ಇತ್ತೀಚಿನ ದಿನಗಳಲ್ಲಿ ಮನುಷ್ಯನಲ್ಲಿ ಮಾನವೀಯತೆ ಎಂಬುದೇ ಸತ್ತು ಹೋಗಿದೆ. ಸಣ್ಣಪುಟ್ಟ ವಿಚಾರಕ್ಕೆ ಕೊಲೆ ಮಾಡುವುದು, ಬಟ್ಟೆ ಹರಿದು ಹಲ್ಲೆ ನಡೆಸುವುದು, ಬೀಡಾಡಿ ಪ್ರಾಣಿಗಳಿಗೆ ವಿಷ ನೀಡಿ ಕೊಲ್ಲುವುದು ಇಂತಹ ಹಲವಾರು ಅಮಾನವೀಯ ಘಟನೆಗಳ ಸುದ್ದಿಗಳು ಆಗಾಗ್ಗೆ ಕೇಳಿಬರುತ್ತಿರುತ್ತವೆ. ಸದ್ಯ ಅಂತಹದ್ದೇ ಅಮಾನವೀಯ ಘಟನೆಯೊಂದು ನಡೆದಿದ್ದು, ಸಾಕು ನಾಯಿಯನ್ನು ಕದಿಯಲು ಯತ್ನಿಸಿದ್ದಾನೆ ಎಂಬ ಕಾರಣಕ್ಕೆ ಬಾರ್ ಸಿಬ್ಬಂದಿಯು ಪಾನಮತ್ತ ವ್ಯಕ್ತಿಗೆ ಥಳಿಸಿದ್ದು ಮಾತ್ರವಲ್ಲದೆ, ಆತನನ್ನು ಪಂಜರದಲ್ಲಿ ಬಂಧಿಸಿ ಅಮಾನವೀಯ ಕೃತ್ಯ ಮೆರೆದಿದ್ದಾನೆ.
ಈ ಅಮಾನುಷ ಘಟನೆ ವಿಜಯಪುರದಲ್ಲಿ ನಡೆದಿದ್ದು, ಅಲ್ಲಿನ ಬಬಲೇಶ್ವರ ರಸ್ತೆಯಲ್ಲಿರುವ ಸಾಯಿ ಪ್ರಭಾತ್ ಬಾರ್ ನ ಸಿಬ್ಬಂದಿ ಕುಡಿದ ಮತ್ತಿನಲ್ಲಿ ಬಾರ್ನ ಸಾಕು ನಾಯಿಯನ್ನು ಕದ್ದುಕೊಂಡು ಹೋಗಿದ್ದಾನೆ ಎಂಬ ಕಾರಣಕ್ಕೆ ಪಾನಮತ್ತ ವ್ಯಕ್ತಿಯನ್ನು ನಾಯಿ ಗೂಡಿನಲ್ಲಿ ಬಂಧಿಸಿ ಶಿಕ್ಷಿಸಿದ್ದಾನೆ.
ಬಾರ್ ಸಿಬ್ಬಂದಿಯಿಂದ ಹಲ್ಲೆಗೊಳಗಾದ ವ್ಯಕ್ತಿಯನ್ನು ಸೋಮು ಎಂದು ಗುರುತಿಸಲಾಗಿದೆ. ಮದ್ಯದಂಗಡಿಗೆ ಬಂದು ಅಲ್ಲಿ ಸಿಕ್ಕಾಪಟ್ಟೆ ಕುಡಿದು ಟೈಟ್ ಆಗಿ ಬಾರ್ನ ಸಾಕು ನಾಯಿಯನ್ನು ಕದ್ದುಕೊಂಡು ಹೋಗಲು ಯತ್ನಿಸಿದ್ದಾನೆ ಎಂದು ಬಾರ್ ಸಿಬ್ಬಂದಿ ಸೋಮುವನ್ನು ಎಳೆದುಕೊಂಡು ಬಂದು ಆತನನಿಗೆ ಅಮಾನುಷವಾಗಿ ಥಳಿಸಿದ್ದು ಮಾತ್ರವಲ್ಲದೆ, ಆತನನ್ನು ಕೆಲವು ಗಂಟೆಗಳ ಕಾಲ ನಾಯಿ ಗೂಡಿನಲ್ಲಿಯೇ ಬಂಧಿಸಿಟ್ಟಿದ್ದನು.
ಇದನ್ನೂ ಓದಿ: ಕ್ರಿಕೆಟ್ ಪಂದ್ಯದ ವೇಳೆ ಬಸಣ್ಣನ ಗ್ರ್ಯಾಂಡ್ ಎಂಟ್ರಿ, ಮುಂದೇನಾಯ್ತು ನೋಡಿ
ನಾಯಿ ಮುದ್ದಾಗಿದೆ ಎಂಬ ಕಾರಣಕ್ಕೆ ನಾನು ಆ ಶ್ವಾನವನ್ನು ಎತ್ತಿಕೊಂಡು ಮುದ್ದಾಡಿದ್ದು ಅಷ್ಟೇ, ನಾನು ಯಾವುದೇ ಕಾರಣಕ್ಕೂ ಆ ಶ್ವಾನವನ್ನು ಕಳ್ಳತನ ಮಾಡಲು ಯತ್ನಿಸಿಲ್ಲ ಎಂದು ಸೋಮು ಮನವಿ ಮಾಡಿದರೂ, ಬಾರ್ ಸಿಬ್ಬಂದಿ ಆತನಿಗೆ ಅಮಾನುಷವಾಗಿ ಥಳಿಸಿದ್ದಾನೆ. ನಂತರ ಸ್ಥಳೀಯರ ಮನವಿಯ ಮೇರೆಗೆ ಸೋಮುವನ್ನು ನಾಯಿ ಬೋನಿನಿಂದ ಬಿಡುಗಡೆಗೊಳಿಸಲಾಗಿದೆ. ಈ ಘಟನೆಯಿಂದಾಗಿ ಬೇಸರಗೊಂಡ ಸ್ಥಳೀಯರು ಬಾರ್ ಮಾಲೀಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲದೆ ತಪ್ಪು ಮಾಡಿದವರಿಗೆ ಶಿಕ್ಷೆ ನೀಡಲು ಕಾನೂನು, ಪೊಲೀಸರು ಇದ್ದಾರೆ, ನಿವ್ಯಾಕೆ ಕಾನೂನನ್ನು ಕೈಗೆತ್ತಿಕೊಳ್ಳಬೇಕು, ಹೀಗೆ ಅಮಾನವೀಯ ರೀತಿಯಲ್ಲಿ ವರ್ತಿಸಬೇಕು ಎಂದು ನೆಟ್ಟಿಗರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ