Viral Video : ಗುರಗ್ರಾಂನ ಪಾಲಮ್ ವಿಹಾರ್ನ ಜಿಲೇ ಸಿಂಗ್ ಕಾಲೊನಿಯಲ್ಲಿ ಶೇರು ಎಂಬ ವರನು ಸ್ವೀಟಿ ಎಂಬ ವಧುವನ್ನು ವರಿಸಿದ್ದಾನೆ. ಭಾರತೀಯ ವಿವಾಹ ಪದ್ಧತಿಯಂತೆ ಮದುವೆಯ ಎಲ್ಲಾ ಶಾಸ್ತ್ರಗಳನ್ನು ವರ ಮತ್ತು ವಧುವಿನ ಪೋಷಕರು ನೆರವೇರಿಸಲಾಗಿದೆ. ಅಕ್ಕಪಕ್ಕದವರೆಲ್ಲ ಪ್ರೀತಿ ಮತ್ತು ಕುತೂಹಲದಿಂದ ಮದುವೆಯಲ್ಲಿ ಭಾಗಿಯಾಗಿದ್ದಾರೆ. ವರ ಮತ್ತು ವಧುವಿಗೆ ಬೇಕಾದ ಬಟ್ಟೆಬರೆ, ಶೃಂಗಾರ ಸಾಧನ, ಆಭರಣಗಳು, ಗೃಹೋಪಯೋಗಿ ವಸ್ತುಗಳನ್ನೆಲ್ಲ ಖರೀದಿಸಲಾಗಿದೆ. ಮದುವೆ ಮಂಟಪವನ್ನು ಖುದ್ದಾಗಿ ವರನ ತಾಯಿಯೇ ಸಿಂಗರಿಸಿದ್ದಾಳೆ.
#WATCH via ANI Multimedia | ‘Sheru weds Sweety; Neighbourhood comes alive amid ‘furry’ wedding festivities in Gurugram, Haryana.https://t.co/60mW9P4V5d
ಇದನ್ನೂ ಓದಿ— ANI (@ANI) November 14, 2022
ಸ್ವೀಟಿಯ ಪೋಷಕಿ ಸವಿತಾ, ‘ನನ್ನ ಗಂಡ ನಿತ್ಯವೂ ದೇವಸ್ಥಾನದ ಬಳಿ ಇರುವ ನಾಯಿಗಳಿಗೆ ಆಹಾರ ಕೊಡುವ ಅಭ್ಯಾಸ ರೂಢಿಸಿಕೊಂಡಿದ್ದರು. ಹೀಗೇ ಒಂದು ದಿನ ಅವರು ಮನೆಗೆ ಬರುವಾಗ ಒಂದು ನಾಯಿ ಅವರನ್ನು ಹಿಂಬಾಲಿಸಿತು. ಹೇಗೂ ನಮಗೆ ಮಕ್ಕಳಿದ್ದಿಲ್ಲ. ಅಂದಿನಿಂದ ಆ ನಾಯಿ ಎಂದರೆ ಸ್ವೀಟಿಯೇ ನಮ್ಮ ಮಗಳಾದಳು. ಸ್ವೀಟಿಗೊಂದು ಮದುವೆ ಮಾಡಬೇಕೆಂಬ ಆಲೋಚನೆ ಹೊಳೆಯಿತು. ಪಕ್ಕದ ಮನೆಯಲ್ಲಿಯೇ ಶೇರು ಎಂಬ ಗಂಡುನಾಯಿ ಇತ್ತು. ಅವನ ಪೋಷಕರೊಂದಿಗೆ ಮದುವೆ ಪ್ರಸ್ತಾಪ ಮಾಡಲಾಗಿ ಅವರು ಒಪ್ಪಿದರು. ಕೊನೆಗೆ ನಾಲ್ಕು ದಿನಗಳಲ್ಲಿ ಮದುವೆಯ ಏರ್ಪಾಡನ್ನು ಮಾಡಿಕೊಂಡೆವು.’
ಈ ಮದುವೆಯ ಏರ್ಪಾಡನ್ನು ನೋಡಿದ ಯಾರಿಗೂ ಇದು ನಾಯಿಗಳಿಗಾಗಿ ಮಾಡಿದ ಏರ್ಪಾಡು ಎಂದು ಅನ್ನಿಸಲು ಖಂಡಿತ ಸಾಧ್ಯವಿಲ್ಲ. ಅಷ್ಟು ಆಸ್ಥೆಯಿಂದ ಪ್ರತಿಯೊಂದನ್ನೂ ಒಪ್ಪ ಮಾಡಲಾಗಿದೆ. ಸಂಭ್ರಮದ ವಾತಾವರಣ ಸೃಷ್ಟಿಲಾಗಿದೆ.
ವರ ಶೇರುವಿನ ಪೋಷಕಿ ಮನಿತಾ, ‘ನಮ್ಮೊಂದಿಗೆ ಶೇರು ವಾಸಿಸಲು ಶುರುವಾಗಿ ಎಂಟು ವರ್ಷಗಳಾದವು. ಅವನು ನಮ್ಮ ಮಗನಿದ್ದಂತೆ. ಸ್ವೀಟಿಯೊಂದಿಗೆ ಮದುವೆ ಪ್ರಸ್ತಾಪ ಬಂದಾಗ ಒಪ್ಪಿದೆವು. ಇದನ್ನು ಎಲ್ಲರೊಂದಿಗೆ ಸಂತೋಷದಿಂದ ಆಚರಿಸಬೇಕೆಂದ ನಿರ್ಧರಿಸಿದೆವು. ಆ ಪ್ರಕಾರ ಸಂಪ್ರದಾಯಬದ್ಧವಾಗಿ ಮದುವೆಗೆ ಏನು ಬೇಕೋ ಎಲ್ಲಾ ಸಿದ್ಧತೆಗಳನ್ನೂ ಮಾಡಿಕೊಂಡೆವು’ ಎನ್ನುತ್ತಾರೆ.
ಈ ಮದುವೆಗಾಗಿ 100 ಜನಕ್ಕೆ ಆಹ್ವಾನಿಸಲಾಗಿತ್ತು. 25 ಮುದ್ರಿತ ಆಮಂತ್ರಣ ಪತ್ರಿಕೆಗಳು ಉಳಿದಂತೆ ಆನ್ಲೈನ್ ಆಹ್ವಾನ. ಈ ಮದುವೆಯನ್ನು ನೆರೆಹೊರೆಯ ಕೆಲವರು ಸ್ವಾಗತಿಸಿದ್ದಾರೆ ಇನ್ನೂ ಕೆಲವರು ವಿರೋಧಿಸಿದ್ದಾರೆ. ಆದರೆ ನಾಯಿಗಳ ಪೋಷಕರು, ಇತರರ ಅಭಿಪ್ರಾಯ ನಮಗೆ ಮುಖ್ಯವಲ್ಲ. ನಮಗೇನು ಬೇಕೋ ಅದನ್ನು ಮಾಡಿದ್ದೇವೆ ಆ ಬಗ್ಗೆ ಖುಷಿ ಇದೆ ಎಂದಿದ್ದಾರೆ.
ಸ್ವೀಟಿ ಪೋಷಕಿ ಸವಿತಾ, ‘ಈ ಮದುವೆ ಮಾಡಿದ್ದಕ್ಕೆ ಪೊಲೀಸರು ನಮ್ಮನ್ನು ಜೈಲಿಗೆ ಕರೆದೊಯ್ಯುತ್ತಾರೆ ಎಂದು ಕೆಲವರು ಹೇಳಿದರು. ಆದರೆ ಅಂಥ ಯಾವ ತೊಂದರೆಯೂ ಘಟಿಸಲಿಲ್ಲ. ನಮಗೆ ಮಕ್ಕಳಿಲ್ಲ. ನಮ್ಮ ಖುಷಿಯ ಮೂಲ ಏನಿದ್ದರೂ ಸ್ವೀಟಿಯೇ. ಸ್ವೀಟಿಯ ಮದುವೆ ನಮಗಂತೂ ಖುಷಿ ತಂದಿದೆ’ ಎಂದಿದ್ದಾರೆ.
ಸವಿತಾಳ ಗಂಡ ಚಹಾ ಅಂಗಡಿ ಇಟ್ಟುಕೊಂಡಿದ್ದಾನೆ. ಈ ಬಗ್ಗೆ ಭಾವುಕನಾದ ಅವನು, ‘ನಾನು ದಿನವೂ ದೇವಸ್ಥಾನಕ್ಕೆ ಹೋಗುತ್ತಿದ್ದೆ. ಅಲ್ಲಿದ್ದ ನಾಯಿಗಳಿಗೆ ಆಹಾರ ಹಾಕುತ್ತಿದ್ದೆ. ನಮಗೆ ಮಕ್ಕಳಿಲ್ಲದ ಕಾರಣ ಅವುಗಳನ್ನೇ ಮಕ್ಕಳಂತೆ ಕಾಣುತ್ತಿದ್ದೆ. ಅಲ್ಲಿದ್ದ ನಾಯಿಯೊಂದು ನನ್ನೊಂದಿಗೆ ಒಂದು ದಿನ ಮನೆಗೆ ಬಂದಿತು. ಮೂರು ವರ್ಷಗಳಿಂದ ಸ್ವೀಟಿ ನಮ್ಮ ಮಗಳಂತೆ ಬೆಳೆಯುತ್ತಿದ್ದಾಳೆ. ಮಗಳ ಮದುವೆಗೆ ಹೇಗೆ ತಯಾರಿ ಮಾಡಬೇಕೋ ಹಾಗೇ ಮಾಡಿದೆವು. ಪಾತ್ರೆಗಳು, ಸೀರೆಗಳು ಮತ್ತಿತರೇ ಸಾಮಾನುಗಳನ್ನು ಖರೀದಿಸಿದೆವು. ಮಗಳು ಗಂಡನ ಮನೆಗೆ ಹೋಗುವಾಗ ತಂದೆಗೆ ಆಗುವ ದುಃಖವೇ ನನ್ನನ್ನೂ ಕಾಡುತ್ತಿದೆ’ ಎಂದಿದ್ದಾರೆ.
ನಂತರ ಮದುವೆಯು ನೃತ್ಯದೊಂದಿಗೆ ಸಂಪನ್ನವಾಗಿದೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 11:22 am, Mon, 14 November 22