ಪುಣೆಯ 42 ವರ್ಷ ಮಹಿಳೆಯೊಬ್ಬರು ತಾವು ಮಾಡಿದ ಒಂದು ಒಳ್ಳೆಯ ಕೆಲಸದಿಂದ ಭರ್ಜರಿ ಸುದ್ದಿಯಾಗುತ್ತಿದ್ದಾರೆ. ಬಸ್ನಲ್ಲಿ ಹೋಗುತ್ತಿದ್ದಾಗ, ಆ ಬಸ್ನ ಚಾಲಕ ತೀವ್ರ ಅಸ್ವಸ್ಥರಾಗುತ್ತಾರೆ. ಆಗ ಈ ಮಹಿಳೆ ತಮ್ಮ ಸಮಯಪ್ರಜ್ಞೆಯಿಂದ ಬಸ್ ಓಡಿಸಿ, ಚಾಲಕನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಅದರೊಂದಿಗೆ ಪ್ರಯಾಣಿಕರನ್ನೂ ಅಪಾಯದಿಂದ ಪಾರು ಮಾಡಿದ್ದಾರೆ. ಮಹಾರಾಷ್ಟ್ರದ ಪುಣೆಯಲ್ಲಿ ಜನವರಿ 7ರಂದು ಘಟನೆ ನಡೆದಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಸಿಕ್ಕಾಪಟೆ ವೈರಲ್ ಆಗುತ್ತಿದೆ.
ಮಹಿಳೆಯ ಹೆಸರು ಯೋಗಿತಾ ಸಾತವ್. ಯೋಗಿತಾ ಮತ್ತು ಇತರ ಮಹಿಳೆಯರು, ಮಕ್ಕಳೊಂದಿಗೆ ಪುಣೆಯ ಸಮೀಪ ಇರುವ ಶಿರೂರಿನ ಕೃಷಿ ಪ್ರವಾಸೋದ್ಯಮ ಕೇಂದ್ರಕ್ಕೆ ಪಿಕ್ನಿಕ್ಗೆ ತೆರಳಿದ್ದರು. ಈ ಪಿಕ್ನಿಕ್ ಮುಗಿಸಿ ವಾಪಸ್ ಬರುತ್ತಿದ್ದ ವೇಳೆ ಚಾಲಕ ಅಸ್ವಸ್ಥನಾಗಿದ್ದಾನೆ. ಅಷ್ಟೇ ಅಲ್ಲ, ನಿರ್ಜನ ಪ್ರದೇಶವೊಂದರಲ್ಲಿ ಮಿನಿ ಬಸ್ ನಿಲ್ಲಿಸಿ ಪ್ರಜ್ಞೆ ತಪ್ಪಿದ್ದಾನೆ. ಹೀಗೆ, ಚಾಲಕ ಮೂರ್ಛೆ ಹೋದಕೂಡಲೇ ಮುಂದೇನು ಮಾಡಬೇಕು ಎಂದು ತಿಳಿಯದೆ ಬಸ್ನಲ್ಲಿದ್ದ ಮಕ್ಕಳು, ಮಹಿಳೆಯರು ಗಾಬರಿಯಾಗಿದ್ದಾರೆ. ಕೆಲವರಂತೂ ಅಳಲೂ ಶುರು ಮಾಡಿದ್ದರು. ಆದರೆ ಯೋಗಿತಾ, ಕೂಡಲೇ ತಾವೇ ಮುಂದಾಗಿ ಬಸ್ ಓಡಿಸಿದ್ದಾರೆ. ಸುಮಾರು 10 ಕಿಮೀ ದೂರ ಬಸ್ ಡ್ರೈವ್ ಮಾಡಿ, ಚಾಲಕನನ್ನು ಆಸ್ಪತ್ರೆಗೆ ಸೇರಿಸಿದ ಅವರು, ಬಳಿಕ ಉಳಿದ ಪ್ರಯಾಣಿಕರನ್ನು ಅವರವರ ಮನೆಗಳಿಗೆ ಬಿಟ್ಟಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಯೋಗಿತಾ, ನನಗೆ ಕಾರು ಡ್ರೈವ್ ಮಾಡುವುದು ಗೊತ್ತಿತ್ತು. ಅದೇ ಧೈರ್ಯದ ಮೇಲೆ ಈ ಬಸ್ ಓಡಿಸಲು ಮುಂದಾದೆ. ಎಲ್ಲಕ್ಕಿಂತ ಮುಖ್ಯವಾಗಿ ಚಾಲಕನಿಗೆ ಮೊದಲು ಚಿಕಿತ್ಸೆ ಕೊಡಿಸಬೇಕಿತ್ತು. ಹಾಗಾಗಿ ಮೊದಲು ಒಂದು ಆಸ್ಪತ್ರೆಗೆ ಹೋದೆವು ಎಂದು ಹೇಳಿದ್ದಾರೆ. ಹೀಗೆ, ಚಾಲಕನ ಜೀವ ಉಳಿಸಿ, ಉಳಿದ ಪ್ರಯಾಣಿಕರನ್ನೂ ಸುರಕ್ಷಿತ ಮಾಡಿದ ಯೋಗಿತಾರ ಬಗ್ಗೆ ನೆಟ್ಟಿಗರು ಅಪಾರ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ.
#Pune woman drives the bus to take the driver to hospital after he suffered a seizure (fit) on their return journey. #Maharashtra pic.twitter.com/Ad4UgrEaQg
— Ali shaikh (@alishaikh3310) January 14, 2022
ಇದನ್ನೂ ಓದಿ: Viral Video: 63.7 ಕೆಜಿ ಜೇನುನೊಣಗಳನ್ನು ಮೈಮೇಲೆ ಬಿಟ್ಟುಕೊಂಡು ದಾಖಲೆ ನಿರ್ಮಿಸಿದ ವ್ಯಕ್ತಿ
Published On - 3:06 pm, Sun, 16 January 22