ಗುಜರಾತ್ನ ನರ್ಮದಾ ನದಿಯಲ್ಲಿ ಮೊಸಳೆಗಳಿಗೆ ಆಹಾರವಾದ ವ್ಯಕ್ತಿಯ ಶವ: ವಿಡಿಯೋ ವೈರಲ್
ಮೊದಲು ಶಿನೋರ್ ಬಳಿ ಮೃತದೇಹ ಕಂಡುಬಂದಿತ್ತಾದರೂ ನಂತರ ಅದನ್ನು ಹುಡುಕುವಾಗ ಅಲ್ಲಿಂದ ಕೆಲ ಕಿ.ಮೀ ದೂರದ ಮಲ್ಸಾರ್ ಬಳಿ ಪತ್ತೆಯಾಗಿದೆ. ಬಳಿಕ ಪೊಲೀಸರು ಮೃತದೇಹವನ್ನು ನದಿಯಿಂದ ಹೊರತೆಗೆದಿದ್ದಾರೆ.
ಗಾಂಧಿನಗರ: ಕೊರೊನಾ ಎರಡನೇ ಅಲೆಯಿಂದ ಸೋಂಕಿತರು ಅಧಿಕ ಪ್ರಮಾಣದಲ್ಲಿ ಸಾವಿಗೀಡಾಗುತ್ತಿದ್ದ ಸಂದರ್ಭದಲ್ಲಿ ಅಂತ್ಯಕ್ರಿಯೆ ಮಾಡಲಾಗದೇ ಶವಗಳನ್ನು ನದಿಗಳಲ್ಲಿ ತೇಲಿಬಿಡಲಾಗುತ್ತಿದೆ ಎಂದು ಉತ್ತರ ಭಾರತದ ಕೆಲವು ಭಾಗಗಳಲ್ಲಿ ಸುದ್ದಿಯಾಗಿತ್ತು. ಅಲ್ಲದೇ, ಶವಗಳು ತೇಲಿಬರುತ್ತಿವೆ ಎಂಬ ವಿಡಿಯೋಗಳೂ ಹರಿದಾಡಿದ್ದವು. ಇದೀಗ ಗುಜರಾತ್ನ ನರ್ಮದಾ ನದಿಯಲ್ಲೂ ಶವವೊಂದು ತೇಲಿಬಂದಿದ್ದು ಅದನ್ನು ಮೊಸಳೆಗಳು ಹಿಡಿದು ಎಳೆದಾಡುವ ಕರುಣಾಜನಕ ವಿಡಿಯೋ ವೈರಲ್ ಆಗಿದೆ. ಆದರೆ, ಇಲ್ಲಿ ತೇಲಿಬಂದ ಶವ ಕೊರೊನಾ ಸೋಂಕಿತನದ್ದೇ ಅಥವಾ ಯಾರಾದರೂ ನದಿಗೆ ಬಿದ್ದು ಆತ್ಮಹತ್ಯೆ ಮಾಡಕೊಂಡಿರುವರದ್ದೇ ಎನ್ನುವುದು ತಿಳಿದುಬಂದಿಲ್ಲ.
ಗುಜರಾತ್ನ ವಡೋದರಾ ನಗರದಿಂದ ಸುಮಾರು 55 ಕಿ.ಮೀ ದೂರದಲ್ಲಿರುವ ಶಿನೋರ್ ಪ್ರದೇಶದಲ್ಲಿ ಈ ಘಟನೆ ಚಿತ್ರೀಕರಿಸಲಾಗಿದ್ದು, ನರ್ಮದಾ ನದಿಯಲ್ಲಿ ತೇಲಿಬಂದ ಶವವನ್ನು ಮೊಸಳೆ ಆಹಾರವಾಗಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ. ಸ್ಥಳೀಯ ಮೀನುಗಾರರು ಮೃತದೇಹವನ್ನು ನೋಡಿದ್ದು ಅಷ್ಟರಲ್ಲಾಗಲೇ ಅರಡು ಮೊಸಳೆಗಳು ಅದನ್ನು ಹಿಡಿದು ಎಳೆದಾಡುತ್ತಿದ್ದವು. ಮೊದಲು ಯಾವುದೋ ಪ್ರಾಣಿಯ ಶವವಿರಬೇಕು ಎಂದು ಮೀನುಗಾರರು ಭಾವಿಸಿದ್ದರಾದರೂ ಹತ್ತಿರ ಬಂದು ನೋಡಿದಾಗ ಅದು ವ್ಯಕ್ತಿಯೊಬ್ಬರ ಮೃತದೇಹ ಎನ್ನುವುದು ಗೊತ್ತಾಗಿ ದಿಗ್ಭ್ರಾಂತರಾಗಿದ್ದಾರೆ.
ಮೊಸಳೆಗಳು ಶವವನ್ನು ತುಂಡುಮಾಡಲು ಯತ್ನಿಸುತ್ತಿದ್ದಾಗ ಕೆಲವು ಸ್ಥಳೀಯರು ಘಟನೆಯನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಕಳೆದ ಸೋಮವಾರ ನಡೆದ ಈ ಘಟನೆಯನ್ನು ಬಳಿಕ ಸಾಮಾಜಿಕ ಜಾಲತಾಣಗಳಲಲ್ಲಿ ಹಂಚಿಕೊಳ್ಳಲಾಗಿದ್ದು, ಅದು ಈಗ ಎಲ್ಲರ ಮೊಬೈಲ್ನಲ್ಲಿ ಹರಿದಾಡಿ ವೈರಲ್ ಆಗಿದೆ.
ಮೊದಲು ಶಿನೋರ್ ಬಳಿ ಮೃತದೇಹ ಕಂಡುಬಂದಿತ್ತಾದರೂ ನಂತರ ಅದನ್ನು ಹುಡುಕುವಾಗ ಅಲ್ಲಿಂದ ಕೆಲ ಕಿ.ಮೀ ದೂರದ ಮಲ್ಸಾರ್ ಬಳಿ ಪತ್ತೆಯಾಗಿದೆ. ಬಳಿಕ ಪೊಲೀಸರು ಮೃತದೇಹವನ್ನು ನದಿಯಿಂದ ಹೊರತೆಗೆದಿದ್ದಾರೆ. ಆದರೆ, ಇಲ್ಲಿಯ ತನಕ ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಅದಕ್ಕಾಗಿ ಪ್ರಯತ್ನಿಸುತ್ತಿದ್ದೇವೆ. ನದಿಯಿಂದ ಶವವನ್ನು ತೆಗೆಯುವಷ್ಟರಲ್ಲಾಗಲೇ ದೇಹದ ಹಲವು ಭಾಗಗಳಲ್ಲಿ ಕಚ್ಚಿದ ಗುರುತುಗಳು ಕಂಡುಬಂದಿವೆ ಎಂದು ಪೊಲೀಸರು ಹೇಳಿದ್ದಾರೆ.
View this post on Instagram
ವಿಡಿಯೋದಲ್ಲಿ ಕಾಣುವಂತೆ ಮೊದಲು ಕೇವಲ ಒಂದೇ ಒಂದು ಮೊಸಳೆ ಶವದ ಬಳಿ ಬಂದಿದೆ. ಆದರೆ, ನಂತರದಲ್ಲಿ ಮತ್ತೆರೆಡು ಮೊಸಳೆಗಳು ಅಲ್ಲಿಗೆ ಧಾವಿಸಿ ಆಹಾರದಲ್ಲಿನ ತಮ್ಮ ಪಾಲಿಗೆ ಪೈಪೋಟಿ ನಡೆಸಿವೆಯಂತೆ. ನದಿಯಿಂದ ಶವವನ್ನು ಹೊರತೆಗೆಯುವಾಗ ಅದು ಸಂಪೂರ್ಣ ನಗ್ನವಾಗಿದ್ದು, ಮೇಲ್ನೊಟಕ್ಕೆ ಮೃತ ವ್ಯಕ್ತಿ 30 ವರ್ಷದ ಆಸುಪಾಸಿನವರಾಗಿರಬಹುದು ಎಂದು ಅಂದಾಜಿಸಲಾಗಿದೆ. ಸದ್ಯ ಆ ವ್ಯಕ್ತಿಯ ಶವ ನದಿಯಲ್ಲಿ ಹೇಗೆ ತೇಲಿಬಂತು? ಸಾವಿನ ಹಿಂದಿನ ಕಾರಣಗಳೇನು ಎನ್ನುವ ಬಗ್ಗೆ ಹೆಚ್ಚಿನ ತನಿಖೆ ಆಗುತ್ತಿದೆ.
ಇದನ್ನೂ ಓದಿ: ಯಾದಗಿರಿಯಲ್ಲಿ ಮೊಸಳೆ ಮೇಲೆ ಕಲ್ಲು ಎತ್ತಿಹಾಕಿ ಸಾಯಿಸಿರುವ ಅಪರಿಚಿತರು
ಕೊರೊನಾ ಸೋಂಕಿತನ ಮೃತದೇಹವನ್ನು ನದಿಗೆ ಎಸೆದು ಹೋದ ಸಂಬಂಧಿಕರು; ವೈರಲ್ ವಿಡಿಯೋ ನೋಡಿ ಪ್ರಕರಣ ದಾಖಲು