ಒತ್ತಡದ ಕೆಲಸದ ನಡುವೆಯೇ ನಿರಾಶ್ರಿತ ಬಾಲಕನ ಓದಿಗೆ ಸಹಾಯ ಮಾಡುತ್ತಿರುವ ಟ್ರಾಫಿಕ್ ಪೊಲೀಸ್; ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆ
Viral | Koltaka | Traffic Police: ತಮ್ಮ ಬ್ಯುಸಿ ಕೆಲಸದ ನಡುವೆಯೂ ಪೊಲೀಸ್ ಒಬ್ಬರು ರಸ್ತೆಯ ಬದಿಯ ಮರವೊಂದರ ನೆರಳಿನಲ್ಲಿ ಬರೆಯುತ್ತಿದ್ದ ಬಾಲಕನೊಂದಿಗೆ ಸಂವಹನ ನಡೆಸುತ್ತಾ ವಿದ್ಯಾರ್ಥಿಗೆ ಸಹಾಯ ಮಾಡಿದ್ದಾರೆ. ಕರ್ತವ್ಯದ ನಡುವೆಯೂ ಅವರ ಕಾರ್ಯವೈಖರಿ ಎಲ್ಲರ ಮನಗೆದ್ದಿದೆ.
ಕೋಲ್ಕತ್ತಾದ ಟ್ರಾಫಿಕ್ ಪೋಲೀಸ್ (Kolkata Traffic Police) ಓರ್ವರು ನಿರಾಶ್ರಿತ ಮಗುವಿನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುತ್ತಿರುವ ಫೋಟೋವೊಂದು ವೈರಲ್ (Viral News) ಆಗಿದೆ. ತಮ್ಮ ಬ್ಯುಸಿ ಕೆಲಸದ ನಡುವೆಯೂ ಪೊಲೀಸ್ ಒಬ್ಬರು ರಸ್ತೆಯ ಬದಿಯ ಮರವೊಂದರ ನೆರಳಿನಲ್ಲಿ ಬರೆಯುತ್ತಿದ್ದ ಬಾಲಕನೊಂದಿಗೆ ಸಂವಹನ ನಡೆಸುತ್ತಾ ವಿದ್ಯಾರ್ಥಿಗೆ ಸಹಾಯ ಮಾಡಿದ್ದಾರೆ. ಕರ್ತವ್ಯದ ನಡುವೆ ಅವರ ಕಾರ್ಯವೈಖರಿ ಎಲ್ಲರ ಮನಗೆದ್ದಿದೆ. ಕೋಲ್ಕತ್ತಾದ ಆಗ್ನೇಯ ಟ್ರಾಫಿಕ್ ಗಾರ್ಡ್‌ನ ಪ್ರಕಾಶ್ ಘೋಷ್ ಎಂಟು ವರ್ಷದ ಬಾಲಕನಿಗೆ ಸಹಾಯ ಮಾಡಿದ ಪೊಲೀಸ್ ಆಗಿದ್ದಾರೆ. ಪಾದಚಾರಿ ಮಾರ್ಗದ ಮೇಲೆ ಇರಿಸಲಾದ ಪ್ಲಾಸ್ಟಿಕ್ ಮೇಲೆ ಹುಡುಗ ಕುಳಿತಿದ್ದಾನೆ. ಪೊಲೀಸ್ ಅಲ್ಲೇ ಎದುರಿಗೆ ನಿಂತಿದ್ದಾರೆ. ಆ ಬಾಲಕ ಮರದ ನೆರಳಿನಲ್ಲಿ ಕುಳಿತು ತನ್ನ ನೋಟ್ಬುಕ್ನಲ್ಲಿ ಬರೆಯುತ್ತಿದ್ದಾನೆ. ಬಾಲಕನ ಸ್ಕೂಲ್ ಬ್ಯಾಗ್ ಮತ್ತು ಪೆನ್ಸಿಲ್ ಕೂಡ ಚಿತ್ರದಲ್ಲಿ ಕಾಣಿಸುತ್ತಿದ್ದು, ಶಾಲೆ ಮುಗಿಸಿ ಬಂದ ನಂತರ ಬಾಲಕ ಬರೆಯುತ್ತಿದ್ದಾನೆ ಎಂದು ಹೇಳಲಾಗಿದೆ.
ಬಾಲಕನ ಹಿನ್ನಲೆ:
ಘೋಷ್ ಅವರಿಗೆ ಹುಡುಗ ಮತ್ತು ಅವನ ತಾಯಿಯನ್ನು ಒಂದು ವರ್ಷದಿಂದ ಬಲ್ಲವರಾಗಿದ್ದಾರೆ. ರಸ್ತೆ ಬದಿಯ ಅಂಗಡಿಯೊಂದರಲ್ಲಿ ಬಾಲಕನ ತಾಯಿ ಕೆಲಸ ಮಾಡುತ್ತಾರೆ. ತಮ್ಮ ಮಗನನ್ನು ಸರ್ಕಾರಿ ಶಾಲೆಗೆ ಸೇರಿಸಲು ಅವರು ಹರಸಾಹಸ ಪಟ್ಟಿದ್ದಾರೆ. ವಾಸಿಸಲು ನಿವಾಸವಿಲ್ಲದ ಕಾರಣ, ತಾಯಿ ಹಾಗೂ ಮಗ ಪಾದಚಾರಿ ಮಾರ್ಗದಲ್ಲಿಯೇ ನೆಲೆಯೂರಿದ್ದಾರೆ. ‘ತಮ್ಮ ಮಗ ಬಡತನದ ಸಂಕೋಲೆಗಳನ್ನು ಮುರಿದು ಪ್ರಪಂಚದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಾನೆ ಎಂಬ ಭರವಸೆಯನ್ನು ತಾಯಿ ಇಟ್ಟುಕೊಂಡಿದ್ದಾರೆ’ ಎಂದು ಕೋಲ್ಕತ್ತಾ ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳಲಾಗಿದೆ.
ಹುಡುಗ ಅಧ್ಯಯನದಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದಾನೆ ಎಂದು ತಾಯಿ ಪೊಲೀಸರಿಗೆ ತಿಳಿಸಿದ್ದರಂತೆ. ಇದರಿಂದ ಘೋಷ್ ಅವರು ಹುಡುಗನ ಅಧ್ಯಯನಕ್ಕೆ ಸಹಾಯ ಮಾಡುವ ಭರವಸೆಯನ್ನು ನೀಡಿದ್ದರು. ಅದರಂತೆ ಬಾಲಕನಿಗೆ ಅವರು ಶಿಕ್ಷಣದಲ್ಲಿ ಸಹಾಯ ಮಾಡುತ್ತಿದ್ದಾರೆ.
ಘೋಷ್ ಹೇಗೆ ಬಾಲಕನಿಗೆ ಸಹಾಯ ಮಾಡುತ್ತಾರೆ?
ಘೋಷ್ ಆ ಬಾಲಕ ಹಾಗೂ ತಾಯಿ ಇದ್ದ ಪ್ರದೇಶದಲ್ಲಿ ಟ್ರಾಫಿಕ್ ಅನ್ನು ನಿರ್ವಹಿಸುತ್ತಿದ್ದಾಗ, ಹುಡುಗನ ಹೋಂ ವರ್ಕನ್ನು ಪರಿಶೀಲಿಸುತ್ತಾರೆ. ಜತೆಗೆ ಕಾಗುಣಿತ, ಉಚ್ಛಾರಣೆ ಮೊದಲಾದವುಗಳನ್ನು ಸರಿಪಡಿಸುತ್ತಾರೆ. ಅಲ್ಲದೇ ಬಾಲಕನಿಗೆ ಮನೆಕೆಲಸ ಪೂರೈಸಲು ಸಹಾಯ ಮಾಡುತ್ತಾರೆ.
‘ಘೋಷ್ ಅವರು ಟ್ರಾಫಿಕ್ ಕೆಲಸವನ್ನು ನಿರ್ವಹಿಸಿದ ನಂತರ ಬಾಲಕನಿಗೆ ಕಲಿಸುತ್ತಾರೆ. ಅವರು ಸಮವಸ್ತ್ರವನ್ನು ಧರಿಸುವುದರಿಂದ ಕುಳಿತುಕೊಳ್ಳಲು ಕಷ್ಟವಾಗುತ್ತದೆ. ಹೀಗಾಗಿ ನಿಂತುಕೊಂಡೇ ಬಾಲಕನಿಗೆ ಹೇಳಿಕೊಡುತ್ತಾರೆ. ಅಲ್ಲದೇ ಪಾಠ ಮಾಡುವಾಗ ಕೋಲು ಕೂಡ ಅವರ ಜತೆಯಲ್ಲಿರುತ್ತದೆ’ ಎಂದು ಪೋಸ್ಟ್ನಲ್ಲಿ ವಿವರಿಸಲಾಗಿದೆ. ಅದನ್ನು ಚಿತ್ರದಲ್ಲೂ ಕಾಣಬಹುದು.
ಈ ಬಗ್ಗೆ ಹಂಚಿಕೊಂಡ ಪೋಸ್ಟ್ ಇಲ್ಲಿದೆ:
ಸದ್ಯ ಈ ಪೋಸ್ಟ್ ವೈರಲ್ ಆಗಿದೆ. ನೆಟ್ಟಿಗರು ಘೋಷ್ ಅವರ ಕೆಲಸಕ್ಕೆ ಶಹಬ್ಬಾಸ್ ಎಂದಿದ್ದು, ಅವರ ಗುಣವನ್ನು ಕೊಂಡಾಡಿದ್ದಾರೆ. ಬಹಳಷ್ಟು ಜನರು ಆ ವಿದ್ಯಾರ್ಥಿಯ ಭವಿಷ್ಯಕ್ಕೆ ಶುಭಹಾರೈಸಿದ್ದಾರೆ.
ಇದನ್ನೂ ಓದಿ: ಸ್ಕಾಟ್ಲೆಂಡ್ನಲ್ಲಿ 48 ಮಹಿಳಾ ರೋಗಿಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಭಾರತ ಮೂಲದ ವೈದ್ಯ; 35 ವರ್ಷ ಮಾಡಿದ್ದು ಇದೇ ಕೆಲಸ
Viral: ಗೂಗಲ್ಮ್ಯಾಪ್ನಲ್ಲಿ ಕಾಣಿಸಿಕೊಂಡ ಕೈ-ಕಾಲು, ತಲೆಯೇ ಇಲ್ಲದ ಆಕೃತಿ; ಬೆಚ್ಚಿಬಿದ್ದ ಜನ