ತಮಿಳುನಾಡು: ಡೆಡ್‌ಲಿಫ್ಟಿಂಗ್ ಎಂದಾಕ್ಷಣ ಕಟ್ಟು ಮಸ್ತಿನ ದೇಹದಾಡ್ಯರು ನೆನಪಾಗುವುದು ಸಹಜ. ಆದರೆ ಕೊಯಮತ್ತೂರಿನ ಡೆಡ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ 82 ವರ್ಷದ ಅಜ್ಜಿಯೊಬ್ಬರು ಸ್ಪರ್ಧಿಸಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ . ಕಳೆದ ವಾರ ಕೊಯಮತ್ತೂರಿನಲ್ಲಿ ನಡೆದ ‘ಸ್ಟ್ರಾಂಗ್ ಮ್ಯಾನ್ ಆಫ್ ಸೌತ್ ಇಂಡಿಯಾ’ ಸ್ಪರ್ಧೆಯಲ್ಲಿ ಪೊಲ್ಲಾಚಿಯ ಕಿತ್ತಮ್ಮಾಳ್ (82) ಭಾಗವಹಿಸಿದ್ದು, ಮಹಿಳೆಯರ ಮುಕ್ತ ವಿಭಾಗದಲ್ಲಿ 30 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರ ಜೊತೆಗೆ ಪೈಪೋಟಿ ನೀಡಿ ಸಲೀಸಾಗಿ 50 ಕೆಜಿ ಭಾರ ಎತ್ತುವ ಮೂಲಕ 82ನೇ ವಯಸ್ಸಿನಲ್ಲೂ ‘age just a number’ ಎಂದು ಸಾಧಿಸಿ ತೋರಿಸಿದ್ದಾರೆ.
ಕಿತ್ತಮ್ಮಾಳ್ ಅವರು ತಮ್ಮ ಪತಿ ನಿವೃತ್ತ ಆರೋಗ್ಯ ಇಲಾಖೆ ಸಿಬ್ಬಂದಿಯಾಗಿರುವ ವೆಂಕಟ್ರಾಮನ್ ಅವರೊಂದಿಗೆ ವಾಸಿಸುತ್ತಿದ್ದಾರೆ. ಅವರೊಂದಿಗೆ ವಾಸಿಸುತ್ತಿರುವ ಆಕೆಯ ಇಬ್ಬರು ಮೊಮ್ಮಕ್ಕಳು ಎಸ್ ರೋಹಿತ್ (16) ಮತ್ತು ಎಸ್ ರಿತಿಕ್ (23) ಪವರ್‌ಲಿಫ್ಟಿಂಗ್ ಅಭ್ಯಾಸ ಮಾಡುತ್ತಿದ್ದರು. ಇತ್ತೀಚಿಗಷ್ಟೇ ಫೆಬ್ರವರಿಯಲ್ಲಿ ಗುಜರಾತ್‌ನಲ್ಲಿ ಇಂಡಿಯನ್ ಪವರ್‌ಲಿಫ್ಟಿಂಗ್ ಫೆಡರೇಶನ್ ನಡೆಸಿದ ರಾಷ್ಟ್ರೀಯ ಮಟ್ಟದ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮೊಮ್ಮಗ ಎಸ್ ರಿತಿಕ್ ಚಿನ್ನದ ಪದಕ ಗೆದ್ದಿದ್ದರು. ಇದಲ್ಲದೇ ಆರು ತಿಂಗಳಿನಿಂದ ರಿತಿಕ್ ತನ್ನ ಅಜ್ಜಿಯನ್ನು ಜಿಮ್‌ಗೆ ಕರೆದೊಯ್ದತ್ತಿದ್ದು, ಅಲ್ಲಿ ಅವನು ಅವರಿಗೆ ನಿಯಮಿತವಾಗಿ ತರಬೇತಿ ನೀಡುತ್ತಿದ್ದನು.
ಇದನ್ನೂ ಓದಿ: ಸಂತೋಷ, ಆರೋಗ್ಯ ವೃದ್ಧಿಗಾಗಿ ಮುಖಕ್ಕೆ ಮಸಿ ಬಳಿದು ಸಂಭ್ರಮಿಸುತ್ತಾರೆ ಇಲ್ಲಿನ ಜನ
82 ನೇ ವಯಸ್ಸಿನಲ್ಲೂ ಇಷ್ಟು ಶಕ್ತಿಶಾಲಿಯಾಗಿ ಹಾಗೂ ಆರೋಗ್ಯವಾಗಿರಲು ಕಾರಣ ನನ್ನ ಆಹಾರ ಕ್ರಮ ಎಂದು ಹೇಳುತ್ತಾರೆ ಕಿತ್ತಮ್ಮಾಳ್. ಬಾಲ್ಯದಿಂದಲೂ ಇವರು ಆಹಾರದಲ್ಲಿ ರಾಗಿ, ಮೊಟ್ಟೆ, ನುಗ್ಗೆ ಸೊಪ್ಪು ಮತ್ತು ಬೇಯಿಸಿದ ತರಕಾರಿಗಳಿಂದ ಮಾಡಿದ ಗಂಜಿ ಸೇವಿಸುತ್ತಾ ಬಂದಿದ್ದಾರೆ. ತನ್ನ ಆಹಾರ ಪದ್ಧತಿಯೇ ತನ್ನ ಶಕ್ತಿಯ ರಹಸ್ಯ ಎಂದು ಅವರು ಹೇಳುತ್ತಾರೆ. “ನಾನು ಭವಿಷ್ಯದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಡೆಡ್‌ಲಿಫ್ಟ್ (ಪವರ್‌ಲಿಫ್ಟಿಂಗ್‌ನ ಒಂದು ಭಾಗ) ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕಗಳನ್ನು ಗೆಲ್ಲಲು ಯೋಜಿಸುತ್ತಿದ್ದೇನೆ” ಎಂದು ಕಿತ್ತಮ್ಮಲ್ ಹೇಳಿರುವುದು ದಿ ಟೈಮ್ ಆಪ್ ಇಂಡಿಯಾ ವರದಿ ಮಾಡಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ