Viral Video : ಬೀದಿಬದಿಯಲ್ಲೋ ಅಥವಾ ಸಂತೆಯಲ್ಲೋ ಮಾರಾಟಗಾರರು ಒಂದೊಂದು ರೀತಿಯಲ್ಲಿ ಗ್ರಾಹಕರನ್ನು ಆಕರ್ಷಿಸುವುದನ್ನು ನೀವು ನೋಡಿರುತ್ತೀರಿ, ಕೇಳಿರುತ್ತೀರಿ. ನಿಜದಲ್ಲಿ ಅದು ಒಂದು ರೂಢಿಸಿಕೊಂಡ ಕೌಶಲವೇ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ಗಮನಿಸಿ. ಭೂಪಾಲದಲ್ಲಿ ತಿಂಡಿವ್ಯಾಪಾರಿಯಾಗಿರುವ ಇವರು ವ್ಯಾಪಾರವನ್ನು ಕುದುರಿಸಿಕೊಳ್ಳಲು ನಿತ್ಯವೂ ಹೀಗೆ ರಾಗಬದ್ಧವಾಗಿ, ಜಿಂಗಲ್ಸ್ ಮಾದರಿಯಲ್ಲಿ ಹಾಡಿ ಗ್ರಾಹಕರನ್ನು ತಲುಪಲು ಪ್ರಯತ್ನಿಸುತ್ತಾರೆ. ಈ ವಿಡಿಯೋ ನೋಡುತ್ತಿದ್ದಂತೆ ಕೆಲ ಕ್ಷಣಗಳವರೆಗೆ ನಿಮ್ಮ ಮನಸ್ಸು ಬಾಲ್ಯದ ಬೀದಿ, ಕೇರಿ, ಸಂತೆಗಳಲ್ಲಿ ಓಡಾಡಿ ಬರುವುದು ಖಚಿತ! ಆನ್ಲೈನ್ನಲ್ಲಿಯೂ ಇದು ಈ ಕಾರಣಕ್ಕೆ ಗಮನ ಸೆಳೆದಿರಲು ಸಾಕು. ಈ ವಿಡಿಯೋ ಅನ್ನು 1,00,000 ಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.
#भोपाली नमकीन वाला… #भोपाल में टैलेंट की कमी नहीं… आप ही देखिये किस गज़ब अंदाज से जनाब नमकीन बेच रहें हैं..?#Bhopal pic.twitter.com/ONEiMgko60
— manishbpl (@manishbpl1) September 2, 2022
ತನ್ನ ಸ್ಕೂಟರ್ ಮೇಲೆ ಕುಳಿತು, ಚೀಲದಲ್ಲಿ ತಿಂಡಿಗಳನ್ನು ತುಂಬಿಸಿಕೊಂಡು ತನ್ನ ಪಾಡಿಗೆ ತಾನು ಹೀಗೆ ಒಂದು ಲಯದಲ್ಲಿ ಗ್ರಾಹಕರನ್ನು ಸೆಳೆಯಲು ಪ್ರಯತ್ನಿಸುವ ಈ ಮಾರಾಟಗಾರರ ಹೆಸರು ನಸೀಮ್ ಅಹಮದ್. ತಿಂಡಿಗಳ ಹೆಸರು, ವಿವರ ಮತ್ತು ಅವುಗಳ ಬೆಲೆಯೇ ಇವರ ಈ ಹಾಡಿನಲ್ಲಿರುವ ಸಾಹಿತ್ಯ. ಈ ರೀತಿಗೆ ಮನಸೋತ ಯಾರೋ ಒಬ್ಬರು ವಿಡಿಯೋ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿದ್ದಂತೆ ಸಾಕಷ್ಟು ಜನರು ಮೆಚ್ಚುಗೆ ಸೂಚಿಸಿದ್ದಾರೆ.
ಈ ವಿಡಿಯೋವನ್ನು ಮನೀಶ್‌ಬಿಪಿಎಲ್ ಎಂಬ ಖಾತೆದಾರರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ‘ಭೂಪಾಲಿ ನಮಕೀನ್ವಾಲಾ; ಭೂಪಾಲದಲ್ಲಿ ಪ್ರತಿಭೆಗಳಿಗೇನು ಕೊರತೆ ಇಲ್ಲ’ ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಲಾಗಿದೆ. 500 ಕ್ಕೂ ಹೆಚ್ಚು ರೀಟ್ವೀಟ್ ಆಗಿದೆ.
ಹೊಟ್ಟೆಪಾಡು ಎನ್ನುವುದು ಎಲ್ಲರ ನಿತ್ಯದ ಹಾಡು. ಅದನ್ನು ಬಹುಶಃ ಯಾರೂ ಕಲಿಸಿಕೊಡಬೇಕಿಲ್ಲ. ಅನಿವಾರ್ಯತೆಯೇ ಹೊಸ ಸೃಷ್ಟಿಯ ತಾಯಿ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 10:17 am, Wed, 7 September 22