ವಸ್ತುಗಳನ್ನು ಖರೀದಿಸುವುದು, ಮಾರಾಟ ಮಾಡುವುದು ಒಂದು ಕಲೆ. ಹಲವರಿಗೆ ಇದೇ ಒಂದು ಉದ್ಯಮ ಕೂಡ. ಅದರಲ್ಲೂ ಸೆಕೆಂಡ್ ಹ್ಯಾಂಡ್ ವಸ್ತುಗಳನ್ನು ಮಾರಾಟ ಮಾಡುವುದು ಒಂದು ಕಲೆ. ಆದರೆ ವಾಹನಗಳಿಗೆ ವರ್ಷ ಕಳೆದಷ್ಟೂ ಬೆಲೆ ಕಡಿಮೆಯಾಗುತ್ತದೆ. ಇಲ್ಲೊಂದು ಅಚ್ಚರಿಯ ಪ್ರಕರಣದಲ್ಲಿ ಅದಕ್ಕೆ ಅಪವಾದವೆನ್ನುವ ವಿಶೇಷ ವಿದ್ಯಮಾನವೊಂದು ವರದಿಯಾಗಿದೆ. ಹೌದು. ಓರ್ವ ವ್ಯಕ್ತಿ ತಮ್ಮ ಹಳೆಯ ಕಾರನ್ನು ಮೂಲ ಬೆಲೆಗಿಂತ ಅಧಿಕ ಮೊತ್ತಕ್ಕೆ ಬೇರೆಯವರಿಗೆ ಮಾರಿದ್ದಾರೆ. ಈ ಪ್ರಕರಣ ಸದ್ಯ ಸಖತ್ ಸುದ್ದಿಯಾಗಿದ್ದು, ವೈರಲ್ (Viral) ಆಗಿದೆ. ಮಾಧ್ಯಮವೊಂದು ಈ ಪ್ರಕರಣದ ಕುರಿತು ವರದಿ ಮಾಡಿದೆ. ಸೀನ್ ಹೋಲಿಸ್ಟರ್ ಎಂಬ ವ್ಯಕ್ತಿ 7 ವರ್ಷಗಳ ಹಿಂದೆ ಹೋಂಡಾ ಕಾರನ್ನು ಖರೀದಿಸಿದ್ದರು. ಇದೀಗ ಸ್ಟಾರ್ಟಪ್ ಕಂಪನಿಯೊಂದಕ್ಕೆ (Startup Company) ಅವರು ತಾವು ಮೊದಲು ಖರೀದಿಸಿದ್ದಕ್ಕಿಂತ ಅಧಿಕ ಮೊತ್ತಕ್ಕೆ ಕಾರನ್ನು ಮಾರಾಟ ಮಾಡಿದ್ದಾರೆ. 2014ರ ಡಿಸೆಂಬರ್‌ನಲ್ಲಿ ಅವರು $ 20,814.80 (ಸುಮಾರು ರೂ. 15.74 ಲಕ್ಷ) ನೀಡಿ ಹೋಂಡಾ ಫಿಟ್ ಕಾರನ್ನು ಖರೀದಿಸಿದ್ದರು. ಇದೀಗ ಕಾರನ್ನು ಕಾರ್ವಾನಾ ಎಂಬ ಸ್ಟಾರ್ಟಪ್ ಕಂಪನಿಯು 2021ರ ಡಿಸೆಂಬರ್‌ನಲ್ಲಿ 20,905 ಡಾಲರ್ಗೆ (ಸುಮಾರು ರೂ. 15.81 ಲಕ್ಷ) ಮಾರಾಟ ಮಾಡಿದ್ದಾರೆ.
ಏಳು ವರ್ಷ ಹಳೆಯದಾಗಿದ್ದರೂ ಕಾರು ಯೋಗ್ಯ ಸ್ಥಿತಿಯಲ್ಲಿದೆ ಎಂದು ಸೀನ್ ಹೋಲಿಸ್ಟರ್ ಹೇಳಿದ್ದಾರೆ. ಅಪಘಾತಗಳಾಗದೇ, ಕಾರು ಸುಸ್ಥಿಯಲ್ಲಿದೆ. ಮೈಲೇಜ್ ಕೂಡ ಉತ್ತಮವಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ‘‘ಬಳಸಿದ ಕಾರುಗಳು ತಮ್ಮ ಮೂಲ ಬೆಲೆಗಿಂತ ಹೆಚ್ಚಿನ ಬೆಲೆಗೆ ಎಂದಿಗೂ ಮಾರಾಟವಾಗುವುದಿಲ್ಲ. ಆದರೆ ಇದು ಅದಕ್ಕೆ ಅಪವಾದ’’ ಎಂದಿದ್ದಾರೆ ಹೋಲಿಸ್ಟರ್.
ವಿಶೇಷವೆಂದರೆ ಕಾರನ್ನು ಖರೀದಿಸಿರುವ ಸ್ಟಾರ್ಟಪ್ ಕಂಪನಿ, ಕಾರನ್ನು ಹೆಚ್ಚು ಪರಾಮರ್ಶಿಸದೇ ಹಣ ಪಾವತಿಸಲು ಒಪ್ಪಿಕೊಂಡಿತ್ತು. ಅಲ್ಲದೇ ಆನ್ಲೈನ್ನಲ್ಲಿ ಚೆಕ್ ಕೂಡ ಬಂದಿತ್ತು. ಮಾತನಾಡಿದ ಕೆಲವೇ ದಿನಕ್ಕೆ ಅಂದರೆ ಡಿಸೆಂಬರ್ 14ರಂದು ಸ್ಟಾರ್ಟಪ್ ಕಂಪನಿಯ ಏಜೆಂಟ್ ಆಗಮಿಸಿದ್ದರು ಎಂದು ಹೋಲಿಸ್ಟರ್ ಮಾಹಿತಿ ನೀಡಿದ್ದಾರೆ.
ಏಜೆಂಟ್ ಕಾರನ್ನು ಖರೀದಿಸಲು ಆಗಮಿಸಿದಾಗ ಕೂಡ ಹೆಚ್ಚಿನ ಪರಾಮರ್ಶೆ ನಡೆಸಲಿಲ್ಲವಂತೆ. ಯಾವುದೇ ಪ್ರಶ್ನೆ ಕೇಳದೇ, ಚೆಕ್ಗೆ ಸಹಿ ಮಾಡಿ ಹೋಲಿಸ್ಟರ್ಗೆ ನೀಡಿದರಂತೆ. ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಹೋಲಿಸ್ಟರ್ ಮೊದಲೇ ಸಿದ್ಧಪಡಿಸಿಟ್ಟುಕೊಂಡಿದ್ದರಂತೆ. ಸ್ಟಾರ್ಟಪ್ ನೀಡಿದ ಚೆಕ್ನ ಹಣ ಕ್ರಿಸ್ಮಸ್ಗೂ ಹಿಂದಿನ ದಿನ ಹೋಲಿಸ್ಟರ್ ಖಾತೆಗೆ ಜಮಾವಣೆಯಾಗಿತ್ತು. ಈ ಮೂಲಕ 2022ರ ಕ್ರಿಸ್ಮಸ್ನ್ನು 7 ವರ್ಷಗಳ ಹಳೆಯ ಕಾರನ್ನು ಮೂಲಬೆಲೆಗಿಂತ ಹೆಚ್ಚಿನದಕ್ಕೆ ಮಾರಾಟ ಮಾಡಿ ಭರ್ಜರಿಯಾಗಿ ಅವರು ಆಚರಿಸಿದ್ದರು.
ಇದನ್ನೂ ಓದಿ:
₹ 200 ಕೋಟಿ ಮೌಲ್ಯದ 2 ಲಕ್ಷ ಕೆಜಿ ಗಾಂಜಾಕ್ಕೆ ಬೆಂಕಿ ಹಚ್ಚಿ ನಾಶ ಮಾಡಿದ ಆಂಧ್ರಪ್ರದೇಶ ಪೊಲೀಸ್; ವಿಡಿಯೊ ನೋಡಿ
ಟೀಕಿಸುವ ಭರದಲ್ಲಿ ತಪ್ಪು ಮಾಡಬೇಡಿ; ಶಶಿ ತರೂರ್ ಇಂಗ್ಲಿಷ್ ತಿದ್ದಿದ ಕೇಂದ್ರ ಸಚಿವ ರಾಮದಾಸ್ ಅಠಾವಳೆ