
ಕನ್ನಡವೆಂದರೆ ಕೆಲವರಿಗೆ ಅದೇನೋ ಸೆಳೆತ. ಹೀಗಾಗಿ ಹೊರರಾಜ್ಯದಿಂದ ಬೆಂಗಳೂರಿಗೆ (Bengaluru) ಉದ್ಯೋಗ ಅರಸಿ ಬಂದವರು ಕೂಡ ಇಲ್ಲಿನ ಜನರೊಂದಿಗೆ ಬೆರೆತು ಕನ್ನಡ ಕಲಿಯುವ ಪ್ರಯತ್ನಕ್ಕೆ ಮುಂದಾಗುತ್ತಾರೆ. ಅಷ್ಟೇ ಅಲ್ಲದೆ ಇತರರನ್ನು ಕನ್ನಡ ಕಲಿಯಲು ಪ್ರೋತ್ಸಾಹಿಸುತ್ತಾರೆ. ಆದರೆ ದೆಹಲಿ ಮಹಿಳೆಯೊಬ್ಬರು (Delhi woman) ಬೆಂಗಳೂರಿನಲ್ಲಿ ನೆಲೆಸಿರುವುದರಿಂದ ಕನ್ನಡ ಕಲಿಯುವ ಬಗ್ಗೆ ತಮ್ಮ ದೃಷ್ಟಿಕೋನ ಹೇಗೆ ಬದಲಾಯಿತು ಎಂದು ವಿವರಿಸಿದ್ದಾರೆ. ಎಲ್ಲರೂ ಕನ್ನಡ ಕಲಿಯಿರಿ, ಇದು ನಿಮ್ಮ ಜೀವನವನ್ನು ಸುಲಭವಾಗಿಸುತ್ತದೆ ಎಂದು ಹೇಳಿದ್ದಾರೆ. ಈ ಕುರಿತಾದ ವಿಡಿಯೋ ಸದ್ಯ ವೈರಲ್ ಆಗಿದೆ.
simridhimakhija ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಕನ್ನಡ ಕಲಿಯುವುದು ಎಷ್ಟು ಮುಖ್ಯ ಎಂದಿದ್ದು, ಬೆಂಗಳೂರಿನಲ್ಲಿ ಕನ್ನಡ ಚರ್ಚೆಯನ್ನು ಇತ್ಯರ್ಥಪಡಿಸಲು ನಾನು ಬಯಸುತ್ತೇನೆ ಎಂದು ಶೀರ್ಷಿಕೆ ನೀಡಿದ್ದಾರೆ. ಕಂಟೆಂಟ್ ಕ್ರಿಯೇಟರ್ ಸಿಮ್ರಿಧಿ ಮಖಿಜಾ ಅವರು ತಮ್ಮ ವಿಡಿಯೋದಲ್ಲಿ, ನಿಮಗೆ ಕನ್ನಡ ಬರದಿದ್ದರೆ ಬೆಂಗಳೂರಿಗೆ ಬರಬೇಡಿ. ನಾನು ದೆಹಲಿಯವಳಾಗಿದ್ದು, ನಾನು ಕನ್ನಡ ಕಲಿಯುತ್ತಿಲ್ಲ ಎಂದು ಭಾವಿಸಿದೆ. ಆದರೆ ಬೆಂಗಳೂರಿನಲ್ಲಿ 60 ಕ್ಕೂ ಹೆಚ್ಚು ದಿನಗಳ ಕಾಲ ಉಳಿದು, ನಾನು ನಿಮಗೆ ಏನಾದರೂ ಹೇಳಬಹುದಾದರೆ, ಎಲ್ಲರೂ ಕನ್ನಡ ಕಲಿಯಬೇಕು, ಇದು ನಿಮ್ಮ ಜೀವನವನ್ನು ಸುಲಭಗೊಳಿಸುತ್ತದೆ. ನಾನು ಹೆಚ್‌ಎಸ್‌ಆರ್‌ನಲ್ಲಿ ನಾನು ಒಂದು ಹೋಟೆಲ್‌ಗೆ ಹೋಗುತ್ತಿದ್ದೆ, ದೋಸೆ ತಿನ್ನುತ್ತಿದ್ದೆ, ಊಟ ಮಾಡುತ್ತಿದ್ದೆ. ಅಲ್ಲಿ ಒಬ್ಬರು ಅಣ್ಣ ನನ್ನ ಬಳಿ ನಾಲ್ಕು ದಿನಗಳಾಗಿವೆ, ನೀವು ಬರಲಿಲ್ಲ, ಏನಾಯಿತು ಎಂದು ಕೇಳಿದರು. ಕೆಲಸದ ಒತ್ತಡ ಹೆಚ್ಚಾಗಿತ್ತು, ಅದಕ್ಕೆ ಬರಲಿಲ್ಲ ಎಂದು ಹೇಳಿದೆ ಎಂದು ವಿವರಿಸಿದ್ದಾರೆ.
ವಿಶೇಷವಾಗಿ ಸ್ಥಳೀಯರು ಆತ್ಮೀಯತೆ ಮತ್ತು ಆತಿಥ್ಯವನ್ನು ತೋರಿಸುತ್ತಾರೆ. ಹೀಗಾಗಿ ಅವರನ್ನು ಇಲ್ಲಿನ ಸ್ಥಳೀಯ ಭಾಷೆಯಲ್ಲಿಯೇ ಮಾತನಾಡಿಸೋಣ. ಕನ್ನಡ ಮಾತನಾಡಬಲ್ಲ ನನ್ನ ಎಲ್ಲಾ ಸ್ನೇಹಿತರ ಬಗ್ಗೆ ನನಗೆ ತುಂಬಾ ಅಸೂಯೆ ಇದೆ. ನಾನು ಭಾಷೆಯನ್ನು ಕಲಿಯಲು ಅವರೊಂದಿಗೆ ಹೆಚ್ಚು ಸಮಯ ಕಳೆಯಲಿದ್ದೇನೆ. ಈ ಸಂಪೂರ್ಣ ಭಾಷಾ ಹೋರಾಟದಲ್ಲಿ ನಾವು ತೊಡಗಿಕೊಳ್ಳಬಾರದು ಎಂದು ಹೇಳಿದ್ದಾರೆ.
ಇದನ್ನೂ ಓದಿ:ರಾತ್ರಿ ಉಳಿಯಲು ಇಬ್ಬರೂ ಯುವತಿಯರಿಗೆ ಅವಕಾಶ ಕೊಟ್ಟ ವ್ಯಕ್ತಿಗೆ 5000 ರೂ ದಂಡ ವಿಧಿಸಿದ ಹೌಸಿಂಗ್ ಸೊಸೈಟಿ
ಈ ವಿಡಿಯೋ 1.1 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನಿಮ್ಮ ಮಾತು ಕೇಳಿ ಖುಷಿಯಾಯ್ತು ಎಂದಿದ್ದಾರೆ. ಇನ್ನೊಬ್ಬರು, ಸ್ಥಳೀಯ ಭಾಷೆಯನ್ನು ಕಲಿಯುವುದು ಮೂಲಭೂತ ಗೌರವ, ಈ ಮಹಿಳೆ ಚೆನ್ನಾಗಿ ವಿವರಿಸಿದರು ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ