ಇಂದಿನ ಕಾಲದಲ್ಲಿ ಸೈಬರ್ ಹಗರಣಗಳು ಜನರ ಕೊರಳಿಗೆ ಕಂಠಕವಾಗಿ ಪರಿಣಮಿಸಿದೆ. ದಿನೇ ದಿನೇ ಆನ್ಲೈನ್ ವಂಚನೆಯು ಹೆಚ್ಚಾಗುತ್ತಿದೆ. ಇಂತಹ ಹಲವಾರು ಪ್ರಕರಣಗಳು ದಿನನಿತ್ಯ ನಡೆಯುತ್ತಲೇ ಇರುತ್ತವೆ. ಇದೀಗ ಅಂತಹದ್ದೇ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಕೆಟ್ಟು ಹೋದ ಹಾಲಿನ ಹಣವನ್ನು ಆನ್ಲೈನ್ ಮೂಲಕ ವಾಪಸ್ ಪಡೆಯಲು ಹೋಗಿ ಬೆಂಗಳೂರಿನ ಮಹಿಳೆಯೊಬ್ಬರು ಬರೋಬ್ಬರಿ 77 ಸಾವಿರ ರೂ. ಹಣವನ್ನು ಕಳೆದುಕೊಂಡಿದ್ದಾರೆ.
ಬೆಂಗಳೂರಿನ ಮಹಿಳೆಯೊಬ್ಬರು ಮಾರ್ಚ್ 18ರಂದು ಆನ್ಲೈನ್ ಮಾರುಕಟ್ಟೆಯಲ್ಲಿ ದಿನಸಿ ಪದಾರ್ಥಗಳನ್ನು ಹಾಗೂ ಹಾಲು ಖರೀದಿ ಮಾಡಿ ಯುಪಿಐ ಮೂಲಕ ಹಣವನ್ನು ಸಹ ಪಾವತಿ ಮಾಡಿದ್ದರು. ನಂತರ ಹಾಲಿನ ಪೊಟ್ಟಣ ತೆರೆದು ನೋಡಿದಾಗ ಹಾಲು ಕೆಟ್ಟು ಹೋಗಿತ್ತು. ನಂತರ ಅವರು ಆನ್ಲೈನ್ ಅಲ್ಲಿ ಇ-ಕಾಮರ್ಸ್ ತಾಣದ ಕಸ್ಟಮರ್ ಕೇರ್ ಸಂಖ್ಯೆಯನ್ನು ಹುಡುಕಿ, ಆ ಸಂಖ್ಯೆಗೆ ಕರೆ ಮಾಡಿ ನಾನು ಖರೀದಿಸಿದ ಹಾಲು ಕೆಟ್ಟು ಹೋಗಿದೆ, ಅದರ ಹಿಂದಿರುಗಿಸಿ ಎಂದು ಕೇಳಿದ್ದಾರೆ.
ಹೀಗೆ ಮಹಿಳೆ ಕರೆ ಮಾಡಿದಾಗ ಗ್ರಾಹಕರ ಪ್ರತಿನಿಧಿಯ ಹಾಗೆ ಮಾತನಾಡಿದ ಆನ್ಲೈನ್ ವಂಚಕರು ಆ ಮಹಿಳೆಯ ವೈಯಕ್ತಿಕ ವಿವರ ಮತ್ತು ಬ್ಯಾಂಕ್ ಖಾತೆಯ ಮಾಹಿತಿಯನ್ನು ಪಡೆದು, ಅವರು ವಾಟ್ಸ್ಆಪ್ ಮೂಲಕ ಒಂದು ಲಿಂಕ್ ಕಳುಹಿಸಿ ಇದರಲ್ಲಿ ಯುಪಿಐ ನಂಬರ್ ಮತ್ತು ಪಿನ್ ನಮೂದಿಸಿ ಎಂದು ಹೇಳುತ್ತಾರೆ. ಇದನ್ನು ನಿಜವೆಂದು ನಂಬಿದ ಹೆಂಗಸು ತನ್ನ ಎಲ್ಲಾ ಬ್ಯಾಂಕ್ ವಿವರವನ್ನು ಭರ್ತಿ ಮಾಡಿ ವಂಚಕರಿಗೆ ಕಳುಹಿಸುತ್ತಾರೆ. ಹೀಗೆ ಒಂದು ಯಡವಟ್ಟಿನಿಂದ ಆಕೆ ತನ್ನ ಬ್ಯಾಂಕ್ ಖಾತೆಯಲ್ಲಿದ್ದ ಬರೋಬ್ಬರಿ 77 ಸಾವಿರ ರೂ. ಹಣವನ್ನು ಕಳೆದುಕೊಂಡಿದ್ದಾರೆ.
ಇದನ್ನೂ ಓದಿ: ನಡು ರಸ್ತೆಯಲ್ಲಿ ರೀಲ್ಸ್ ವಯ್ಯಾರ ಮಾಡ್ತಿದ್ದ ಯುವತಿ.. ಬೈಕಲ್ಲಿ ಬಂದವ ಕ್ಷಣಾರ್ಧದಲ್ಲಿ ಚಿನ್ನದ ಸರ ಎಗರಿಸಿಕೊಂಡುಹೋದ!
ತಾನು ಮೋಸ ಹೋಗಿರುವುದನ್ನು ಅರಿತ ಮಹಿಳೆ ಸೈಬರ್ ಸಹಾಯವಾಣಿಗೆ ಕರೆ ಮಾಡಿ ನಂತರ ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ. ಸೈಬರ್ ವಂಚಕರು ಆನ್ಲೈನ್ ಫ್ಲಾಟ್ಫಾರ್ಮ್ ಅಲ್ಲಿ ಇ-ಕಾಮರ್ಸ್ ತಾಣದ ಸಂಪೂರ್ಣ ಮಾಹಿತಿಯನ್ನು ತಿರುಚಿ, ತಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಈ ಕೃತ್ಯ ಎಸಗಿ ಮಹಿಳೆಗೆ ಮೋಸ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ