ಕಿವಿಯಲ್ಲಿ ಒಂದು ಸಣ್ಣ ಹುಳ, ಇರುವೆ ಹೊಕ್ಕರೆ ಸಹಿಸಿಕೊಳ್ಳಲು ಕಷ್ಟ..ಅಂಥದ್ದರಲ್ಲಿ ಏಡಿ ಹೊಕ್ಕಿದರೆ !-ಇದು ತಮಾಷೆನೇ ಅಲ್ಲ, ಇಂಥದ್ದೊಂದು ಘಟನೆ ನಡೆದಿದೆ ಮತ್ತು ಅದರ ವಿಡಿಯೋ ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದೆ. ಅಂದಹಾಗೆ ವಿಡಿಯೋ ಮೊದಲು ಶೇರ್ ಆಗಿದ್ದು ಟಿಕ್ಟಾಕ್ನಲ್ಲಿ. @wesdaisy ಎಂಬ ಅಕೌಂಟ್ನಿಂದ ವಿಡಿಯೋ ಪೋಸ್ಟ್ ಮಾಡಲಾಗಿದೆ. ಈ ಘಟನೆ ನಡೆದಿದ್ದು ಕೆರಿಬಿಯನ್ ದ್ವೀಪ ಪೋರ್ಟ್ ರಿಕೋದಲ್ಲಿ ಎಂದೂ ಹೇಳಲಾಗಿದೆ. ಸ್ಯಾನ್ ಜುವಾನ್ ಕರಾವಳಿ ತೀರದಲ್ಲಿ ಮಹಿಳೆ ಸ್ನಾರ್ಕ್ಲಿಂಗ್ ಮಾಡಿದ್ದರು. ಅದಾದ ಬಳಿಕ ಅವರ ಕಿವಿಯಲ್ಲಿ ಏಡಿ ಸಿಕ್ಕಿಕೊಂಡಿತ್ತು ಎಂದು ಹೇಳಲಾಗಿದೆ. (ಸ್ನಾರ್ಕಿಂಗ್ ಎಂದರೆ ಸ್ನಾರ್ಕೆಲ್ ಮಾಸ್ಕ್ ಧರಿಸಿ ಸಮುದ್ರದ ನೀರಿನ ಒಳಗೆ ಈಜುವುದು).
ಕಿವಿಯಲ್ಲಿ ಏಡಿ ಸೇರುತ್ತಿದ್ದಂತೆ ಮಹಿಳೆ ಪರದಾಡಿದ್ದಾರೆ. ಆ ಏಡಿ ಒಳಹೊಕ್ಕಿ ಕುಳಿತುಬಿಟ್ಟಿದೆ. ಮಹಿಳೆಯರ ಜತೆಗೆ ಇದ್ದ ಅವರ ಸ್ನೇಹಿತರೊಬ್ಬರು ಕಿವಿಯಿಂದ ಏಡಿ ತೆಗೆಯಲು ಪ್ರಯತ್ನಪಟ್ಟ ರೀತಿಯನ್ನು ವಿಡಿಯೋದಲ್ಲಿ ನೋಡಬಹುದು. ಒಂದು ಚಿಮುಟಿಗೆಯಂಥ ಉಪಕರಣದಲ್ಲಿ ಏಡಿಯನ್ನು ಹಿಡಿದು ಎಳೆದಿದ್ದಾರೆ. ತುಂಬ ಹೊತ್ತು ಪ್ರಯತ್ನ ಪಟ್ಟಬಳಿಕವಷ್ಟೇ ಏಡಿಯನ್ನು ತೆಗೆಯಲು ಸಾಧ್ಯವಾಗಿದೆ. ಇನ್ನು ಏಡಿಯಿಂದಾಗಿ ತುಂಬ ಕಷ್ಟಪಟ್ಟ ಮಹಿಳೆ ಕೂಗುವುದನ್ನೂ ವಿಡಿಯೋದಲ್ಲಿ ಕೇಳಬಹುದು. ಇನ್ನೊಂದು ವಿಚಾರವೆಂದರೆ ಏಡಿ ಹೊರಬರುವವರೆಗೂ ಕಿವಿಯಲ್ಲಿ ಇದ್ದಿದ್ದು ಏಡಿ ಎಂಬುದೇ ಅವರಿಗೆ ಗೊತ್ತಿರಲಿಲ್ಲ. ಅದನ್ನು ಹೊರಗೆ ತೆಗೆದ ನಂತರ ಯುವತಿ, ಏನದು ಎಂದು ಕೇಳಿದ್ದೂ ವಿಡಿಯೋದಲ್ಲಿ ಗೊತ್ತಾಗುತ್ತದೆ. ನೆಟ್ಟಿಗರಂತೂ ಅದನ್ನು ನೋಡಿ ಶಾಕ್ ವ್ಯಕ್ತಪಡಿಸಿದ್ದಾರೆ.
ವಿಡಿಯೋ ಈಗಾಗಲೇ 1.3 ಮಿಲಿಯನ್ಗೂ ಅಧಿಕ ವೀವ್ಸ್ ಕಂಡಿದೆ. ಇದು ನಿಜಕ್ಕೂ ಭಯಾನಕ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಈ ಅನುಭವ ಪಡೆದ ಮಹಿಳೆ ಡೈಸಿ, ನನಗಂತೂ ಸಾಕುಬೇಕಾಯ್ತು ಎಂದಿದ್ದಾರೆ. ನಾನು ನನ್ನ ಸ್ವಿಮ್ಮಿಂಗ್ನ್ನು ಪೂರ್ತಿ ಮಾಡಲೂ ಆಗಲಿಲ್ಲ. ಮತ್ತೊಮ್ಮೆ ನೀರಿಗೆ ಇಳಿಯಲೂ ಭಯವಾಯಿತು ಎಂದು ಅನುಭವ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ನಾಥೂರಾಂ ಗೋಡ್ಸೆಯನ್ನು ಹೊಗಳಿ ಜೈಲು ಸೇರಿದ್ದ ಕಾಳಿಚರಣ್ ಮಹಾರಾಜ್ಗೆ ಜಾಮೀನು; 3 ತಿಂಗಳ ನಂತರ ಬಿಡುಗಡೆ ಭಾಗ್ಯ