Bengaluru: ಪ್ರೇಯಸಿ ಜನ್ಮ ದಿನದ ಹಿನ್ನೆಲೆ 26 ಕಿ.ಮೀ. ಓಡಿದ ಯುವಕ; ವಿಡಿಯೋ ವೈರಲ್​​

ಪ್ರೇಯಸಿಯ 26ನೇ ಜನ್ಮದಿನಕ್ಕಾಗಿ ಬೆಂಗಳೂರಿನ ಯುವಕನೋರ್ವ 26 ಕಿ.ಮೀ ಓಡಿ ಅಚ್ಚರಿ ಮೂಡಿಸಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು, ಅದು ವೈರಲ್​​ ಆಗಿದೆ. ನಾನಾ ಬಗೆಯ ಕಾಮೆಂಟ್​​ಗಳು ಸಹ ಬಂದಿವೆ. ಇನ್ನು ಪ್ರಿಯತಮನ ಕಾರ್ಯಕ್ಕೆ ಯುವತಿ ಕೂಡ ಅಚ್ಚರಿ ವ್ಯಕ್ತಪಡಿಸಿದ್ದು, ಸಂತಸ ಹಂಚಿಕೊಂಡಿದ್ದಾರೆ.

Bengaluru: ಪ್ರೇಯಸಿ ಜನ್ಮ ದಿನದ ಹಿನ್ನೆಲೆ 26 ಕಿ.ಮೀ. ಓಡಿದ ಯುವಕ; ವಿಡಿಯೋ ವೈರಲ್​​
ಅವಿಕ್ ಭಟ್ಟಾಚಾರ್ಯ

Updated on: Jan 15, 2026 | 11:35 AM

ಬೆಂಗಳೂರು, ಜನವರಿ 15: ಪ್ರೇಯಸಿಯ ಜನ್ಮ ದಿನಕ್ಕೆ ಹುಡುಗರು ಹೂವು, ಚಾಕೊಲೇಟ್, ದುಬಾರಿ ಗಿಫ್ಟ್​​ ಅಥವಾ ಸರ್ಪ್ರೈಸ್ ಡಿನ್ನರ್ ಕೊಡೋದನ್ನ ನಾವು ನೋಡಿದ್ದೇವೆ. ಆದರೆ ಬೆಂಗಳೂರು ಮೂಲದ ಯುವಕನೋರ್ವ ಗರ್ಲ್​​ಫ್ರೆಂಡ್​​ ಜನ್ಮ ದಿನದ ಹಿನ್ನೆಲೆ 26 ಕಿಲೋ ಮೀಟರ್​​ ದೂರವನ್ನು ಓಡಿದ್ದಾನೆ. ಆಶ್ಚರ್ಯವೆನಿಸಿದರೂ ಇದು ಸತ್ಯ. ಅವಿಕ್ ಭಟ್ಟಾಚಾರ್ಯ ಎಂಬ ವ್ಯಕ್ತಿ, ತನ್ನ ಪ್ರೇಯಸಿಯ 26ನೇ ಜನ್ಮದಿನದ ಹಿನ್ನೆಲೆ ಈ ಕೆಲಸ ಮಾಡಿದ್ದು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆ ಪೋಸ್ಟ್​​ ಇದೀಗ ವೈರಲ್​​ ಆಗಿದೆ.

ವಿಡಿಯೋದಲ್ಲಿ ಏನಿದೆ?

ಅವಿಕ್ ಭಟ್ಟಾಚಾರ್ಯ ಮತ್ತು ಅವರ ಗರ್ಲ್​​ಫ್ರೆಂಡ್ ಸಿಮ್ರಾನ್​​ ಇಬ್ಬರೂ ಜಂಟಿಯಾಗಿ ನಿರ್ವಹಿಸುವ @simranxavik ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋ ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನವನ್ನು ತಕ್ಷಣ ಸೆಳೆದಿದ್ದು, ರಿಲೇಶನ್‌ಶಿಪ್ ಸ್ಟ್ಯಾಂಡರ್ಡ್‌ಗಳನ್ನು ಇವರು ಎತ್ತಿ ಹಿಡಿದಿದ್ದಾರೆ ಎಂದು ಅನೇಕರು ಪ್ರಶಂಸಿಸಿದ್ದಾರೆ. ವಿಡಿಯೋ ಆರಂಭದಲ್ಲಿ ಸಿಮ್ರಾನ್ ಮಾತನಾಡುತ್ತಾ, ತನ್ನ ಜನ್ಮದಿನದಂದು ತಾನೇ 26 ಕಿಲೋಮೀಟರ್ ಓಡಲು ಬಯಸಿದ್ದೆ. ಆದರೆ ಅನಾರೋಗ್ಯದಿಂದ ಸಾಧ್ಯವಾಗಲಿಲ್ಲ ಎಂದಿದ್ದಾರೆ. ಜೊತೆಗೆ ಅವಿಕ್ ಮಾಡಿದ ಈ ನಿರ್ಧಾರದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮಂಟಪಕ್ಕೆ ಎಂಟ್ರಿ ಕೊಟ್ಟಿದ್ದು ವಧು, ಆದ್ರೆ ಎಲ್ಲರೂ ನೋಡಿದ್ದು ಫೋಟೊಗ್ರಾಫರ್​ನ!

ನಂತರ ಅವಿಕ್​​ ಓಡುತ್ತಾ ಮಾತನಾಡುವ ದೃಶ್ಯಗಳು ವಿಡಿಯೋದಲ್ಲಿವೆ. ನನ್ನ ಗೆಳತಿಗೆ ಈಗ 26 ವರ್ಷ ತುಂಬಿದೆ, ಅದಕ್ಕಾಗಿ ಅವಳ ಜನ್ಮದಿನದ ಪ್ರಯುಕ್ತ ನಾನು 26 ಕಿಲೋಮೀಟರ್ ಓಡುತ್ತಿದ್ದೇನೆ. ತಾನು ಇಯರ್‌ಫೋನ್ ಇಲ್ಲದೆ ಓಡುತ್ತಿದ್ದು, ಹೀಗೆ ಮಾಡುವುದರಿಂದ ಮನಸ್ಸಿನಲ್ಲಿ ನೆಮ್ಮದಿ ಇಟ್ಟುಕೊಳ್ಳುವ ಜೊತೆಗೆ ಸಿಮ್ರಾನ್ ಜೊತೆಗಿನ ಸಂತೋಷದ ಕ್ಷಣಗಳನ್ನು ನೆನಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ವಿವರಿಸುತ್ತಾರೆ. ಅಲ್ಲದೆ, ತಾನು ಮತ್ತು ಸಿಮ್ರಾನ್ ಇಬ್ಬರೂ ಇನ್ನೂ ಎರಡುೂವರೆ ವಾರಗಳಲ್ಲಿ ನಡೆಯಲಿರುವ ಮುಂಬೈ ಮ್ಯಾರಥಾನ್‌ಗೆ ತಯಾರಿ ನಡೆಸುತ್ತಿರುವ ವಿಷಯವನ್ನೂ ಇದೇ ವೇಳೆ ಅವಿಕ್​​ ಬಹಿರಂಗಪಡಿಸಿದ್ದಾರೆ.

ಇನ್ನು ಈ ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ನನ್ನ ಮಾನಸಿಕ ಶಾಂತಿಗಾಗಿ ಇದನ್ನು AI ಅಂತನೇ ಭಾವಿಸಿಕೊಳ್ಳುತ್ತೇನೆ ಎಂದು ಒಬ್ಬರು ಹೇಳಿದ್ದರೆ, ಈಗ ನಾನು ‘ನೋ ವೇ’ ಅನ್ನು 26 ಬಾರಿ ಬರೆಯಬೇಕಾ? ಇಂಥ ಹುಡುಗನನ್ನು ಈ ಭೂಮಿಯಲ್ಲಿ ಎಲ್ಲಿಂದ ಹುಡುಕಬೇಕು? ಎಂದು ಪ್ರಶ್ನಿಸಿದ್ದಾರೆ. ಈ ವೀಡಿಯೊವನ್ನು 2026ರ ಜನವರಿ 5ರಂದು ಹಂಚಿಕೊಳ್ಳಲಾಗಿದ್ದು, ಇದುವರೆಗೆ 7.5 ಮಿಲಿಯನ್ ವೀಕ್ಷಣೆಗಳು ಮತ್ತು 6.8 ಲಕ್ಷ ಲೈಕ್‌ಗಳನ್ನು ಇದು ಪಡೆದುಕೊಂಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 11:33 am, Thu, 15 January 26