
ದುಡಿದು ತಿನ್ನುವ ಛಲವಿದ್ದರೆ ವಯಸ್ಸು ಲೆಕ್ಕಕ್ಕೆ ಬರಲ್ಲ. ಮಕ್ಕಳು ನೋಡಿಕೊಳ್ಳಬೇಕಾದ ವಯಸ್ಸಿನಲ್ಲಿ ತಮ್ಮ ದುಡಿಮೆಯನ್ನೇ ಜೀವನಕ್ಕಾಗಿ ನೆಚ್ಚಿಕೊಂಡ ಹಿರಿಜೀವಗಳನ್ನು ಕಂಡಾಗ ಕಣ್ಣಂಚಲಿ ಕಣ್ಣೀರು ಬರುತ್ತದೆ. ವೃದ್ಧೆಯೊಬ್ಬರು (old woman) ಕಡಲೆಕಾಯಿ ಮಾರಿ ಅದರಿಂದ ಬಂದ ಹಣದಿಂದಲೇ ಜೀವನ ಸಾಗಿಸುತ್ತಿದ್ದಾರೆ. ಬರುವ ಅಲ್ಪ ದುಡ್ಡನ್ನೇ ತನ್ನ ಖರ್ಚಿಗಾಗಿ ಇಟ್ಟುಕೊಳ್ಳುವ ಈ ಅಜ್ಜಿಯ ಬದುಕಿನ ಕಥೆ ಕಣ್ಣಲ್ಲಿ ನೀರು ತರಿಸುತ್ತದೆ. ಯುವಕನೊಬ್ಬ ಈ ವೃದ್ಧೆಯನ್ನು ಮಾತನಾಡಿಸಿ ವಿಡಿಯೋ ಮಾಡಿದ್ದಾನೆ.
spreadkindness77 ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋಗೆ ಈ ವಯಸ್ಸಿನಲ್ಲಿ ಇನ್ನೂ ದುಡಿಯುತ್ತಾರೆ. ನನ್ನ ಮನಸ್ಸು ಮೌನವಾಗಿರಲಿಲ್ಲ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ವಿಡಿಯೋದಲ್ಲಿ ಯುವಕನೊಬ್ಬ ಕಡಲೆಕಾಯಿ ಮಾರಿ ಜೀವನ ನಡೆಸುತ್ತಿರುವ ಅಜ್ಜಿಯನ್ನು ಮಾತನಾಡಿಸುವ ಪ್ರಯತ್ನ ಮಾಡಿದ್ದಾನೆ. ನನ್ನ ಹೆಸರು ಮಲ್ಲಮ್ಮ. ನನ್ನ ಊರು ಯಾದಗಿರಿ. ನನ್ನ ಗಂಡ ಇದ್ದ ಜಮೀನು ಮಾಡಿ ಸತ್ತೋದ ಎಂದು ಹೇಳುತ್ತಿರುವುದನ್ನು ನೋಡಬಹುದು. ಊಟ ತಿಂಡಿ ಎಲ್ಲಾ ಬಿಟ್ಟು ದಿನಕ್ಕೆ ನೂರು ರೂಪಾಯಿ ಉಳಿಯುತ್ತದೆ ಎಂದು ಅಜ್ಜಿ ವಿಡಿಯೋದಲ್ಲಿ ಹೇಳಿದ್ದಾರೆ. ಮಕ್ಕಳ ಬಗ್ಗೆ ವಿಚಾರಿಸಿದಾಗ ತನಗೆ ಮೂರು ಗಂಡು ಮಕ್ಕಳು ಮೂರು ಹೆಣ್ಣು ಮಕ್ಕಳು ಎಂದು ಹೇಳಿರುವುದನ್ನು ನೋಡಬಹುದು. ಆ ಬಳಿಕ ಈ ಯುವಕನು ಅಜ್ಜಿಗೆ ಹಣ್ಣು ತಂದು ಕೊಟ್ಟು, ಕೈಯಲ್ಲಿ ಒಂದಿಷ್ಟು ಹಣವಿಟ್ಟಿರುವುದನ್ನು ನೋಡಬಹುದು. ಭಾವುಕರಾದ ಅಜ್ಜಿಯೂ ಈ ಯುವಕನಿಗೆ ಕೈ ಮುಗಿದು ಕೃತಜ್ಞತೆ ಸಲ್ಲಿಸಿರುವುದನ್ನು ಕಾಣಬಹುದು.
ಇದನ್ನೂ ಓದಿ: ಇಳಿ ವಯಸ್ಸಿನಲ್ಲೂ ದುಡಿದು ತಿನ್ನುವ ಛಲ, ಅಜ್ಜಿಯ ಕೈರುಚಿಗೆ ಗ್ರಾಹಕರು ಫಿದಾ
ಈ ವಿಡಿಯೋ ಅರವತ್ತೇಳು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಒಂದೊತ್ತು ಕೂಳಿಗಷ್ಟೇ ಸ್ವಾಭಿಮಾನದಿಂದ ದುಡಿದು ತಿಂತಾರೆ ಎಂದು ಹೇಳಿದ್ದಾರೆ. ಮತ್ತೊಬ್ಬರು ನೀವು ಮಾಡಿದ್ದು ಸಣ್ಣ ಸಹಾಯ ಇರಬಹುದು. ಆದರೆ ಆ ಅಜ್ಜಿಯ ಮನಸ್ಸಿನಲ್ಲಿ ಮನೆ ಮಾಡಿದ್ದೀರಾ. ಈ ವಿಡಿಯೋ ನೋಡಿ ಸಾರ್ಥಕ ಆಯ್ತು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಪಾಪ ಅಜ್ಜಿ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ