
Kannada Actress : ನಮ್ ಏರಿಯಾಲ್ಲೊಂದಿನ, ವಿನಾಯಕ ಗೆಳೆಯರ ಬಳಗ, ತುಘಲಕ್, ಚಾರ್ ಮಿನಾರ್, ಸಿಂಪಲ್ಲಾಗೊಂದು ಇನ್ನೊಂದು ಲವ್ ಸ್ಟೋರಿ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿರುವ ಮೇಘನಾ ಗಾಂವಕರ್ (Meghana Goankar) ಹೊಸ ರೀಲ್ ಮೂಲಕ ಟ್ವಿಟರ್ ಟ್ರೆಂಡಿಂಗ್ನಲ್ಲಿದ್ದಾರೆ; ಪಾಚಿಹಸಿರಿನ ಪರಾಸ್ಪೇಟ್ ದಡಿಯ ವಿಸ್ಕೋಸ್ ಇಳಕಲ್ ಸೀರೆಯುಟ್ಟು, ಗುಳೇದಗುಡ್ಡದ ಪಂಚರಂಗೀ ಕಣ ತೊಟ್ಟು, ಮೂಗಿಗೆ ಗಾಡೆ ಹಾಕಿಕೊಂಡು, ತುರುಬಿಗೆ ಮಲ್ಲಿಗೆ ಮುಡಿದು, ಕೈಯಲ್ಲಿ ಕಮಲದ ಮೊಗ್ಗು ಹಿಡಿದು…
ಸುಮಾರು 65,000 ಜನರು ಮೇಘನಾ ಟ್ವೀಟ್ ಮಾಡಿದ ಈ ರೀಲ್ ನೋಡಿದ್ದಾರೆ. ಅನೇಕರು ಆಹಾ ನಮ್ಮ ಇಳಕಲ್ ಸೀರೆಯಲ್ಲಿ ಎಷ್ಟು ಛಂದ ಕಾಣ್ತೀರಿ ಎಂದು ಉದ್ಗರಿಸಿದ್ದಾರೆ. ಅಂದಹಾಗೆ ಮೇಘನಾ ಹುಟ್ಟಿದ್ದು ಕಲಬುರ್ಗಿಯಲ್ಲಿ. ಇಲ್ಲಿಯ ಶ್ರೀ ಶರಣಬಸವೇಶ್ವರ ವಸತಿ ಶಾಲೆಯಲ್ಲಿ ಶಿಕ್ಷಣ ಮುಗಿಸಿ ನಂತರ ಬೆಂಗಳೂರಿನ ಮಹಾವೀರ್ ಜೈನ್ ಕಾಲೇಜಿನಲ್ಲಿ ವಾಣಿಜ್ಯ ಪದವಿ ಪಡೆದರು.
ನಂತರ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದು ಆದರ್ಶ ಫಿಲ್ಮ್ ಇನ್ಸ್ ಟ್ಯೂಟ್ ನಲ್ಲಿ ಡಿಪ್ಲೋಮೋ ಇನ್ ಆ್ಯಕ್ಟಿಂಗ್ ಅಂಡ್ ಮೇಕಿಂಗ್ ಕೋರ್ಸ್ ಪೂರೈಸಿದರು. ನಂತರ ಧಾರಾವಾಹಿ ”ಕುಮುದ” ಮೂಲಕ ಕಿರುತೆರೆ ಪ್ರವೇಶಿಸಿದರು. ರಿಯಾಲಿಟಿ ಷೋ ಮೂಲಕ ಪ್ರತಿಭೆ ಸಾಬೀತುಪಡಿಸಿದರು. ”ಚಾರ್ ಮಿನಾರ್” ಸಿನೆಮಾದ ಮೂಲಕ ಮುನ್ನೆಲೆಗೆ ಬಂದರು.
ಈ ಇಳಕಲ್ ಸೀರೆ ಮೇಘನಾರನ್ನು ಹೊಸ ಅವಕಾಶದೆಡೆ ಕರೆದೊಯ್ದೀತೆ? ಇವರ ನಟನಾ ಸಾಮರ್ಥ್ಯಕ್ಕೆ ಹೊಸ ದಿಕ್ಕು ತೋರಿಸೀತೆ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 12:20 pm, Thu, 8 June 23