Viral : ರೋಗ ಯಾವಾಗ ಯಾರಿಗೆ ಬೇಕಾದರೂ ಬರಬಹುದು. ಆದರೆ ಆ ರೋಗವನ್ನು ಗೆಲ್ಲುವುದು ಎಲ್ಲರಿಗೂ ಸಾಧ್ಯವಾಗಲಿಕ್ಕಿಲ್ಲ. ಅದರಲ್ಲೂ ಕ್ಯಾನ್ಸರ್ನಂಥ ಮಾರಣಾಂತಿಕ ರೋಗವನ್ನು ಗೆಲ್ಲಬೇಕೆಂದರೆ ಪ್ರಬಲ ಇಚ್ಛಾಶಕ್ತಿ ಬೇಕು. ಗೋವಾದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಐಪಿಎಸ್ ಅಧಿಕಾರಿ ನಿಧಿನ್ ವಲ್ಸನ್ ಕ್ಯಾನ್ಸರ್ ಗೆದ್ದವರ ಸಾಲಿಗೆ ಸೇರಿದ್ದಾರೆ ಎನ್ನುವುದಕ್ಕೆ ಸಾಕ್ಷಿ ಅತ್ಯಂತ ಕಷ್ಟಕರವಾದ ಐರನ್ಮ್ಯಾನ್ ಟ್ರೈಥ್ಲಾನ್ ಓಟದಲ್ಲಿ ಇವರು ಭಾಗವಹಿಸಿದ್ದು ಮತ್ತು ಪಂದ್ಯವನ್ನು ಪೂರ್ಣಗೊಳಿಸಿದ್ದು. ಪಂದ್ಯದಲ್ಲಿ ಇವರು ಸೋತರೂ ಜನಮನವನ್ನು ಮಾತ್ರ ಸಂಪೂರ್ಣ ಗೆದ್ದರು.
ನಿಧಿನ್ ಗೋವಾದಲ್ಲಿ ಅಪರಾಧ ವಿಭಾಗದಲ್ಲಿ ಪೊಲೀಸ್ ಅಧೀಕ್ಷಕರಾಗಿದ್ದಾರೆ. ಭೂಕಬಳಿಕೆಗೆ ಸಂಬಂಧಿಸಿದ ಕೇಸ್ಗಳನ್ನು ನಿರ್ವಹಿಸುತ್ತಾರೆ. ಪಣಜಿಯಲ್ಲಿ ನಡೆದ ಐರನ್ಮ್ಯಾನ್ ಟ್ರೈಥ್ಲಾನ್ ಓಟದಲ್ಲಿ ಭಾಗವಹಿಸಿದ ಅವರು ಪಂದ್ಯದಲ್ಲಿ ಸೋತರೂ ತಮ್ಮ ದೃಢಚಿತ್ತ ಮತ್ತು ಇಚ್ಛಾಶಕ್ತಿಯಿಂದ ಜನಮಾನಸವನ್ನು ಗೆದ್ದಿದ್ದಾರೆ. ಈ ಪಂದ್ಯದಲ್ಲಿ 1,400 ಜನರು ಭಾಗವಹಿಸಿದ್ದರು. ನಿಧಿನ್, 8 ಗಂಟೆ, 3 ನಿಮಿಷ ಮತ್ತು 53 ಸೆಕೆಂಡುಗಳಲ್ಲಿ ತಮ್ಮ ಪಂದ್ಯವನ್ನು ಪೂರ್ಣಗೊಳಿಸಿದ್ದಾರೆ. 1.9 ಕಿ.ಮೀ ಸಮುದ್ರದಲ್ಲಿ ಈಜು, 90 ಕಿ.ಮೀ ಸೈಕ್ಲಿಂಗ್ ಮತ್ತು 21 ಕಿ.ಮೀ ಓಟವನ್ನು ಈ ಪಂದ್ಯ ಒಳಗೊಂಡಿತ್ತು.
ಪಂದ್ಯದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ನಿಧಿನ್, ‘ಕ್ಯಾನ್ಸರ್ನೊಂದಿಗೆ ಹೋರಾಡಲು ಸಾಧ್ಯವಾದರೆ, ನಾವು ಇನ್ನೇನನ್ನು ಸಾಧಿಸಬಹುದು ಎನ್ನುವುದನ್ನು ಜಗತ್ತಿಗೆ ತೋರಿಸಲು ಸಾಧ್ಯವಾಗುತ್ತದೆ. ಕ್ಯಾನ್ಸರ್ ಜೊತೆ ಹೋರಾಡುವುದು ಅಸಾಧ್ಯವೇನಲ್ಲ’ ಎಂದಿದ್ದಾರೆ.
ಕ್ಯಾನ್ಸರ್ Non-Hodgkin’s Lymphoma ನಿಂದ ಬಳಲುತ್ತಿದ್ದ ಇವರು, ಫೆಬ್ರುವರಿಯಲ್ಲಿ ಈ ರೋಗದಿಂದ ಮುಕ್ತರಾಗಿದ್ದಾರೆ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 4:59 pm, Mon, 14 November 22