ವಾರ್ಡ್ರೋಬ್ನಲ್ಲಿ ಬಟ್ಟೆಗಳನ್ನು ಜೋಡಿಸುವುದು ಒಂದು ಕಲೆ ಮಾತ್ರವಲ್ಲ, ಉದ್ಯೋಗವೂ ಹೌದು! ಅದು ಹೇಗೆ ಅಂತೀರಾ? ಇಲ್ಲೊಂದು ಅಚ್ಚರಿಯ ಕತೆಯನ್ನು ಬ್ರಿಟನ್ನ ಡೈಲಿ ಮೇಲ್ ವರದಿ ಮಾಡಿದೆ. 19 ವರ್ಷದ ಯುವತಿಯೋರ್ವಳು ಅಸ್ತವ್ಯಸ್ತವಾಗಿರುವ ವಾರ್ಡ್ರೋಬ್ಗಳನ್ನು ಸರಿಪಡಿಸಿಯೇ ತನ್ನ ಸಂಪಾದನೆ ಮಾಡುತ್ತಿದ್ದಾಳೆ. ಅದಕ್ಕೆ ದೊಡ್ಡ ಮೊತ್ತವನ್ನೂ ಪಡೆಯುತ್ತಿದ್ದಾಳೆ. ಬ್ರಿಟನ್ನ ಲೀಸೆಸ್ಟರ್ನ ಯಲ್ಲಾ ಮೆಕ್ಮಾಹನ್ ಈ ವಿಶಿಷ್ಟ ಸಾಧನೆಯಿಂದ ಗುರುತಿಸಿಕೊಂಡಿರುವ ಯುವತಿ. ಪ್ರತೀದಿನ ಮೂರರಿಂದ ಒಂಬತ್ತು ಗಂಟೆಗಳ ಕಾಲ ಸಮಯವನ್ನು ಅವರು ಕೆಲಸಕ್ಕೆ ಮುಡಿಪಾಗಿಡುತ್ತಾರಂತೆ. ಅದರಲ್ಲಿ ಅವರು ಅಸ್ತವ್ಯಸ್ತವಾಗಿರುವ ವಾರ್ಡ್ರೋಬ್ಅನ್ನು ಸರಿಪಡಿಸುವುದು ಹಾಗೂ ಬಟ್ಟೆಗಳನ್ನು ಬಣ್ಣದ ಆಧಾರದಲ್ಲಿ ಜೋಡಿಸಿಡುವ ಕೆಲಸ ಮಾಡುತ್ತಾರೆ. ಇದರಿಂದಲೇ ಸಂಪಾದನೆ ಮಾಡುತ್ತಿರುವ ಯಲ್ಲಾ, ಪ್ರತಿ ತಿಂಗಳು 500 ಯೂರೋ ಅರ್ಥಾತ್ ಭಾರತೀಯ ಕರೆನ್ಸಿಯಲ್ಲಿ ಸುಮಾರು ₹ 50,000 ರೂ ಗಳಿಸುತ್ತಿದ್ದಾರೆ.
ಈ ಕುರಿತು ಡೈಲಿ ಮೈಲ್ ಜತೆ ಮಾಹಿತಿ ಹಂಚಿಕೊಂಡಿರುವ ಯಲ್ಲಾ, ‘‘ನನಗೆ ಎಲ್ಲವನ್ನೂ ಅಚ್ಚುಕಟ್ಟಾಗಿರಿಸುವುದೆಂದರೆ ಇಷ್ಟ. ಆದ್ದರಿಂದ ಇಡೀ ದಿನ ಬೇಕಾದರೂ ಈ ಕೆಲಸ ಮಾಡುತ್ತಿರಬಲ್ಲೆ’’ ಎಂದು ತಮ್ಮ ಕಾರ್ಯವೈಖರಿಯ ಬಗ್ಗೆ ಹೇಳಿಕೊಂಡಿದ್ದಾರೆ. ಒಂದು ವಾರ್ಡ್ರೋಬ್ ಅಚ್ಚುಕಟ್ಟಾಗಿ ಜೋಡಿಸಲು ಎಷ್ಟು ಸಮಯ ಹಿಡಿಯುತ್ತದೆ ಎಂಬುದನ್ನು ವಿವರಿಸಿರುವ ಯುವತಿ, ‘‘ಸುಮಾರು ಮೂರು ಗಂಟೆಗಳಲ್ಲಿ ಒಂದು ವಾರ್ಡ್ರೋಬ್ ಜೋಡಿಸಬಹುದು. ಸಾಮಾನ್ಯವಾಗಿ ವಾರ್ಡ್ರೋಬ್ ಗಾತ್ರದ ಮೇಲೆ ಅದು ನಿರ್ಧಾರವಾಗುತ್ತದೆ. ಈ ಹಿಂದೆ ಒಂದು ವಾರ್ಡ್ರೋಬ್ಗೆ ಒಂಬತ್ತು ಗಂಟೆ ತೆಗೆದುಕೊಂಡಿದ್ದೆ. ಕೆಲಸ ಬಹಳ ಖುಷಿ ಕೊಡುವ ಕಾರಣ, ಸಮಯ ನನಗೆ ಮುಖ್ಯವಾಗುವುದಿಲ್ಲ’’ ಎಂದಿದ್ದಾರೆ.
ಯಲ್ಲಾ ವಾರ್ಡ್ರೋಬ್ ಅಚ್ಚುಕಟ್ಟುಗೊಳಿಸಲು ಪಡೆಯುವ ಹಣ ಎಷ್ಟು?
ಯಲ್ಲಾ ತಮ್ಮ ಕಾರ್ಯಕ್ಕೆ ತಕ್ಕಷ್ಟು ಸಂಭಾವನೆಯನ್ನೂ ಪಡೆಯುತ್ತಾರೆ. ಪ್ರತಿ ಗಂಟೆಯ ಕೆಲಸದ ಮೇಲೆ ಅವರ ಸಂಭಾವನೆ ನಿರ್ಧಾರವಾಗುತ್ತದೆ. ಪ್ರಸ್ತುತ ಅವರು ಪ್ರತೀ ಗಂಟೆಗೆ ಸುಮಾರು 15ರಿಂದ 20 ಯೂರೋ ಅರ್ಥಾತ್ ಭಾರತೀಯ ಕರೆನ್ಸಿಯಲ್ಲಿ ಸುಮಾರು ₹ 1,500 ರಿಂದ ₹ 2,000ದವರೆಗೆ ಸಂಭಾವನೆ ಪಡೆಯುತ್ತಾರೆ.
ಯಲ್ಲಾ ಮೆಕ್ಮಾಹನ್ಗೆ ವಾರ್ಡ್ರೋಬ್ ಕೆಲಸಕ್ಕೆ ಪ್ರೇರಣೆ ನೀಡಿದ್ದು ಕುಟುಂಬ ಹಾಗು ಸ್ನೇಹಿತರಂತೆ. ಗ್ರಾಹಕರ ಮನೆಗೆ ಹೋದಾಗ ಅವರ ಎಲ್ಲಾ ಬಟ್ಟೆಗಳನ್ನು ಅಚ್ಚುಕಟ್ಟುಗೊಳಿಸುತ್ತೇನೆ. ನಂತರ ಬೇಡವಾದ ಬಟ್ಟೆಗಳನ್ನು ತೆಗೆದಿಡುತ್ತಾನೆ. ಬಹುತೇಕ ಬಾರಿ ಗ್ರಾಹಕರಿಗೆ ಇಷ್ಟೊಂದು ಬೇಡದ ಬಟ್ಟೆಗಳು ವಾರ್ಡ್ರೋಬ್ನಲ್ಲಿತ್ತೇ ಎಂದು ಆಶ್ಚರ್ಯವಾಗುತ್ತದೆ ಎಂದಿದ್ದಾರೆ ಯಲ್ಲಾ.
ಅಲ್ಲದೇ ಗ್ರಾಹಕರಿಗೆ ಬೇಡದ ಬಟ್ಟೆಗಳನ್ನು ಅಗತ್ಯವಿರುವವರಿಗೆ ತಲುಪಿಸುವ ವ್ಯವಸ್ಥೆಯನ್ನೂ ಯಲ್ಲಾ ಮಾಡುತ್ತಾರೆ. ಪ್ರಸ್ತುತ ಯಲ್ಲಾ ಬಳಿ 20 ಖಾಯಂ ಗ್ರಾಹಕರಿದ್ದು, ಅವರ ಮನೆಗೆ ಪ್ರತಿ 2 ವಾರಕ್ಕೆ ಹೋಗಿ ವಾರ್ಡ್ರೋಬನ್ನು ಅಚ್ಚುಕಟ್ಟುಗೊಳಿಸುತ್ತಾರೆ.
ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಾರ್ಡ್ರೋಬ್ ಮೊದಲು ಹೇಗಿತ್ತು ಹಾಗೂ ನಂತರ ಏನಾಯ್ತು ಎಂಬ ವಿಡಿಯೋಗಳನ್ನು ಯಲ್ಲಾ ಹಂಚಿಕೊಳ್ಳುತ್ತಿರುತ್ತಾರೆ. ಈ ಕೆಲಸ ಮನಸ್ಸಿಗೆ ಬಹಳ ಸಮಾಧಾನ ನೀಡುತ್ತದೆ ಎನ್ನುತ್ತಾರೆ ಅವರು.
ಇದನ್ನೂ ಓದಿ:
Bank Robbery: ಕೈಯಲ್ಲಿ ಚಾಕು, ಮಂಕಿ ಕ್ಯಾಪ್ ಧರಿಸಿ ಬ್ಯಾಂಕ್ಗೆ ನುಗ್ಗಿದ್ದವ ಮಾಡಿದ್ದೇನು? ವಿಡಿಯೋ ನೋಡಿ