ಇದು ಕಾಂಗ್ರೆಸ್ ರೂಪಿಸಿದ ಸಂಚು: ಮೃತ ಸಂತೋಷ್ ಹಿನ್ನೆಲೆ ಪ್ರಸ್ತಾಪಿಸಿ ಬಿಜೆಪಿ ಸರಣಿ ಟ್ವೀಟ್

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 13, 2022 | 3:12 PM

ಈ ಮೂಲಕ ‘ಸಾವಿನ ರಾಜಕಾರಣಕ್ಕೆ ಕಾಂಗ್ರೆಸ್ ಮುನ್ನುಡಿ ಬರೆಯುತ್ತಿದೆಯೇ ಎಂದು ಬಿಜೆಪಿ ಕಾಂಗ್ರೆಸ್ ಪಕ್ಷವನ್ನು ನೇರವಾಗಿ ಪ್ರಶ್ನಿಸಿದೆ.

ಇದು ಕಾಂಗ್ರೆಸ್ ರೂಪಿಸಿದ ಸಂಚು: ಮೃತ ಸಂತೋಷ್ ಹಿನ್ನೆಲೆ ಪ್ರಸ್ತಾಪಿಸಿ ಬಿಜೆಪಿ ಸರಣಿ ಟ್ವೀಟ್
ಮೃತ ಸಂತೋಷ್ ಮತ್ತು ಬಿಜೆಪಿ ಮಾಡಿರುವ ಟ್ವೀಟ್
Follow us on

ಬೆಂಗಳೂರು: ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಬಿಜೆಪಿ ಪಕ್ಷದ ಕರ್ನಾಟಕ ಘಟಕವು ಸರಣಿ ಟ್ವೀಟ್​ಗಳನ್ನು ಮಾಡಿದ್ದು, ಈ ಮೂಲಕ ‘ಸಾವಿನ ರಾಜಕಾರಣಕ್ಕೆ ಕಾಂಗ್ರೆಸ್ ಮುನ್ನುಡಿ ಬರೆಯುತ್ತಿದೆಯೇ’ ಎಂದು ಪ್ರಶ್ನಿಸಿದೆ. ‘ಈ ಷಡ್ಯಂತ್ರವನ್ನು ಪೋಷಿಸುವುದಕ್ಕಾಗಿ ಕಾಂಗ್ರೆಸ್ ಖಳನಾಯಕರು ಮಗದೊಂದು ಪ್ರಹಸನ ಹೆಣೆದರೇ? ಸಾವಿನ ರಾಜಕಾರಣಕ್ಕೆ ಕಾಂಗ್ರೆಸ್ ಮುನ್ನುಡಿ ಬರೆಯುತ್ತಿದೆಯೇ? ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಸಾಕಷ್ಟು ಅನುಮಾನ ಸೃಷ್ಟಿಸಿದೆ’ ಎಂದು ಶಂಕೆ ವ್ಯಕ್ತಪಡಿಸಿದೆ. ‘ಇದು ಕಾಂಗ್ರೆಸ್ ಪಕ್ಷದ “ಬೇನಾಮಿ ಅಧ್ಯಕ್ಷೆ” ಹಾಗೂ “ಮಹಾನಾಯಕ” ಸೃಷ್ಟಿಸಿದ “ಮಹಾಕೈವಾಡವೇ”? ಅಘೋಷಿತ ಕೆಪಿಸಿಸಿ ಅಧ್ಯಕ್ಷೆಯ ಕ್ಷೇತ್ರದಲ್ಲಿ ನಡೆದ ಬೇನಾಮಿ‌ ಕಾಮಗಾರಿಗೆ ಕಾಂಗ್ರೆಸ್ ಮಾಜಿ ಕಾರ್ಯಕರ್ತ ಬಲಿಯಾದರೆ? ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಸಾವಿಗೆ ನ್ಯಾಯ ಸಿಗಲೇಬೇಕು. ನ್ಯಾಯದ ಜೊತೆಗೆ ಸಾವಿನ ಹಿಂದಿರುವ ರಹಸ್ಯಗಳಿಗೂ ಉತ್ತರ ಸಿಗಬೇಕು’ ಎಂದು ಒತ್ತಾಯಿಸಿದೆ.

‘ಮೃತ ಸಂತೋಷ್‌ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಇದೇ ವಿಷಯವಾಗಿ ಪತ್ರಿಕಾಗೋಷ್ಠಿ ನಡೆಸಿದ್ದರು. ಇದು ಕಾಕತಾಳಿಯವಾಗಲು ಹೇಗೆ ಸಾಧ್ಯ? ಮೃತ ಸಂತೋಷ್ ಈ ಹಿಂದೆ ರಾಹುಲ್ ಗಾಂಧಿ ಸಹಿ ನಕಲು ಮಾಡಿದ್ದು ನಿಜವೇ? ಈ ಕಾರಣಕ್ಕಾಗಿ ಆತನನ್ನು ಕಾಂಗ್ರೆಸ್ಸಿನಿಂದ ಉಚ್ಛಾಟನೆ ಮಾಡಿದ್ದು ಸುಳ್ಳೇ? ಆತ ಕಾಂಗ್ರೆಸ್ಸಿನ “ಬೇನಾಮಿ ಅಧ್ಯಕ್ಷರಿಗೆ” ನಿಷ್ಠನಾಗಿದ್ದದ್ದು ಸುಳ್ಳೇ? ಇದು “ಬೇನಾಮಿ ಅಧ್ಯಕ್ಷೆ” ಹಾಗೂ “ಮಹಾನಾಯಕ” ಪೋಣಿಸಿರುವ ಷಡ್ಯಂತ್ರವೇ?’ ಎಂದು ಪರೋಕ್ಷವಾಗಿ ಕಾಂಗ್ರೆಸ್​ನ ಇಬ್ಬರು ಪ್ರಭಾವಿ ನಾಯಕರನ್ನು ಗುರಿಯಾಗಿಸಿ ಪ್ರಶ್ನೆಗಳ ಬಾಣ ಬಿಟ್ಟಿದೆ.

‘ಕಾರ್ಯಾದೇಶ ಇಲ್ಲದೇ ಕಾಮಗಾರಿ. ಕೆಪಿಸಿಸಿ “ಅಘೋಷಿತ ಅಧ್ಯಕ್ಷೆಯ” ಕ್ಷೇತ್ರದಲ್ಲಿ ಕಾಮಗಾರಿ. ಈಗ ಮೃತನ ಪರ ಬ್ಯಾಟಿಂಗ್. ಮೃತ ವ್ಯಕ್ತಿಯ ಎಲ್ಲಾ ವಿಚಾರಗಳು “ಮಹಾನಾಯಕ” ಮತ್ತು “ಬೇನಾಮಿ ಅಧ್ಯಕ್ಷೆಯ” ಸುತ್ತ ಸುತ್ತುತ್ತಿರುವುದು ನಿಜವಲ್ಲವೇ? ಸಂತೋಷ್‌ ಪ್ರಕರಣ #40PercentCONgressToolkit ಭಾಗ ಎಂಬುದಕ್ಕೆ ಹಲವಾರು ದೃಷ್ಟಾಂತಗಳಿವೆ’ ಎಂದು ಬಿಜೆಪಿ ಆರೋಪ ಮಾಡಿದೆ.

ಸಂತೋಷ್ ಪಾಟೀಲ್ ಮೂಲತಃ ಕಾಂಗ್ರೆಸ್ ಕಾರ್ಯಕರ್ತ. ಈತ ಮೊದಲು ಸಂತೋಷನಿಂದ ರಾಹುಲ್ ಗಾಂಧಿ ಸಹಿ ನಕಲು ಮಾಡಿದ್ದ. ಶೇ 40ರ ಕಮಿಷನ್ ಆರೋಪ ಕಾಂಗ್ರೆಸ್ ಸೃಷ್ಟಿ. ನಂತರದ ದಿನಗಳಲ್ಲಿ ಸಂತೋಷ್ ಪಾಟೀಲನಿಂದಲೂ 40% ಕಮಿಷನ್ ಪ್ರಸ್ತಾಪವಾಗಿತ್ತು ಎನ್ನುವುದನ್ನು ಬಿಜೆಪಿ ತನ್ನ ಟ್ವೀಟ್​ನಲ್ಲಿ ಪ್ರಸ್ತಾಪಿಸಿದೆ. ಕೇಂದ್ರದ ನಾಯಕರ, ಮಂತ್ರಿಗಳ, ಅಧಿಕಾರಿಗಳ ಬಳಿಗೆ ತೆರಳಿ ದೂರು ಸಲ್ಲಿಸುವಷ್ಟು ಧೈರ್ಯವಿದ್ದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಮೆತ್ತಗಿನ ಮನುಷ್ಯನೇ? ಇದರ ಹಿಂದೆ #40PercentCONgressToolkit ಕೈವಾಡವಿದೆ. ಅರಾಜಕತೆ ಸೃಷ್ಟಿಸಲು ಮುಗ್ದರನ್ನು ಕಾಂಗ್ರೆಸ್‌ ನಾಯಕರು ಬಳಸಿಕೊಳ್ಳುತ್ತಿದ್ದಾರೆಯೇ? ಎಂದು ಬಿಜೆಪಿ ಪ್ರಶ್ನಿಸಿದೆ.

ಅನುಮೋದನೆ ಇಲ್ಲದೆಯೇ ನೂರಕ್ಕೂ ಹೆಚ್ಚು ಕಾಮಗಾರಿ ನಡೆಸಿದ್ದ ಸಂತೋಷ್. ಅವು ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ಕಾಮಗಾರಿಯಲ್ಲ ಎಂದು ಗ್ರಾಮೀಣಾಭಿವೃದ್ಧಿ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದರು. ಅನಧಿಕೃತ ಕಾಮಗಾರಿಯ ಹಿಂದೆ ಕೆಪಿಸಿಸಿಯ “ಅಘೋಷಿತ ಅಧ್ಯಕ್ಷೆಯ” ಪಾತ್ರವೇನು? 40% ಕಮಿಷನ್ ಆರೋಪ ಎನ್ನುವುದು @INCKarnataka (ಕಾಂಗ್ರೆಸ್ ಪಕ್ಷ) ಸೃಷ್ಟಿಸಿದ ಬಹುದೊಡ್ಡ ಟೂಲ್ ಕಿಟ್ ಎಂದು ಬಿಜೆಪಿ ದೂರಿದೆ.

ಇದನ್ನೂ ಓದಿ: ನಾನು ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ, ಷಡ್ಯಂತ್ರದ ಬಗ್ಗೆ ತನಿಖೆ ಆಗಬೇಕು: ಕೆಎಸ್ ಈಶ್ವರಪ್ಪ

ಇದನ್ನೂ ಓದಿ: ಈಶ್ವರಪ್ಪ ಜೊತೆ ಮುಖಾಮುಖಿ ಮಾತಾಡ್ತೀನಿ ಎಂದ ಸಿಎಂ, ಮುಖ್ಯಮಂತ್ರಿ ಕೇಳಿದರೆ ರಾಜೀನಾಮೆ ಕೊಡಬೇಕಾಗುತ್ತೆ ಎಂದ ಈಶ್ವರಪ್ಪ