ಓದಲು ನೆರವಾಗಿ ಸಾಕು..! ಜಿಯೋ ಹಾಟ್ಸ್ಟಾರ್ ಡೊಮೈನ್ ನೊಂದಾಯಿಸಿದ್ದ ಟೆಕ್ಕಿಯ ಬೇಡಿಕೆಗೆ ಬಗ್ಗದ ರಿಲಾಯನ್ಸ್
JioHotstar web domain name controversy: ರಿಲಾಯನ್ಸ್ ಸಂಸ್ಥೆ ಡಿಸ್ನಿಯಿಂದ ಹಾಟ್ಸ್ಟಾರ್ ಖರೀದಿಸಲು ಅಂತಿಮ ಹಂತದಲ್ಲಿದೆ. ಈ ಡೀಲ್ಗೆ ಮಾತುಕತೆ ಆರಂಭವಾಗುವ ಮುನ್ನವೇ ದಿಲ್ಲಿಯ ಟೆಕ್ಕಿಯೊಬ್ಬ ಜಿಯೋ ಹಾಟ್ಸ್ಟಾರ್ ಹೆಸರಿನ ಡೊಮೈನ್ ಅನ್ನು ನೊಂದಾಯಿಸಿಕೊಂಡುಬಿಟ್ಟಿದ್ದಾನೆ. ಇದೀಗ ತಾನು ಕೇಂಬ್ರಿಡ್ಜ್ನಲ್ಲಿ ಓದಲು ರಿಲಾಯನ್ಸ್ ಸ್ಪಾನ್ಸರ್ ಮಾಡಿದರೆ ಡೊಮೈನ್ ಬಿಟ್ಟುಕೊಡುವುದಾಗಿ ಟೆಕ್ಕಿ ಹೇಳಿದ್ದಾನೆ. ರಿಲಾಯನ್ಸ್ ಇದಕ್ಕೆ ಒಪ್ಪಿಲ್ಲ ಎನ್ನಲಾಗಿದೆ.
ನವದೆಹಲಿ, ಅಕ್ಟೋಬರ್ 24: ಅಂತರ್ಜಾಲದಲ್ಲಿ ಡೊಮೈನ್ ಬಿಸಿನೆಸ್ ಜೋರಾಗಿ ನಡೆಯುತ್ತದೆ. ಪ್ರಮುಖ ಡೊಮೈನ್ಗಳನ್ನು ಖರೀದಿಸಿ, ಬಳಿಕ ಅದನ್ನು ಹೆಚ್ಚು ಲಾಭಕ್ಕೆ ಮರುಮಾರಾಟ ಮಾಡುತ್ತಾರೆ. ಕೆಲವೊಮ್ಮೆ ಹೆಸರಾಂತ ಬ್ರ್ಯಾಂಡ್ಗಳು ಸ್ಥಾಪನೆಯಾದಾಗ, ಅವು ವೆಬ್ಸೈಟ್ ತೆರೆಯಲು ಡೊಮೈನ್ ನೊಂದಣಿಗೆ ಹೋದಾಗ ಅದಾಗಲೇ ರಿಜಿಸ್ಟರ್ ಆಗಿರುತ್ತದೆ. ಕಾನೂನು ಮಾರ್ಗದ ಮೂಲಕ ಅದನ್ನು ಪಡೆಯಲು ವರ್ಷಗಟ್ಟಲೆ ಆಗಬಹುದು. ಹೀಗಾಗಿ, ಡೊಮೈನ್ ನೊಂದಾಯಿಸಿದ ವ್ಯಕ್ತಿ ಜೊತೆ ಕೂತು ಸಂಧಾನ ನಡೆಸಿ ಡೊಮೈನ್ ಹಕ್ಕು ಪಡೆಯಬೇಕಾಗುತ್ತದೆ. ಈ ವಿಚಾರ ಪ್ರಸ್ತಾಪಿಸಲು ಕಾರಣವಾಗಿರುವುದು ಜಿಯೋ ಹಾಟ್ಸ್ಟಾರ್ ವಿಚಾರ. ಡೆಲ್ಲಿ ಮೂಲದ ಟೆಕ್ಕಿಯೊಬ್ಬರು ಜಿಯೋ ಹಾಟ್ಸ್ಟಾರ್ ಡೊಮೈನ್ ರಿಜಿಸ್ಟರ್ ಮಾಡಿದ್ದಾರೆ. ಇಲ್ಲಿ ಎರಡು ವಿಚಾರ ಇಂಟರೆಸ್ಟಿಂಗ್ ಇದೆ. ಒಂದು, ಈತ ಡೊಮೈನ್ ಮಾರಿ ಹಣ ಮಾಡುವ ಉದ್ದೇಶ ಹೊಂದಿಲ್ಲ. ಈತ ಕೇಂಬ್ರಿಡ್ಜ್ ಯೂನಿವರ್ಸಿಟಿಯಲ್ಲಿ ಪದವಿ ಓದಲು ರಿಲಾಯನ್ಸ್ ತನಗೆ ಸ್ಪಾನ್ಸರ್ ಮಾಡುತ್ತೆ ಎನ್ನುವ ಆಶಯ ಇಟ್ಟುಕೊಂಡಿದ್ದಾನೆ. ಎರಡನೇ ಸಂಗತಿ ಎಂದರೆ, ಈತ ಜಿಯೋ ಮತ್ತು ಹಾಟ್ಸ್ಟಾರ್ ಡೀಲ್ ಆಗುವ ವರ್ಷದ ಮುಂಚೆಯೇ ಅದನ್ನು ಗ್ರಹಿಸಿ ಡೊಮೈನ್ ರಿಜಿಸ್ಟರ್ ಮಾಡಿರುವುದು.
ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ರಿಲಾಯನ್ಸ್ ಸಂಸ್ಥೆ ಈತನ ಬೇಡಿಕೆಗೆ ಒಪ್ಪಿಲ್ಲವಂತೆ. ರಿಲಾಯನ್ಸ್ನಂತಹ ಬಲಿಷ್ಠ ಕಂಪನಿ ಜೊತೆ ತಾನು ಹೋರಾಟ ಮಾಡಲು ಸಾಧ್ಯವಾ ಎನ್ನುವ ಹತಾಶೆಯಲ್ಲಿ ಈತನಿದ್ದಾನೆ. ಹಾಗಂತ ಆತ ತನ್ನ ಜಿಯೋಹಾಟ್ಸ್ಟಾರ್ ವೆಬ್ ಪೇಜ್ನಲ್ಲಿ ಬರೆದುಕೊಂಡಿದ್ದಾನೆ.
ಜಿಯೋ ಹಾಟ್ಸ್ಟಾರ್ ಡೊಮೈನ್ ನೊಂದಣಿಯ ಕಥೆ
‘ಐಪಿಎಲ್ ಸ್ಟ್ರೀಮಿಂಗ್ ಲೈಸೆನ್ಸ್ ಕೈತಪ್ಪಿದ ಬಳಿಕ ಹಾಟ್ಸ್ಟಾರ್ಗೆ ನಿತ್ಯದ ಆ್ಯಕ್ಟಿವ್ ಯೂಸರ್ಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಡಿಸ್ನಿ ಸಂಸ್ಥೆ ಹಾಟ್ಸ್ಟಾರ್ ಅನ್ನು ಭಾರತೀಯ ಕಂಪನಿಯೊಂದಕ್ಕೆ ಮಾರಲು ಅಥವಾ ವಿಲೀನಗೊಳಿಸಲು ಆಲೋಚಿಸುತ್ತಿದೆ ಎನ್ನುವ ಸುದ್ದಿ ಬಂತು. ಆಗ ಸೋನಿ ಮತ್ತು ಝೀ ವಿಲೀನ ಪ್ರಯತ್ನ ನಡೆದಿತ್ತು. ಆ ಸಂದರ್ಭದಲ್ಲಿ ಹಾಟ್ಸ್ಟಾರ್ ಅನ್ನು ಖರೀದಿಸಲು ಶಕ್ತಿ ಇರುವ ಒಂದೇ ಸಂಸ್ಥೆ ಎಂದರೆ ರಿಲಾಯನ್ಸ್ ಮಾತ್ರ ಎನಿಸಿತು.
ಇದನ್ನೂ ಓದಿ: ಬೆಂಗಳೂರು ಬಿಟ್ಟು ಆಂಧ್ರಕ್ಕೆ ಬನ್ನಿ ಎಂದ ಸಚಿವರ ಕರೆಗೆ ಸಿಲಿಕಾನ್ ಸಿಟಿ ಉದ್ಯಮಿಗಳ ರಿಯಾಕ್ಷನ್ ಹೀಗಿತ್ತು..!
‘ರಿಲಾಯನ್ಸ್ ಸಂಸ್ಥೆ ಸಾವನ್ ಎನ್ನುವ ಮ್ಯೂಸಿಕ್ ಸ್ಟ್ರೀಮಿಂಗ್ ಆ್ಯಪ್ ಅನ್ನು ಖರೀದಿಸಿದಾಗ ಜಿಯೋಸಾವನ್ ಎಂದು ಹೆಸರಿಟ್ಟಿತು. ಈಗ ಒಂದು ವೇಳೆ ಹಾಟ್ಸ್ಟಾರ್ ಅನ್ನು ರಿಲಾಯನ್ಸ್ನವರು ಖರೀದಿಸಿದರೆ ಜಿಯೋಹಾಟ್ಸ್ಟಾರ್ ಎಂದು ರೀಬ್ರ್ಯಾಂಡ್ ಮಾಡಬಹುದು ಎಂದು ಊಹಿಸಿದೆ. ಹಾಗಂತ ಡೊಮೈನ್ ಪರಿಶೀಲಿಸಿದಾಗ ಅದಿನ್ನೂ ಅಸ್ತಿತ್ವದಲ್ಲಿರಲಿಲ್ಲ. ನಾನು ರಿಜಿಸ್ಟರ್ ಮಾಡಿದೆ,’ ಎಂದು ಈ ವ್ಯಕ್ತಿ ತನ್ನ ಪೇಜ್ನಲ್ಲಿ ಬರೆದುಕೊಂಡಿದ್ದಾನೆ.
ಕೇಂಬ್ರಿಡ್ಜ್ನಲ್ಲಿ ಓದಲು ಸ್ಪಾನ್ಸರ್ ಮಾಡಬೇಕು…
ದೆಹಲಿ ಮೂಲದ ಟೆಕ್ಕಿ ಎಂದೆನ್ನುವ ಈ ಯುವಕ ತನ್ನ ಹೆಸರನ್ನು ತಿಳಿಸಿಲ್ಲ. ಆದರೆ, ಐಐಟಿಯಲ್ಲಿ ಸೀಟು ಸಿಕ್ಕದ ತನಗೆ ಕೇಂಬ್ರಿಡ್ಜ್ನಲ್ಲಿ ಆಂಟ್ರಪ್ರನ್ಯೂರ್ ಸಬ್ಜೆಕ್ಟ್ನಲ್ಲಿ ಪದವಿ ಮಾಡಲು ಅವಕಾಶ ಸಿಕ್ಕಿದೆ. ಆದರೆ, ಬಹಳ ದುಬಾರಿ ಆಗುತ್ತದೆ. ಅಷ್ಟು ಭರಿಸುವಷ್ಟು ಸಂಪನ್ಮೂಲ ತನ್ನಲ್ಲಿಲ್ಲ. ಜಿಯೋಹಾಟ್ಸ್ಟಾರ್ ಡೊಮೈನ್ ಬದಲಾಗಿ ರಿಲಾಯನ್ಸ್ ತನಗೆ ಕೇಂಬ್ರಿಡ್ಜ್ನಲ್ಲಿ ಓದಲು ನೆರವಾಗುವ ವಿಶ್ವಾಸ ಇದೆ ಎಂದಿದ್ದಾನೆ.
ಇದನ್ನೂ ಓದಿ: ದೇಶದ ಹಿತಾಸಕ್ತಿಗೆ ಮೊದಲ ಆದ್ಯತೆ; ಕಣ್ಮುಚ್ಚಿ ಎಫ್ಡಿಐ ಸ್ವೀಕರಿಸಲು ಆಗಲ್ಲ: ನಿರ್ಮಲಾ ಸೀತಾರಾಮನ್
ಟೆಕ್ಕಿ ಮಾತಿಗೆ ಬಗ್ಗೆ ರಿಲಾಯನ್ಸ್?
ಜಿಯೋಹಾಟ್ಸ್ಟಾರ್ ಡೊಮೈನ್ನಲ್ಲಿ ಈತ ಇವತ್ತಿನ ಅಪ್ಡೇಟ್ ಹಾಕಿದ್ದಾನೆ. ಅದರ ಪ್ರಕಾರ ಕೇಂಬ್ರಿಡ್ಜ್ನಲ್ಲಿ ಓದಲು 93,345 ಪೌಂಡ್ (ಸುಮಾರು ಒಂದು ಕೋಟಿ ರೂ) ಸ್ಪಾನ್ಸರ್ ಮಾಡಬೇಕೆಂಬ ತನ್ನ ಮನವಿಯನ್ನು ರಿಲಾಯನ್ಸ್ನ ಪ್ರತಿನಿಧಿ ತಿರಸ್ಕರಿಸಿದ್ದಾರೆ. ರಿಲಾಯನ್ಸ್ ಕಾನೂನು ಕ್ರಮಕ್ಕೆ ಹೋಗಬಹುದು. ತಾನು ಯಾವುದೇ ಟ್ರೇಡ್ಮಾರ್ಕ್ ನಿಯಮ ಉಲ್ಲಂಘಿಸಿಲ್ಲ. ಆದರೆ, ರಿಲಾಯನ್ಸ್ ವಿರುದ್ಧ ನಿಲ್ಲುವ ಶಕ್ತಿ ತನಗೆ ಇಲ್ಲ. ಕೆಲವೇ ಗಂಟೆಗಳಲ್ಲಿ ಈ ಡೊಮೈನ್ ತನ್ನ ಕೈತಪ್ಪಬಹುದು ಎಂದು ಈ ವ್ಯಕ್ತಿ ಬರೆದಿದ್ದಾನೆ.
ಜಿಯೋಹಾಟ್ಸ್ಟಾರ್ ವೆಬ್ ಡೊಮೈನ್ ವಿಳಾಸ ಇಂತಿದೆ: jiohotstar.com/
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:13 pm, Thu, 24 October 24