ಕೃಷಿ ಮತ್ತು ರೈತ ದೇಶದ ಬೆನ್ನೆಲುಬು. ಆದರೆ ಇಂದಿನ ಆಧುನಿಕ ಜಗತ್ತಿನಲ್ಲಿ ಯುವ ಜನತೆ ಕೃಷಿ ಕಾಯಕದಿಂದ ದೂರ ಸರಿಯುತ್ತಿದ್ದಾರೆ. ಮತ್ತು ಆಧುನೀಕತೆಯ ಅನುಕರಣೆಯಲ್ಲಿ ಕರಗಿ ಹೋಗುತ್ತಿದ್ದಾರೆ. ಅಷ್ಟೇ ಅಲ್ಲದೆ ನಮ್ಮ ಹಳ್ಳಿಯ ಯುವಕರು ನಗರದತ್ತ ಮುಖ ಮಾಡಿ ಕೃಷಿ ಕಾಯಕವನ್ನು ಬಿಡುತ್ತಿದ್ದಾರೆ. ಆದರೆ ಇಲ್ಲೊಬ್ಬ ಪುಟ್ಟ ಹುಡುಗ ವಿದ್ಯಾಭ್ಯಾಸದ ಜೊತೆಗೆ ಕೃಷಿ ಕಾಯಕದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಫೇಸ್ ಬುಕ್, ಯೂಟ್ಯೂಬ್, ಇನ್ಸ್ಟಾಗ್ರಾಮ್ ಎಂದು ಕಾಲ ಕಳೆಯುವ ಅದೆಷ್ಟೋ ಸೋಮಾರಿ ಯುವಕರಿಗೆ ಮಾದರಿಯಾಗಿದ್ದಾನೆ.
ಹೌದು ಉಡುಪಿ ಜಿಲ್ಲೆಯ ಕಾರ್ಕಳದ ಸೌರವ್ ಪೂಜಾರಿ ಎಂಬ ಹುಡುಗ ಚಿಕ್ಕ ವಯಸ್ಸಿನಲ್ಲಿಯೇ ಕೃಷಿ ಚಟುವಟಿಕೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾನೆ. ಪ್ರಸ್ತುತ 8 ನೇ ತರಗತಿಯ ವಿದ್ಯಾರ್ಥಿಯಾಗಿರುವ ಈತ ಬಹಳ ಸಣ್ಣ ವಯಸ್ಸಿನಲ್ಲಿಯೇ ಕೃಷಿಯಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡಿದ್ದಾನೆ.
ಸೌರವ್ ತಂದೆಯೂ ಕೃಷಿಕರಾಗಿದ್ದು, ತಂದೆಯ ಜೊತೆ ಸೇರಿ ಈ ಹುಡುಗ ಸೌತೆ ಕಾಯಿ, ಚೀನಿಕಾಯಿ, ಅಲಸಂಡೆ, ಶುಂಠಿ, ಟೊಮ್ಯಾಟೋ, ಬೆಂಡೆಕಾಯಿ ಹೀಗೆ ಎಲ್ಲಾ ಬಗೆಯ ತರಕಾರಿಗಳನ್ನು ಬೆಳೆಯುತ್ತಿದ್ದಾನೆ. ಜೊತೆಗೆ ಅಡುಗೆಯಿಂದ ಹಿಡಿದು ಎಲ್ಲಾ ರೀತಿಯ ಮನೆ ಕೆಲಸಗಳನ್ನು ಕೂಡಾ ಮಾಡುತ್ತಾನೆ ಈ ಪೋರ. ಅಷ್ಟೇ ಅಲ್ಲದೆ ಈತ ಶಾಲೆಯಲ್ಲಿಯೂ ಹಲವಾರು ಬಗೆಯ ತರಕಾರಿ ಕೃಷಿಗಳನ್ನು ಬೆಳೆದಿದ್ದಾನೆ.
ತನ್ನ ಬಿಡುವಿನ ಸಮಯದಲ್ಲಿ ಇತರ ಮಕ್ಕಳಂತೆ ಮೊಬೈಲ್, ಟಿವಿ, ಆಟ ಎಂದು ಸಮಯವನ್ನು ವ್ಯರ್ಥ ಮಾಡದೆ, ಗಿಡಗಳಿಗೆ ನೀರು ಬಿಡುತ್ತಾ, ಗೊಬ್ಬರ ಹಾಕುತ್ತಾ ಕೃಷಿಯ ವಿಚಾರವಾಗಿ ತಂದೆಗೆ ಸಹಾಯ ಮಾಡುತ್ತಿದ್ದಾನೆ. ಕೃಷಿ ಎಂದರೆ ಮೂಗು ಮುರಿಯುವ, ಫ್ರೀ ಟೈಮ್ ಅಲ್ಲಿ ಯಾವುದೇ ಕೆಲಸ ಮಾಡದೇ ಮೊಬೈಲ್ ನೋಡುತ್ತಾ ಟೈಮ್ ವೇಸ್ಟ್ ಮಾಡುತ್ತಾ ಕೂರುವ ಯುವಕರಿಗೆ ಈ ಹುಡುಗ ನಿಜಕ್ಕೂ ಸ್ಪೂರ್ತಿ ಅಂತಾನೇ ಹೇಳಬಹುದು.
ತರಕಾರಿ ಕೃಷಿಯಲ್ಲಿ ಆಸಕ್ತಿಯನ್ನು ಹೊಂದಿರುವ ಸೌರವ್ ಪೂಜಾರಿಯ ವಿಶೇಷ ಸಂದರ್ಶನದ ವಿಡಿಯೋವನ್ನು ಉಡುಪಿಯ ಕಂಡೀರಾ ಎಂಬ ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಪುಟ್ಟ ಹುಡುಗನ ತರಕಾರಿ ಕೃಷಿ, ಮತ್ತು ಆತನ ಮುದ್ದಾದ ಸಂದರ್ಶನವನ್ನು ನೋಡುಬಹುದು.
ಇದನ್ನೂ ಓದಿ: ಮೋದಿ ಕಟೌಟ್ ತಬ್ಬಿಕೊಂಡು, ಸೊಂಟ ಬಳುಕಿಸುತ್ತಾ ರೀಲ್ಸ್ ಮಾಡಿದ ಮಹಿಳೆ
ಒಂದು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ ಮೂರುವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ 19 ಸಾವಿರ ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಹಾಗೂ ಈ ಪುಟ್ಟ ಹುಡುಗನ ಕೃಷಿಯ ಬಗೆಗಿನ ಒಲವಿಗೆ ನೆಟ್ಟಿಗರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರರು ʼಈ ಹುಡುಗನ ಸಂದರ್ಶನ ನೋಡಿ ಮನಸ್ಸಿಗೆ ಬಹಳ ಸಂತೋಷವಾಯಿತುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇಂದಿನ ಪೀಳಿಗೆಗೆ ಈ ಹುಡುಗ ಮಾದರಿʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಈ ಹುಡುಗನ ಬಗ್ಗೆ ಮಾಹಿತಿ ತಿಳಿಸಿಕೊಟ್ಟಿದ್ದಕ್ಕಾಗಿ ನಿಮಗೆ ಧನ್ಯವಾದಗಳುʼ ಎಂಬ ಕಮೆಂಟ್ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ಉತ್ತಮ ಕೆಲಸ, ಈ ಕೃಷಿ ಕಾಯಕವನ್ನು ಹೀಗೆ ಮುಂದುವರೆಸಿಕೊಂಡು ಹೋಗು ಮಗು ಎಂದು ಆಶಿರ್ವಾದಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ