
ಮದುವೆ (marriage) ಅನ್ನೋದು ಪತಿ ಪತ್ನಿಯರ ನಡುವಿನ ಏಳೇಳು ಜನ್ಮದ ಬಂಧ ಎನ್ನಲಾಗುತ್ತದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಸಣ್ಣ ಪುಟ್ಟ ವಿಚಾರಗಳಿಗೆ ಗಂಡ ಹೆಂಡತಿಗೆ ಡಿವೋರ್ಸ್ ನೀಡುವಂತಹದ್ದು, ಮದ್ವೆಯಾದ ಕೆಲವೇ ದಿನಕ್ಕೆ ಪತಿಯ ಜೊತೆಗೆ ಬದುಕಲು ಸಾಧ್ಯವಿಲ್ಲ ಎಂದು ಪತ್ನಿಯಾದವಳು ಕೋರ್ಟ್ ಮೆಟ್ಟಿಲೇರುವಂತಹ ಪ್ರಸಂಗಗಳು ನಡೆಯುತ್ತಲೇ ಇರುತ್ತವೆ. ಇದೀಗ ಬೆಂಗಳೂರಿನ ಮಹಿಳೆಯೊಬ್ಬರು (Bengaluru woman) ತನ್ನ ವೈವಾಹಿಕ ಜೀವನದಲ್ಲಿ ನಡೆದ ಘಟನೆಯ ಬಗ್ಗೆ ಹೇಳಿಕೊಂಡಿದ್ದಾರೆ. ಮದುವೆಯಾದ ಒಂದೇ ತಿಂಗಳಲ್ಲೇ ಗಂಡನಿಂದ ದೂರಾಗಿ ಸಂತೋಷದ ಜೀವನ ಕಂಡುಕೊಂಡದ್ದು ತಪ್ಪೇ ಎಂದು ಕೇಳಿದ್ದಾರೆ. ಈ ಕುರಿತಾದ ರೆಡ್ಡಿಟ್ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
r/Bengaluru ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಬೆಂಗಳೂರಿನ ಮಹಿಳೆಯೊಬ್ಬರು ತಮ್ಮ ವೈವಾಹಿಕ ಜೀವನದಲ್ಲಿ ಏನೆಲ್ಲಾ ನಡೆಯಿತು ಹಾಗೂ ತನ್ನ ಆಯ್ಕೆಯ ಬಗ್ಗೆ ವಿವರವಾಗಿ ಹೇಳಿದ್ದಾರೆ. ನಾನು ಈ ಕೆಟ್ಟ ದಾಂಪತ್ಯದಿಂದ ಹೊರ ಬಂದು ಸಂತೋಷದ ಜೀವನ ಆಯ್ಕೆ ಮಾಡಿಕೊಂಡಿದ್ದು ತಪ್ಪೇ? ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ. ನಾನು ಬೆಂಗಳೂರಿನಲ್ಲಿ ನೆಲೆಸಿರುವ 32 ವರ್ಷದ ಮಹಿಳೆ. ಮದುವೆಯಾಗಿ ಕೇವಲ ಒಂದು ತಿಂಗಳಲ್ಲಿಯೇ ತಮ್ಮ ಪತಿಯಿಂದ ದೂರವಾದೆ. ಇಲ್ಲಿ ಹೊಂದಾಣಿಕೆ ಸಮಸ್ಯೆಯಲ್ಲ, ಸಣ್ಣ ಜಗಳಗಳಲ್ಲ. ನಾನು ಎಷ್ಟು ತೀವ್ರವಾದ ದೌರ್ಜನ್ಯವಾಗಿತ್ತೆಂದರೆ, ನಾನು ನಿಜವಾಗಿಯೂ ನನ್ನ ಜೀವಕ್ಕೆ ಹೆದರಿದ್ದೆ. ಪತಿಯನ್ನು ಬಿಟ್ಟು ಬಂದ ನಂತರ ನಾನು ಸಂಪೂರ್ಣವಾಗಿ ಕುಸಿದು ಹೋಗಿದ್ದೆ. ಆರಂಭದಲ್ಲಿ ನನಗೆ ನಿದ್ರೆ ಬರುತ್ತಿರಲಿಲ್ಲ. ಊಟವೂ ಸೇರುತ್ತಿರಲಿಲ್ಲ. ಪತಿ ತನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿರುವ ಕೆಟ್ಟ ಕನಸುಗಳು ನನಗೆ ಬೀಳುತ್ತಿದ್ದವು. ಚಿಕಿತ್ಸೆ ಪಡೆದು, ಎಂಟು ತಿಂಗಳ ಕಾಲ ಆ ಆಘಾತದಿಂದ ಹೊರಬರಲು ಕಷ್ಟಪಟ್ಟೆ. ಆ ಭಯದಿಂದ ಹೊರಬಂದು ಮತ್ತೆ ಮನುಷ್ಯರಂತೆ ಬದುಕಲು ಪ್ರಾರಂಭಿಸಿದೆ ಎಂದು ಆ ದಿನಗಳು ಹೇಗಿತ್ತು ಎಂದು ಹೇಳಿದ್ದಾರೆ.
ತದನಂತರದಲ್ಲಿ ನಾನು ನನ್ನ ಸ್ನೇಹಿತರೊಂದಿಗೆ ಹೊರಗೆ ಹೋಗಲು ಪ್ರಾರಂಭಿಸಿದೆ. ಹೊಸ ಹವ್ಯಾಸಗಳನ್ನು ಕಂಡುಕೊಂಡೆ. ನನ್ನ ಚಿಕ್ಕ ಪ್ರಪಂಚವನ್ನು ಹಂಚಿಕೊಳ್ಳಲು ಇನ್‌ಸ್ಟಾಗ್ರಾಂ ಖಾತೆಯನ್ನು ತೆರೆದೆ. ಹಲವು ವರ್ಷಗಳ ನಂತರ, ಮೊದಲ ಬಾರಿಗೆ, ನನಗೆ ಮಾತ್ರ ಸೇರಿದ ಸಂತೋಷವನ್ನು ಅನುಭವಿಸಿದೆ. ಆದರೆ, ನೋವಿನ ಸಂಗತಿ ಎಂದರೆ ನನ್ನ ಸುತ್ತಮುತ್ತಲಿನ ಜನರು ನನ್ನನ್ನು ನಿರ್ಣಯಿಸುತ್ತಿದ್ದಾರೆ. ನಾನು ನಗುತ್ತಾ, ಸಂತೋಷದಿಂದ ಜೀವನವನ್ನು ಆನಂದಿಸುವುದನ್ನು ನೋಡಿ, ‘ನೀನು ಗಂಭೀರವಾಗಿಲ್ಲ, ನೀನು ದುಃಖಿತರಾಗಿರಬೇಕು. ಏನೂ ಆಗಿಲ್ಲದಂತೆ ವರ್ತಿಸುತ್ತಿಯಾ’ ಹೀಗೆ ನಾನಾ ರೀತಿಯಲ್ಲಿ ಟೀಕಿಸುತ್ತಾರೆ.
ಪುರುಷನಿಲ್ಲದೆ ನಿನಗೆ ಭವಿಷ್ಯವಿಲ್ಲ, ಮದುವೆ ಜೀವನ ಮುಗಿದ ಕಾರಣ ನಿನ್ನ ಜೀವನ ಮುಗಿದಿದೆ ಎನ್ನುತ್ತಾರೆ. ಇಷ್ಟು ಬೇಗ ಸಂತೋಷವಾಗಿರುವುದು ಸರಿಯಲ್ಲ, ಮದುವೆ ಮುರಿದುಬಿದ್ದಿರುವುದಕ್ಕೆ ನೀನೇ ಕಾರಣ, ಏಕೆಂದರೆ ನೀನು ವಿಚ್ಛೇದನದ ಬಳಿಕ ತುಂಬಾ ಸಂತೋಷವಾಗಿ ಕಾಣುತ್ತಿದ್ದೀಯಾ ಹೀಗೆ ಈ ಜನರದ್ದು ಒಂದಲ್ಲ ಒಂದು ರೀತಿ ಪ್ರಶ್ನೆಗಳು ಎಂದು ಸಮಾಜದ ವಾಸ್ತವ ಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ.
ನನ್ನ ಸಂತೋಷವು ಜನರಿಗೆ ಏಕೆ ಇಷ್ಟು ಬೆದರಿಕೆಯಾಗಿದೆ? ಒಬ್ಬ ಮಹಿಳೆ ದುಃಖಿತಳಾಗಿದ್ದರೆ ಅಥವಾ ಪುರುಷನಿಗೆ ಬದ್ಧಳಾಗಿದ್ದಾರೆ ಮಾತ್ರ ಅವಳು ಮೌಲ್ಯಯುತ ಎಂದು ಏಕೆ ನೋಡಲಾಗುತ್ತದೆ?. ನಾನು ದೌರ್ಜನ್ಯದಿಂದ ಹೊರಬಂದೆ, ಭಯದ ರಾತ್ರಿಗಳಿಂದ ಬದುಕುಳಿದೆ. ನನ್ನ ಬದುಕನ್ನು ನಾನು ನಿರ್ಮಿಸಿಕೊಂಡೆ. ನಾನು ಸಂತೋಷವನ್ನು ಆರಿಸಿಕೊಂಡಿದ್ದಕ್ಕಾಗಿ ತಪ್ಪೇ? ನನ್ನದೇ ಆದ ನಿಯಮಗಳ ಮೇಲೆ ಭವಿಷ್ಯವನ್ನು ನಿರ್ಮಿಸಿದ್ದಕ್ಕಾಗಿ ನಾನು ತಪ್ಪೇ? ಎಂದು ಕೇಳಿದ್ದು ಸಮಾಜದ ಕೆಟ್ಟ ಮನಸ್ಥಿತಿಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:Video: ಪ್ರೀತಿಯ ಮಡದಿಗೆ ಕಾಲ್ಗೆಜ್ಜೆ ತೊಡಿಸಿದ ವೃದ್ಧ, ಇದುವೇ ನಿಜವಾದ ಪ್ರೀತಿ ನೋಡಿ
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರು ನೀವು ಏನೇ ಮಾಡಿದ್ರೂ ಜನ ಮಾತಾಡ್ತಾರೆ. ಶಾಂತವಾಗಿರಿ, ಇದು ನಿಮ್ಮ ಜೀವನ, ನಿರ್ಧಾರ ತೆಗೆದುಕೊಂಡು ಮುಂದುವರೆಯಿರಿ ಎಂದು ಹೇಳಿದ್ದಾರೆ. ಮತ್ತೊಬ್ಬರು ಬೇರೆಯವರ ಮಾತಿಗೆ ತಲೆ ಕೆಡಿಸಿಕೊಳ್ಳಬೇಡಿ, ಇದು ನಿಮ್ಮ ಜೀವನ ಎಂದು ಧೈರ್ಯ ತುಂಬಿದ್ದಾರೆ. ಏನೇ ಆಗಲಿ ಬದುಕು ನಿಮ್ಮದು, ಆಯ್ಕೆ ನಿಮ್ಮದು ಗಟ್ಟಿಯಾಗಿರಿ ಎಂದು ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ