ಕೋವಿಡ್ ಸೋಂಕಿನ ಎರಡನೇ ಅಲೆ ಇಡೀ ದೇಶವನ್ನು ತತ್ತರಿಸುವಂತೆ ಮಾಡಿದೆ. ಆಕ್ಸಿಜನ್ ಕೊರತೆ, ಬೆಡ್ಗಳ ಅಲಭ್ಯತೆ, ಸಂಬಂಧಪಟ್ಟ ಅಧಿಕಾರಿಗಳ ಬೇಕಾಬಿಟ್ಟಿ ವರ್ತನೆ, ಜನಪ್ರತಿನಿಧಿಗಳ ಅಸಂಬಧ್ಧ ಹೇಳಿಕೆಗಳು ಜನರನ್ನು ಕಂಗಾಲಾಗಿಸಿವೆ. ಕಳೆದೊಂದು ವಾರದಲ್ಲಿ ಕರ್ನಾಟಕವೂ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಸೋಂಕಿನ ಪ್ರಕರಣಗಳಿ ಕಡಿಮಮೆಯಾಗುತ್ತಿರುವುದು ಜನರನ್ನು ಕೊಂಚ ನಿರಾಳ ಮಾಡಿದೆಯಾದರೂ ತಜ್ಞರು ಎಚ್ಚರಿಸುತ್ತಿರುವ ಮೂರನೇ ಅಲೆ ಅವರಲ್ಲಿ ಆತಂಕ ಮೂಡಿಸುತ್ತಿದೆ. ಆದರೆ, ಗಮನಿಸಬೇಕಾದ ಸಂಗತಿಯೆಂದರೆ, ಇಂಥ ಸಂಕಷ್ಟದ ಸ್ಥಿತಿಯಲ್ಲೂ ಜನ ಮನಸ್ಸಿಗೆ ಮುದ ನೀಡುವ ಚಟುವಟಿಕೆಗಳ ಮೂಲಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳುತ್ತಿದ್ದ್ದಾರೆ ಮತ್ತು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿ ಬೇರೆಯವರ ಮನಸ್ಸುಗಳನ್ನು ಸಹ ಕೊಂಚಮಟ್ಟಿಗೆ ಹಗುರ ಮಾಡತ್ತಿದ್ದಾರೆ. ಮಿಜೊರಾಂನ ಐಜ್ವಾಲ್ನಲ್ಲಿ ವ್ಯಕ್ತಿಯೊಬ್ಬ ತನ್ನ ಸೋಂಕಿತ ಹೆಂಡತಿಯನ್ನು ಕ್ವಾರಂಟೀನ್ ಸೆಂಟರ್ಗೆ ಒಂದು ವಿಭಿನ್ನ ಬಗೆಯಲ್ಲಿ ಕರೆದುಕೊಂಡು ಹೋಗುತ್ತಿರುವ ಒಂದು ಚಿಕ್ಕ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜನ ಅದನ್ನು ನೋಡಿ ಆನಂದಿಸುತ್ತಿದ್ದಾರೆ.
ಈ ವಿಡಿಯೋದಲ್ಲಿ ಐಜ್ವಾಲ್ ನಗರದ ಬಾಂಗ್ಕಾನ್ ಹೆಸರಿನ ಪ್ರದೆಶದಲ್ಲಿ ಈ ವ್ಯಕ್ತಿ ಕೋವಿಡ್-19 ಸೋಂಕಿತಳಾಗಿರುವ ಪತ್ನಿಯನ್ನು ಕೋವಿಡ್ ಕೇರ್ ಸೆಂಟರ್ಗೆ ಕರೆದೊಯ್ಯುವಾಗ ಆಕೆಯ ಆರೈಕೆಯೆಡೆ ಗಮನ ನೀಡುತ್ತಿರುವುದಲ್ಲದೆ ದೈಹಿಕ ಆಂತರದ ನಿಯಮವನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದಾನೆ. ಆತ ತನ್ನ ಜೀಪಿಗೆ ಒಂದು ಟ್ರೇಲರ್ ಜೋಡಿಸಿದ್ದಾನೆ. ಅದರಲ್ಲಿ ಒಂದು ಕುರ್ಚಿ ಹಾಕಿಕೊಂಡು ಕೂರುವಂತೆ ಹೆಂಡತಿಗೆ ಹೇಳಿದ್ದಾನೆ. ಆಕೆ ಒಂದು ನೀಲಿ ಬಣ್ಣದ ಪ್ಲಾಸ್ಟಿಕ್ ಚೇರನ್ನು ಟ್ರೇಲರ್ನಲ್ಲಿ ಹಾಕಿಕೊಂಡು ಕೂರುತ್ತಾಳೆ. ಆಕೆ ಭದ್ರವಾಗಿ ಕೂತಿರುವುದನ್ನು ಖಾತ್ರಿಪಡಿಸಿಕೊಂಡ ನಂತರ ಅವನು ಐಜ್ವಾಲ್ನ ಗುಡ್ಡಗಾಡು ಪ್ರದೇಶದಲ್ಲಿ ಹಾಕಿರುವ ರಸ್ತೆ ಮೂಲಕ ಸೆಂಟರ್ನೆಡೆ ಜೀಪನ್ನು ಡ್ರೈವ್ ಮಾಡಿಕೊಂಡು ಹೋಗುತ್ತಾನೆ. ಹೊರಡುವ ಮುಂಚೆ ಅವರು ಈ ದೃಶ್ಯವನ್ನು ಪಕ್ಕದ ಒಂದು ಕಟ್ಟಡದಿಂದನ ಸೆರೆ ಹಿಡಿಯುತ್ತಿರುವ ವ್ಯಕ್ತಿಯ ಕಡೆ ಕೈ ಬೀಸುತ್ತಾರೆ. ಮಣಿಪುರಿ ಭಾಷೆಯಲ್ಲಿ ಗಂಡ-ಹೆಂಡತಿ ನಡುವಿನ ಸಂಭಾಷಣೆ ರೆಕಾರ್ಡ್ ಆಗಿದೆ.ಅವನ ಕ್ರಿಯಾಶೀಲತೆ ಜನರ ಮನಸ್ಸನ್ನು ಗೆದ್ದಿದೆ.
ಸ್ಥಳೀಯ ರಾಜಕಾರಣಿ ಎಮ್ಹೊನ್ಲುಮೊ ಕಿಕನ್, ತನ್ನ ಟ್ವೀಟ್ನಲ್ಲಿ, ‘ಕೊವಿಡ್ ಸಮಯದಲ್ಲಿ ಹಾಸ್ಯ,’ ಅಂತ ಹೇಳಿದ್ದಾರೆ. ಕೆಲವರು,’ಕಷ್ಟ-ಸುಖ, ಆರೋಗ್ಯ-ಅನಾರೋಗ್ಯ ಮತ್ತು ಒಳ್ಳೆಯದು-ಕೆಟ್ಟದ್ದು ಮೊದಲಾದವುಗಳಲ್ಲಿ ನಿನ್ನ ಕೈ ಬಿಡೆನು ಎಂದು ಮದುವೆಯಾಗುವಾಗ ಹೆಂಡತಿಗೆ ನೀಡಿದ ಆಶ್ವಾಸನೆಯನ್ನು ಆತ ಅಕ್ಷರಶಃ ನಿಭಾಯಿಸುತ್ತಿದ್ದಾನೆ ಎಂದು ಟ್ವೀಟ್ಗಳಲ್ಲಿ ಹೇಳಿದ್ದಾರೆ. ಈ ವಿಡಿಯೊ ಪತಿ-ಪತ್ನಿ ನಡುವಿನ ಪ್ರೀತಿ ಮತ್ತು ಬಾಂಧವ್ಯವನ್ನು ವ್ಯಾಖ್ಯಾನಿಸುತ್ತದೆ ಎಂದು ಮತ್ತೆ ಕೆಲವರು ಹೇಳಿದ್ದಾರೆ.
ಆತನ ಕ್ರಿಯಾತ್ಮಕ ಪರಿಹಾರವನ್ನು ಮೆಚ್ಚಿರುವ ನೆಟ್ಟಿಗರು ಆತನ ಪತ್ನಿಗೆ ಶೀಘ್ರವಾಗಿ ಗುಣಮುಖವಾಗಲಿ ಅಂತ ಹಾರೈಸಿದ್ದಾರೆ. ಭಾರತದಲ್ಲಿ ಜನ ಇವರ ಹಾಗೆ ಗಂಭೀರವಾಗಿ ಕೊವಿಡ್ ನಿಯಮಗಳನ್ನು ಪಾಲಿಸದರೆ, ಕೊವಿಡ್ ಸೋಂಕು ನಿಸ್ಸಂದೇಹವಾಗಿ ಕಡಿಮೆಯಾಗುತ್ತದೆ ಅಂತ ಅವರು ಹೇಳಿದ್ದಾರೆ.
ಇದನ್ನೂ ಓದಿ: Viral Video: ಅಮ್ಮನಿಗೆ ಮಗನಿಂದ ಸರ್ಪ್ರೈಸ್ ಕಾರ್ ಗಿಫ್ಟ್; ಹೋ.. ಅಂದ ಅಮ್ಮನ ಪ್ರತಿಕ್ರಿಯೆಗೆ ಮಗ ಕಂಗಾಲು
Published On - 10:23 pm, Thu, 3 June 21