Deepavali 2024: ಭಾರತವಷ್ಟೇ ಅಲ್ಲ ಈ ದೇಶಗಳಲ್ಲೂ ನಡೆಯುತ್ತೆ ವೈಭವದ ದೀಪಾವಳಿ ಸಂಭ್ರಮ

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 24, 2024 | 3:46 PM

ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದಾದ ದೀಪಾವಳಿ ಹಬ್ಬ ಬಂದೇ ಬಿಡ್ತು. ಈ ಹಬ್ಬವನ್ನು ದೇಶಾದ್ಯಂತ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಹೆಚ್ಚಿನವರು ಈ ಹಬ್ಬವನ್ನು ಕೇವಲ ಭಾರತದಲ್ಲಿ ಮಾತ್ರ ಆಚರಿಸಲಾಗುತ್ತದೆ ಎಂದು ಅಂದುಕೊಂಡಿರುತ್ತಾರೆ. ಆದ್ರೆ ನಿಮ್ಗೊತ್ತಾ ಭಾರತದಲ್ಲಿ ಮಾತ್ರವಲ್ಲದೆ ಇನ್ನೂ ಕೆಲವು ದೇಶಗಳಲ್ಲಿಯೂ ಬೆಳಕಿನ ಹಬ್ಬ ದೀಪಾವಳಿಯನ್ನು ಬಹಳ ವೈಭವದಿಂದ ಆಚರಿಸಲಾಗುತ್ತದೆ. ನಮ್ಮ ದೇಶದಂತೆ ದೀಪಾವಳಿ ಹಬ್ಬವನ್ನು ವೈಭವದಿಂದ ಆಚರಿಸುವ ದೇಶಗಳು ಯಾವುವು ಎಂಬ ಮಾಹಿತಿ ಇಲ್ಲಿದೆ.

Deepavali 2024: ಭಾರತವಷ್ಟೇ ಅಲ್ಲ ಈ ದೇಶಗಳಲ್ಲೂ ನಡೆಯುತ್ತೆ ವೈಭವದ ದೀಪಾವಳಿ ಸಂಭ್ರಮ
ಸಾಂದರ್ಭಿಕ ಚಿತ್ರ
Follow us on

ಬೆಳಕಿನ ಹಬ್ಬ ದೀಪಾವಳಿಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಬೆಳಕಿನ ಹಬ್ಬ ಬಂತೆಂದರೆ ಸಾಕು ವಿಧವಿಧಗ ಪಟಾಕಿಗಳನ್ನು ಹೊಡೆಯುವ ಮೂಲಕ ಮನೆಯಲ್ಲಿ ದೀಪಗಳನ್ನು ಬೆಳಗುವ ಮೂಲಕ ಸಿಹಿಯನ್ನು ಹಂಚುವ ಮೂಲಕ ಜನ ಸಂಭ್ರಮಿಸುತ್ತಾರೆ. ಹೀಗೆ ನಮ್ಮ ಭಾರತದಲ್ಲಿ ಹಿಂದೂಗಳ ಈ ಪವಿತ್ರ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ನಿಮ್ಗೊತ್ತಾ ನಮ್ಮ ದೇಶದಲ್ಲಿ ವೈಭವದಿಂದ ಬೆಳಕಿನ ಹಬ್ಬವನ್ನು ಆಚರಿಸುವಂತೆ, ಕೆಲವೊಂದು ದೇಶಗಳಲ್ಲಿ ಕೂಡಾ ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ನಮ್ಮ ದೇಶದಂತೆ ದೀಪಾವಳಿ ಹಬ್ಬವನ್ನು ವೈಭವದಿಂದ ಆಚರಿಸುವ ದೇಶಗಳು ಯಾವುವು ಎಂಬುವುದನ್ನು ನೋಡೋಣ ಬನ್ನಿ.

ಭಾರತದಂತೆ ದೀಪಾವಳಿ ಹಬ್ಬವನ್ನು ವೈಭವದಿಂದ ಆಚರಿಸುವ ದೇಶಗಳಿವು:

ನೇಪಾಳ:

ನೇಪಾಳದಲ್ಲಿ ದೀಪಾವಳಿ ಹಬ್ಬವನ್ನು ತಿಹಾರ್‌ ಎಂಬ ಹೆಸರಿನಲ್ಲಿ ಆಚರಿಸಲಾಗುತ್ತದೆ. ಬರೋಬ್ಬರಿ ಐದು ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ ವಿವಿಧ ದೇವತೆಗಳನ್ನು ಪೂಜಿಸುವುದರ ಜೊತೆ ಜೊತೆಗೆ ಪ್ರಾಣಿಗಳಿಗೆ ಕೂಡಾ ಗೌರವವನ್ನು ಸಲ್ಲಿಸಲಾಗುತ್ತದೆ. ಈ ಹಬ್ಬದ ಐದು ದಿನ ಕುಟುಂಬಸ್ಥರೆಲ್ಲಾ ಜೊತೆಯಾಗಿ ಮನೆಗಳನ್ನು ಹೂವಿನ ಅಲಂಕಾರ ಮಾಡಿ, ದೀಪಗಳು ಹಾಗೂ ಮೇಣದ ಬತ್ತಿಯನ್ನು ಬೆಳಗಿಸುತ್ತಾರೆ.

ಮಲೇಷ್ಯಾ:

ಭಾರತದಲ್ಲಿ ವಿಜೃಂಭಣೆಯಿಂದ ದೀಪಾವಳಿ ಹಬ್ಬವನ್ನು ಆಚರಿಸುವಂತೆ ಮಲೇಷ್ಯಾದಲ್ಲೂ ಆಚರಿಸಲಾಗುತ್ತದೆ. ಇಲ್ಲಿ ಈ ಹಬ್ಬವನ್ನು ʼಹರಿ ದೀಪಾವಳಿʼ ಹೆಸರಿನಲ್ಲಿ ಆಚರಿಸಲಾಗುತ್ತದೆ. ಬೆಳಕಿನ ಹಬ್ಬದ ಸಂದರ್ಭದಲ್ಲಿ ಬೀದಿ ಬೀದಿಗಳಿಂದ ಹಿಡಿದು ಪ್ರತಿಯೊಂದು ಮನೆಗಳನ್ನು ಇಲ್ಲಿ ದೀಪಗಳು ಹಾಗೂ ವಿವಿಧ ವರ್ಣ ರಂಜಿತ ವಸ್ತುಗಳಿಂದ ಅಲಂಕರಿಸಲಾಗುತ್ತದೆ. ಹಾಗೂ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೂಡಾ ಆಯೋಜಿಸುತ್ತಾರೆ. ಅಷ್ಟೇ ಅಲ್ಲದೆ ಮಲೇಷ್ಯಾದ ಜನರು ಈ ಮಂಗಳಕರ ದಿನದಂದು ಭಾರತೀಯ ಸಾಂಪ್ರದಾಯಿಕ ಪಾಕ ಪದ್ಧತಿಗಳನ್ನು ಸವಿಯುತ್ತಾರೆ. ವಿಶೇಷವೆಂದರೆ ಈ ಹಬ್ಬದಂದು ದೇಶದ ಜನರಿಗೆ ಸಾರ್ವಜನಿಕ ರಜೆ ಕೂಡಾ ಇದೆ.

ಶ್ರೀಲಂಕಾ:

ಭಾರತದ ನೆರೆಯ ರಾಷ್ಟ್ರ ಶ್ರೀಲಂಕಾದಲ್ಲೂ ದೀಪಾವಳಿ ಹಬ್ಬವನ್ನು ವೈಭವದಿಂದ ಆಚರಿಸಲಾಗುತ್ತದೆ. ಇಲ್ಲಿನ ತಮಿಳರು ರಾವಣನ ಮೇಲೆ ರಾಮ ವಿಜಯ ಸಾಧಿಸಿದ ಸಂಕೇತವಾಗಿ ದುಷ್ಟರ ಮೇಲೆ ಒಳ್ಳೆತನದ ವಿಜಯದ ಆಚರಣೆಯಾಗಿ ಈ ಹಬ್ಬವನ್ನು ಆಚರಿಸುತ್ತಾರೆ. ಈ ದಿನ ಜನರು ತಮ್ಮ ಮನೆಗಳಲ್ಲಿ ದೀಪಗಳು ಹಾಗೂ ಮೇಣದ ಬತ್ತಿಗಳನ್ನು ಬೆಳಗುತ್ತಾರೆ.

ಅಮೇರಿಕಾ:

ಅಮೇರಿಕಾದಲ್ಲಿ ಭಾರತೀಯ ಮೂಲದವರು ಹೆಚ್ಚಿದ್ದು, ಇವರೆಲ್ಲಾ ಜೊತೆ ಸೇರಿ ಪ್ರತಿವರ್ಷ ದೀಪಾವಳಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ಅಷ್ಟೇ ಅಲ್ಲದೆ ಹಿಂದೂಗಳ ಧಾರ್ಮಿಕ ನಂಬಿಕೆಗೆ ಗೌರವವನ್ನು ನೀಡಲು ಅಮೇರಿಕಾದಲ್ಲಿ ದೀಪಾವಳಿ ಹಬ್ಬಕ್ಕೆ ರಾಷ್ಟ್ರೀಯ ರಜಾದಿನವನ್ನು ಕೂಡಾ ನೀಡುತ್ತದೆ. ಹಿಂದೂಗಳು ಮಾತ್ರವಲ್ಲದೆ ಅಮೇರಿಕಾದ ಇತರ ಸಮುದಾಯಗಳು ಕೂಡಾ ದೀಪಾವಳಿಯನ್ನು ಆಚರಿಸುತ್ತದೆ. ಅಮೇರಿಕಾದ ವೈಟ್‌ ಹೌಸ್‌ ಬಳಿಯೂ ದೀಪಾವಳಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಸಿಂಗಾಪುರ:

ಸಿಂಗಾಪುರದಲ್ಲಿಯೂ ಭಾರತೀಯ ಮೂಲದವರು ಹೆಚ್ಚಿದ್ದು, ಇಲ್ಲಿಯೂ ಕೂಡಾ ದೀಪಾವಳಿ ಸಂಭ್ರಮ ಜೋರಿರುತ್ತದೆ. ಇಲ್ಲಿ ಬೆಳಕಿನ ಹಬ್ಬದ ಸಂದರ್ಭದಲ್ಲಿ ಜನರಿಗೆ ಸಾರ್ವಜನಿಕ ರಜೆ ಕೂಡಾ ಇದೆ. ಸಿಂಗಾಪುರದಲ್ಲಿ ಲಿಟಲ್‌ ಇಂಡಿಯಾ ಎಂಬ ಪ್ರದೇಶವಿದ್ದು, ಇಲ್ಲಿ ಭಾರತೀಯರೆಲ್ಲಾ ಒಟ್ಟಾಗಿ ಪಟಾಕಿಗಳನ್ನು ಸಿಡಿಸದೆ ದೀಪ ಹಚ್ಚುವ ಹಾಗೂ ಸಿಹಿ ಹಂಚುವ ಮೂಲಕ ಹಬ್ಬವನ್ನು ಆಚರಿಸುತ್ತಾರೆ.

ಮಾರಿಷಸ್:‌

ಭಾರತದಂತೆ ಮಾರಿಷಸ್‌ನಲ್ಲಿಯೂ ದೀಪಾವಳಿ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಮಾರಿಷಸ್‌ ಸಂಸ್ಕೃತಿಯಲ್ಲಿ ಭಾರತದ ಪ್ರಭಾವ ಹಾಸುಹೊಕ್ಕಾಗಿದ್ದು, ಈ ದ್ವೀಪದಲ್ಲೂ ಕೂಡಾ ಹಿಂದೂ ಹಬ್ಬವಾದ ದೀಪಾವಳಿಯನ್ನು ಬಹಳ ವೈಭವದಿಂದ ಆಚರಿಸಲಾಗುತ್ತದೆ. ಅಷ್ಟೇ ಅಲ್ಲದೆ ಇಲ್ಲಿನ ಜನರು ಹೋಳಿ ಮತ್ತು ಮಹಾ ಶಿವರಾತ್ರಿ ಹಬ್ಬವನ್ನು ಕೂಡಾ ಆಚರಿಸುತ್ತಾರೆ.

ಇದನ್ನೂ ಓದಿ: ಮಂಗಳೂರಿಗರೇ… ಈ ದೀಪಾವಳಿಗೆ ಮುಗ್ಧ ಮನಸ್ಸುಗಳು ಪ್ರೀತಿಯಿಂದ ತಯಾರಿಸಿದ ಬಣ್ಣದ ಹಣತೆಗಳನ್ನು ಖರೀದಿಸಿ

ಯುನೈಟೆಡ್‌ ಕಿಂಗ್ಡಮ್:

ಇಂಗ್ಲೇಂಡಿನ ಲಿಸೇಸ್ಟರ್‌ ನಗರದಲ್ಲಿಯೂ ಕೂಡಾ ದೀಪಾವಳಿ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇಲ್ಲಿ ಬೆಳಕಿನ ಹಬ್ಬದ ದಿನ ಇಡೀ ನಗರವನ್ನು ದೀಪಗಳಿಂದ ಅಲಂಕರಿಸಲಾಗುತ್ತದೆ. ಮತ್ತು ದೀಪಾವಳಿ ಹಬ್ಬದ ದಿನ ಇಲ್ಲಿ ವಿವಿಧ ಕಾರ್ಯಕಗ್ರಮಗಳನ್ನು ಕೂಡಾ ಆಯೋಜನೆ ಮಾಡಲಾಗುತ್ತದೆ ಆಚರಿಸಲಾಗುತ್ತದೆ.

ಆಸ್ಟ್ರೇಲಿಯಾ:

ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಭಾರತೀಯ ಸಮುದಾಯದವರು ಸಿಡ್ನಿ ಮತ್ತು ಮೆಲ್ಬೋರ್ನ್‌ನಂತಹ ನಗರಗಳಲ್ಲಿ ಒಗ್ಗೂಡಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಭಾರತೀಯ ಭಕ್ಷ್ಯಗಳನ್ನು ತಯಾರಿಸುವ ಮೂಲಕ ಬೆಳಕಿನ ಹಬ್ಬ ದೀಪಾವಳಿಯನ್ನು ಬಹಳ ವಿಶೇಷವಾಗಿ ಆಚರಿಸುತ್ತಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ