Viral Video : ಕೌಶಲ ಎನ್ನುವುದು ಎಲ್ಲರಿಗೂ ಸಂಬಂಧಿಸಿದ್ದು ಮತ್ತದು ಸಹಜವಾಗಿ ಯಾರೂ ಕಲಿಯಬಹುದಾದಂಥದ್ದು. ಮೊದಲೆಲ್ಲ ಅಂಥ ಮುಕ್ತ ವಾತಾವರಣವೇ ಇತ್ತು. ಆದರೆ ಇದು ಹೆಣ್ಣಿನ ಜವಾಬ್ದಾರಿ, ಇದು ಗಂಡಿನ ಜವಾಬ್ದಾರಿ ಎಂದು ಯಾವಾಗ ಗೆರೆ ಕೊರೆದಿಡುವುದು ಶುರುವಾಯಿತೋ ಆಗಲೇ ಸ್ತ್ರೀಶಕ್ತಿ ಜಾಗೃತವಾಗುತ್ತಾ ಹೋಗಿದ್ದು, ಹೋಗುತ್ತಿರುವುದು. ಕೌಶಲ ಮತ್ತು ಅನುಕೂಲ ಎಂಬ ದೃಷ್ಟಿಯಿಂದ ನೋಡಿದಾಗ ಹೆಣ್ಣು-ಗಂಡಿನ ಮಧ್ಯೆ ಗೋಡೆಗಳು ಏಳುವುದಿಲ್ಲ ಹಾಗೆಯೇ ನಿಯಂತ್ರಿಸುವ ತಂತ್ರಗಳೂ ಹುಟ್ಟಿಕೊಳ್ಳುವುದಿಲ್ಲ. ಹೀಗಾದಾಗ ಪರಸ್ಪರ ಸಂಘರ್ಷಗಳು ಹುಟ್ಟುವುದಿಲ್ಲ. ಈಗಿಲ್ಲಿ ಈ ಅಜ್ಜ-ಅಜ್ಜಿ ಪ್ರಯಾಣಿಸುತ್ತಿದ್ದಾರಲ್ಲಾ ಹೀಗೆಯೇ ಬದುಕಿನ ದಾರಿ ಸುಗಮವಾಗಿರುತ್ತದೆ.
ಕೌಶಲ ಎನ್ನುವುದು ಯಾವಾಗ ಬೇಕಾದರೂ ಅನಿವಾರ್ಯಕ್ಕೆ, ಸಹಾಯಕ್ಕೆ ಒದಗುವಂಥದ್ದು. ಕಲಿಯುವಿಕೆಗೆ ಎಂದೂ ಲಿಂಗಬೇಧವಿಲ್ಲ, ವಯೋಬೇಧವಿಲ್ಲ, ಬೇಕಿರುವುದು ದೃಢಮನಸ್ಸು. ನಮ್ಮ ಬದುಕು ನಮ್ಮ ಇಚ್ಛೆ ಎಂಬಂಥ ದಿಟ್ಟತೆಯಲ್ಲಿ ನಗರಮಂದಿಯಂತೂ ವಾಸಿಸುತ್ತಿದ್ದಾರೆ. ಹಳ್ಳಿಗರೂ ಈ ಬದಲಾವಣೆಗೆ ತೆರೆದುಕೊಳ್ಳುತ್ತಿದ್ದಾರೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ.
ಎಲ್ಲೆಡೆಯೂ ಪತ್ನಿಯನ್ನು ಹಿಂದೆ ಕೂರಿಸಿಕೊಂಡು ಪ್ರಯಾಣಿಸುವುದು ಅತೀ ಸಾಮಾನ್ಯ. ಪತಿಯನ್ನು, ಪತ್ನಿಯು ತನ್ನ ಹಿಂದೆ ಕೂರಿಸಿಕೊಂಡು ಗಾಡಿ ಓಡಿಸುವುದು ಈಗಿಗಲಂತೂ ಸಾಮಾನ್ಯ. ಆದರೆ ವಯಸ್ಸಾದ ಈ ಮಹಿಳೆಯು ತನ್ನ ಪತಿಯನ್ನು ಹಿಂದೆ ಕೂರಿಸಿಕೊಂಡು ಗಾಡಿ ಓಡಿಸುತ್ತಿರುವುದು ಮಾತ್ರ ಅಪರೂಪ. ಹಾಗಾಗಿ ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಸುಮಾರು 3 ಮಿಲಿಯನ್ ವೀಕ್ಷಕರನ್ನು ಇದು ಸೆಳೆದಿದೆ. 3 ಲಕ್ಷಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ.
ಸುಸ್ಮಿತಾ ಡೋರಾ ಎಂಬ ಫೋಟೋಗ್ರಾಫರ್ ಇನ್ಸ್ಟಾಗ್ರಾಂನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಕಪಲ್ ಗೋಲ್ಸ್ ಎಂಬ ಶೀರ್ಷಿಕೆ ಇದಕ್ಕಿದೆ. ಸೋನು ನಿಗಮ್, ಶ್ರೇಯಾ ಘೋಷಾಲ್ ಹಾಡಿರುವ ತೇರೇ ಬಿನ್ ಹಾಡಿನ ಹಿನ್ನೆಲೆಯಲ್ಲಿ ಈ ವಿಡಿಯೋ ಆರಂಭವಾಗುತ್ತದೆ. ಈ ಹಿರಿಯ ಮಹಿಳೆ ಇಷ್ಟೊಂದು ಆತ್ಮವಿಶ್ವಾಸದಿಂದ ಗಾಡಿ ಓಡಿಸುವುದನ್ನು ನೋಡಿದರೆ ಯಾರಿಗೆ ಖುಷಿಯಾಗದು?
ನೆಟ್ಟಿಗರು, ‘ಎಂಥ ಹೃದ್ಯಂಗಮ ಈ ವಿಡಿಯೋ’ ಎಂದಿದ್ದಾರೆ. ‘ಅಜ್ಜಿ ನಿಮ್ಮಿಬ್ಬರಿಗೂ ಒಳ್ಳೆಯದಾಗಲಿ. ನಿಮ್ಮ ಬದುಕಿನ ಪ್ರಯಾಣ ಹೀಗೇ ಸಾಗಲಿ’ ಎಂದು ಮತ್ತೊಬ್ಬರು ಹಾರೈಸಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 9:56 am, Fri, 16 September 22