Viral: ‘ಪ್ರೀತಿಗೆ ಜಯವಾಗಲಿ!’ ದೆಹಲಿ ಮೆಟ್ರೋದ ಈ ಜೋಡಿಯನ್ನು ಹುರಿದುಂಬಿಸುತ್ತಿರುವ ನೆಟ್ಟಿಗರು

|

Updated on: Jun 21, 2023 | 12:38 PM

PDA : ''ನಮ್ಮ ಭಾರತೀಯ ಸಮಾಜದ ಸ್ಥಿತಿ ಅತ್ಯಂತ ಕರುಣಾಜನಕವಾಗಿದೆ. ಸಾರ್ವಜನಿಕವಾಗಿ ಮಕ್ಕಳು, ಮಹಿಳೆಯರ ಮೇಲೆ ನಡೆಯುವ ಹಿಂಸೆ, ಅತ್ಯಾಚಾರಕ್ಕಿಂತ ಇಂಥ ಸಣ್ಣಪುಟ್ಟ ಪ್ರೀತಿಯ ಸಹಜ ಕ್ಷಣಗಳು ಇಲ್ಲಿ ದೊಡ್ಡ ತಪ್ಪಾಗಿ ಗೋಚರಿಸುತ್ತವೆ''

Viral: ಪ್ರೀತಿಗೆ ಜಯವಾಗಲಿ! ದೆಹಲಿ ಮೆಟ್ರೋದ ಈ ಜೋಡಿಯನ್ನು ಹುರಿದುಂಬಿಸುತ್ತಿರುವ ನೆಟ್ಟಿಗರು
ದೆಹಲಿ ಮೆಟ್ರೋದಲ್ಲಿ ಜೋಡಿಯೊಂದು ಚುಂಬನದಲ್ಲಿ ಲೀನವಾಗಿರುವುದು
Follow us on

Metro: ಪ್ರೇಮಿಗಳ ವಿಹಾರಕ್ಕಾಗಿ ಹಳ್ಳಿಗಳ ಕಡೆ ಹೊಳೆ ಹಳ್ಳ ಹೊಲ ಗದ್ದೆಗಳುಂಟು. ಆದರೆ ನಗರ, ಮಹಾನಗರದಲ್ಲಿರುವವರಿಗೆ? ಸಾಕಷ್ಟು ಕಿ.ಮೀಗಳಷ್ಟು ಕ್ರಮಿಸಬೇಕಾದ ಅನಿವಾರ್ಯತೆ. ಹಾಗೆ ಚಲಿಸಿದರೂ ಎಲ್ಲೆಲ್ಲಿಯೂ ಸಿಸಿ ಕ್ಯಾಮೆರಾಗಳ ಕಣ್ಗಾವಲು ಮತ್ತು ಸಾಮಾಜಿಕ ನಿರ್ಬಂಧಗಳು. ಹೀಗಿರುವಾಗ ನಿರುಮ್ಮಳವಾದ ಏಕಾಂತದ ಕ್ಷಣಗಳು ಪ್ರೇಮಿಗಳಿಗೆ ದಕ್ಕುತ್ತವೆ ಎಂದು ಖಚಿತವಾಗಿ ಹೇಳಲಾಗದು. ಅದರಲ್ಲೂ ದಿನವಿಡೀ ದುಡಿದು ತಾಸುಗಟ್ಟಲೆ ಪ್ರಯಾಣಿಸುವ ದಿನಚರಿಯಲ್ಲಿ ಸಮಯವಾದರೂ ಎಲ್ಲಿ ಸಿಗುತ್ತದೆ? ಒಟ್ಟಿನಲ್ಲಿ ಮಹಾನಗರದ ಮಂದಿಗೆ ಪ್ರೇಮಿಸಲು (Love) ಪುರುಸೊತ್ತೂ ಇಲ್ಲ, ಸೂಕ್ತ ಸ್ಥಳಗಳೂ ಇಲ್ಲ ಎಂಬಂಥ ಸ್ಥಿತಿ ಉಂಟಾಗಿದೆ. ಇದಕ್ಕೆ ಇದೀಗ ವೈರಲ್ ಆಗಿರುವ ಈ ಚಿತ್ರವೇ ಸಾಕ್ಷಿ.

ಜೂನ್​ 17ರಂದು ಈ ಫೋಟೋ ಟ್ವೀಟ್ ಮಾಡಲಾಗಿದೆ. ದೆಹಲಿಯ ಹುಡಾ ಸಿಟಿ ಸೆಂಟರ್​ ಮಾರ್ಗವಾಗಿ ಈ ಮೆಟ್ರೋ (Delhi Metro) ಚಲಿಸುತ್ತಿತ್ತು ಎಂದು ಹೇಳಲಾಗಿದೆ. ಇಂಥ ಚಿತ್ರಗಳು ವೈರಲ್ ಆಗುವುದು ಇದು ಮೊದಲೇನಲ್ಲ. ಅದರಲ್ಲಿಯೂ ದೆಹಲಿ ಮೆಟ್ರೋದಲ್ಲಿ ನಡೆದ ಚಟುವಟಿಕೆಗಳ ಫೋಟೋ, ವಿಡಿಯೋಗಳು ಅಂತರ್ಜಾಲದಲ್ಲಿ ಹರಿದಾಡುತ್ತಲೇ ಇರುತ್ತವೆ. ಆಗೆಲ್ಲಾ ನೆಟ್ಟಿಗರು ಆಕ್ರೋಶಗೊಂಡು ಪ್ರತಿಕ್ರಿಯಿಸುತ್ತಿರುತ್ತಾರೆ. ಆದರೆ ಈ ಟ್ವೀಟ್​ಗೆ ಮಾತ್ರ ಸಾಕಷ್ಟು ಜನ ಪ್ರೋತ್ಸಾಹಿಸುತ್ತಿದ್ಧಾರೆ! ಹಾಗೆಯೇ ಎಂದಿನಂತೆ ವಿರೋಧಗಳೂ ವ್ಯಕ್ತವಾಗುತ್ತಿವೆ.

ಇದನ್ನೂ ಓದಿ : Viral:ಹೃದಯ, ಹಂಸ ಸರಿ, ಆದರೆ ಈ ಬಟ್ಟೆಮಂಗ ನನ್ನ ಎದೆಬಡಿತವನ್ನೇ ನಿಲ್ಲಿಸಿತ್ತಲ್ಲ!

ದೆಹಲಿಯಲ್ಲಿ ಹಾಡಹಗಲೇ ಮಹಿಳೆಯರು, ಮಕ್ಕಳ ಮೇಲೆ ಅತ್ಯಾಚಾರ ಕೊಲೆ ಪ್ರಕರಣಗಳು ನಡೆಯುತ್ತವೆ. ಆ ಬಗ್ಗೆ ಗಂಭೀರವಾಗಿ ಕ್ರಮ ಕೈಗೊಳ್ಳಬೇಕಿದೆಯೇ ಹೊರತು ಇಂಥ ಸಣ್ಣಪುಟ್ಟ ಸಹಜ ಸಂಗತಿಗಳ ಬಗ್ಗೆ ಅಲ್ಲ ಎಂದು ಒಬ್ಬರು ಹೇಳಿದ್ದಾರೆ. ತಪ್ಪೇನಿಲ್ಲ, ಇದು ಸಹಜ, ನೀವು ಮತ್ತಷ್ಟು ಹೀಗೆ ಓಪನ್ ಆಗಿ ಕಿಸ್ ಮಾಡಿ. ಆಗಾಗ ಮಾಡುತ್ತಲೇ ಇರ್ರಿ. ಅವರು ನಿಮ್ಮ ಬಗ್ಗೆ ಇನ್ನಷ್ಟು ಅಸೂಯೆ ಪಡುವಂತಾಗಲಿ, ನಿಮ್ಮ ಪ್ರೀತಿ ಚಿರಾಯುವಾಗಿರಲಿ, ಚಿಯರ್ಸ್​! ಎಂದು ಒಬ್ಬರು ರೀಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : Viral: ಎಐನೊಂದಿಗೆ ಕೆಲಸ ಮಾಡುವವರಿಗೆ ಒಂಟಿತನ, ನಿದ್ರಾಹೀನತೆ, ಆಲ್ಕೋಹಾಲ್​ ಸಂಗಾತಿಗಳಾಗಬಹುದು

ಆದರೆ ದೆಹಲಿ ಮೆಟ್ರೊ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಈ ಅನಾನುಕೂಲಕ್ಕಾಗಿ ವಿಷಾದಿಸುತ್ತೇವೆ. ಹುಡಾ ಸಿಟಿ ಸೆಂಟರ್​ನಲ್ಲಿ ಈ ಕುರಿತು ಪರಿಶೀಲಿಸಲಾಗಿದ್ದು ಈ ಚಿತ್ರದಲ್ಲಿರುವ ಪ್ರಯಾಣಿಕರು ಕಂಡುಬಂದಿಲ್ಲ ಎಂದು ಹೇಳಿದೆ.

ಸಾರ್ವಜನಿಕ ಪ್ರಣಯ ಪ್ರದರ್ಶನ (PDA)ದ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

 

Published On - 12:28 pm, Wed, 21 June 23