ಸಾಮಾಜಿಕ ಜಾಲತಾಣಗಳಲ್ಲಿ ಗಲಾಟೆ, ಘರ್ಷಣೆ, ಕಿತ್ತಾಟಗಳಿಗೆ ಸಂಬಂಧಿಸಿದ ಸುದ್ದಿ ಎಷ್ಟೇ ಇರಲಿ. ಅವೆಲ್ಲವನ್ನೂ ಮರೆಸಲು, ಮನಸ್ಸನ್ನು ಹಗುರಾಗಿಸಲು ಕೆಲವು ಚಿತ್ರಗಳು ಕಣ್ಣಿಗೆ ಬಿದ್ದರೆ ಸಾಕು. ಅದರಲ್ಲೂ ಪ್ರಾಣಿ, ಪಕ್ಷಿಗಳಿಗೆ ಸಂಬಂಧಿಸಿದ ಸುದ್ದಿಗಳೇನಾದರೂ ಇದ್ದರಂತೂ ಅವು ನೋಡುಗರನ್ನು ಹಿಡಿದಿಟ್ಟುಕೊಳ್ಳುತ್ತವೆ. ಆ ಪೈಕಿ ಕೆಲ ಛಾಯಾಗ್ರಾಹಕರು ತೆಗೆಯುವ ಅದ್ಭುತ ಚಿತ್ರಗಳು ಮನಸ್ಸಿಗೆ ಮುದ ನೀಡುವ ಜತೆಗೆ ತಲೆಗೆ ಹುಳ ಬಿಟ್ಟು ಕಣ್ಣು, ಮೆದುಳಿಗೆ ಕೆಲಸವನ್ನೂ ಕೊಡುತ್ತವೆ. ನಿಮ್ಮ ಕಣ್ಣು ಎಷ್ಟೇ ಸೂಕ್ಷ್ಮ ಎಂದುಕೊಂಡರೂ ಕೆಲವು ಚಿತ್ರಗಳು ಭಾರೀ ಆಟವಾಡಿಸಿಬಿಡುತ್ತವೆ. ಇದೀಗ ಅಂಥದ್ದೇ ಒಂದು ವೈರಲ್ ಚಿತ್ರವನ್ನು ನಿಮ್ಮ ಮುಂದಿಡುತ್ತಿದ್ದೇವೆ.
ಅರಣ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಪ್ರವೀಣ್ ಕಾಸ್ವಾನ್ ಎನ್ನುವವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡ ಈ ಚಿತ್ರ ಎಲ್ಲರ ದೃಷ್ಟಿ ಕದ್ದಿದೆ. ಮರದ ಮೇಲೆ ಚಿರತೆಯೊಂದು ಕಾಲು ಚಾಚಿಕೊಂಡು ಕುಳಿತ ಚಿತ್ರವನ್ನು ಹಂಚಿಕೊಂಡ ಅವರು ಇದರಲ್ಲಿ ಎಷ್ಟು ಚಿರತೆಗಳಿವೆ ಎಂದು ಕೇಳಿದ್ದಾರೆ. ಮೋಹನ್ ಥಾಮಸ್ ಎಂಬುವವರ ಟ್ವೀಟನ್ನು ರೀಟ್ವೀಟ್ ಮಾಡಿದ ಪ್ರವೀಣ್ ಕುಮಾರ್ ತಮ್ಮ ಹಿಂಬಾಲಕರಿಗೆ ಈ ಪ್ರಶ್ನೆಯನ್ನು ಎಸೆದಿದ್ದಾರೆ.
ಅಂದಹಾಗೆ, ಆ ಚಿತ್ರವನ್ನು ತಕ್ಷಣ ನೋಡಿದರೆ ಕೇವಲ ಒಂದೇ ಚಿರತೆ ಕಣ್ಣಿಗೆ ಬೀಳುತ್ತದೆ. ಹಬ್ಬಿದ ರೆಂಬೆಯೊಂದರ ಮೇಲೆ ಆರಾಮಾಗಿ ಕುಳಿತ ಚಿರತೆ ಮುಂದಿನ ಎರಡು ಕಾಲನ್ನು ಚಾಚಿಕೊಂಡು, ಹಿಂಬದಿ ಕಾಲುಗಳನ್ನು ಇಳಿಬಿಟ್ಟುಕೊಂಡು ವಿಶ್ರಾಂತಿ ಪಡೆಯುತ್ತಿದೆ. ಆದರೆ, ಇನ್ನೊಮ್ಮೆ ನೋಡಿದರೆ ಅದರ ಮುಖದ ಕೆಳಭಾಗದಲ್ಲಿ ಮತ್ತೊಂದು ಚಿರತೆಯ ಬಾಲವೂ ಕಾಣಿಸುತ್ತದೆ. ಹಾಗಂತ, ಅದರ ಮುಖ ಎಲ್ಲಿದೆ ಎಂದು ಹುಡುಕುವುದು ಮಾತ್ರ ಸುಲಭವಿಲ್ಲ.
Can you spot a young leopard cubs face.@NikonIndia @ParveenKaswan pic.twitter.com/NPp3nBRFWs
— Mohan Thomas (@GetMohanThomas) June 25, 2021
ಅಸಲಿಗೆ ಆ ಮನಮೋಹಕ ಚಿತ್ರದಲ್ಲಿ ತಾಯಿ ಚಿರತೆಯ ಜತೆಗೆ ಮರದ ಮೇಲೆ ಮರಿಯೂ ಕುಳಿತುಕೊಂಡಿದೆ. ಅತ್ಯಂತ ಸೂಕ್ಷ್ಮವಾಗಿ ದೃಷ್ಟಿ ನೆಟ್ಟರೆ ಮಾತ್ರ ಅದನ್ನು ಪತ್ತೆಹಚ್ಚಬಹುದು. ಮರದ ತೊಗಟೆಯ ಬಣ್ಣ ಹಾಗೂ ಚಿರತೆ ಮರಿಯ ಮುಖದ ಬಣ್ಣಕ್ಕೆ ಸಾಮ್ಯತೆ ಇರುವ ಕಾರಣ ಅದು ಅಷ್ಟು ಸುಲಭಕ್ಕೆ ಕಣ್ಣಿಗೆ ಬೀಳದೆ ಆಟವಾಡಿಸುತ್ತದೆ. ಬೇಕಿದ್ದರೆ ನೀವು ಇನ್ನೊಮ್ಮೆ ಆ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿ.
How many leopards ? https://t.co/lH3nnwnDhG
— Parveen Kaswan, IFS (@ParveenKaswan) June 25, 2021
ಇಷ್ಟಾದರೂ ಅದು ನಿಮ್ಮ ಕಣ್ಣಿಗೆ ಬಿದ್ದಿಲ್ಲವೆಂದರೆ ಇದು ನಿಜಕ್ಕೂ ನಿಮ್ಮ ದೃಷ್ಟಿಗೆ ದೊಡ್ಡ ಸವಾಲೇ ಸರಿ. ಪ್ರಕೃತಿ ತನ್ನಲ್ಲಿನ ಪ್ರಾಣಿಗಳಿಗೆ ಸ್ವಾಭಾವಿಕ ರಕ್ಷಣೆ ಕಲ್ಪಿಸಲು, ಆಹಾರ ಪತ್ತೆಗೆ ಅನುಕೂಲ ಮಾಡಿಕೊಡಲು ಹೇಗೆಲ್ಲಾ ಸಹಕಾರ ಕೊಡುತ್ತದೆ ಎನ್ನುವುದಕ್ಕೆ ಈ ಚಿತ್ರವೊಂದು ಸಾಕ್ಷಿ. ಒಂದುವೇಳೆ ಎಷ್ಟು ಹೊತ್ತು ಹುಡುಕಿದರೂ ನಿಮಗೆ ಚಿರತೆ ಮರಿ ಕಂಡಿಲ್ಲವೆಂದರೆ ಕೆಳಗಿನ ಚಿತ್ರದಲ್ಲಿ ಅದನ್ನು ನೋಡಬಹುದು.
Spotted it on the first go pic.twitter.com/rPiUkjLbGa
— Anupama Síngh (@GlitterrBird) June 25, 2021
ಇದನ್ನೂ ಓದಿ:
ಗುಜರಾತ್ನ ನರ್ಮದಾ ನದಿಯಲ್ಲಿ ಮೊಸಳೆಗಳಿಗೆ ಆಹಾರವಾದ ವ್ಯಕ್ತಿಯ ಶವ: ವಿಡಿಯೋ ವೈರಲ್
ಟೀ ಎಸ್ಟೇಟ್ನಲ್ಲಿ ಮರಿಗಳ ಸಮೇತ ನೆಲೆನಿಂತ ಗಜಪಡೆ! ಅಲ್ಲೇ ಊಟ, ಓಡಾಟ ನಿದ್ರೆ; ವಿಡಿಯೋ ವೈರಲ್