತಿಯ ವೀಡಿಯೋಗಳು ಇಂದಿನ ಸಮಾಜದ ಮಕ್ಕಳ ಮೇಲೆ ಋಣಾತ್ಮಕವಾಗಿ ಪರಿಣಾಮ ಬೀರುತ್ತವೆ’ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ‘ಈ ಮ್ಯಾಗಿಯನ್ನು ನನ್ನ ಸ್ನೇಹಿತನಿಗೆ ನೀಡಿ’ ಎಂದು ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: