’ಹಿಂದಿನ ಜನ್ಮದಲ್ಲಿ ಅಸಾದುದ್ದೀನ್​ ಓವೈಸಿ ನಕುಲನಾಗಿದ್ದರು’-ಸಿಕ್ಕಾಪಟೆ ವೈರಲ್ ಆಗ್ತಿದೆ ಇಂಜಿನಿಯರ್​ರೊಬ್ಬರ ರಜಾ ಅರ್ಜಿ

| Updated By: Lakshmi Hegde

Updated on: Oct 11, 2021 | 7:24 PM

ರಜಾ ಅರ್ಜಿ ವೈರಲ್​ ಆಗುತ್ತಿದ್ದಂತೆ ಕೆಲವು ಮಾಧ್ಯಮಗಳು ಯಾದವ್​ರನ್ನು ಮಾತನಾಡಿಸಿವೆ. ಉತ್ತರಿಸಿದ ಅವರು, ಖಂಡಿತವಾಗಿಯೂ ನಾನು ಬರೆದಿದ್ದು ಸತ್ಯ ಎಂದೇ ಹೇಳಿಕೊಂಡಿದ್ದಾರೆ.

’ಹಿಂದಿನ ಜನ್ಮದಲ್ಲಿ ಅಸಾದುದ್ದೀನ್​ ಓವೈಸಿ ನಕುಲನಾಗಿದ್ದರು’-ಸಿಕ್ಕಾಪಟೆ ವೈರಲ್ ಆಗ್ತಿದೆ ಇಂಜಿನಿಯರ್​ರೊಬ್ಬರ ರಜಾ ಅರ್ಜಿ
ರಜಾ ಅರ್ಜಿ ಮತ್ತು ಅದನ್ನು ಬರೆದ ಇಂಜಿನಿಯರ್​
Follow us on

ಮಧ್ಯಪ್ರದೇಶದ ಇಂಜಿನಿಯರ್​ ಒಬ್ಬರು ತಮಗೆ ಭಾನುವಾರ ರಜೆ ಬೇಕು ಎಂದು ಕೇಳಿದ ರೀತಿ ಇದೀಗ ಸಿಕ್ಕಾಪಟೆ ಚರ್ಚೆಗೆ ಕಾರಣವಾಗಿದೆ. ಇವರು ಹಾಕಿದ ರಜಾ ಅರ್ಜಿಯ ಪ್ರತಿಯಂತೂ ಸೋಷಿಯಲ್​ ಮೀಡಿಯಾಗಳಲ್ಲಿ ವಿಪರೀತ ವೈರಲ್​ ಆಗುತ್ತಿದೆ. ಅಗರ್ ಮಾಲ್ವಾ ಜಿಲ್ಲೆಯ ಸುಸ್ನೆರ್‌ನಲ್ಲಿ ನರೇಗಾ ಯೋಜನೆಗಳ ಉಪ ಇಂಜಿನಿಯರ್ ಆಗಿರುವ  ರಾಜಕುಮಾರ್ ಯಾದವ್ ಹೀಗೊಂದು ವಿಚಿತ್ರ ರಜಾ ಅರ್ಜಿ ಕಳಿಸಿ ಸುದ್ದಿಯಾಗಿದ್ದಾರೆ. ಇವರಿಗೆ ಭಾನುವಾರ ರಜಾ ಬೇಕಾಗಿತ್ತು. ಅದನ್ನು ಪಂಚಾಯತ್​ ಸಿಇಒ ಬಳಿ ಕೇಳಬೇಕಿತ್ತು. ಹೀಗಾಗಿ ಅವರಿಗೆ ಒಂದು ಮನವಿ ಪತ್ರ ಸಲ್ಲಿಸಿದ್ದಾರೆ. ಅದರಲ್ಲಿ ರಜೆ ಯಾಕೆ ಬೇಕು ಎಂಬುದಕ್ಕೆ ವಿಭಿನ್ನ ಕಾರಣಗಳನ್ನು ನೀಡಿದ್ದಾರೆ.

ಇದು ತನ್ನ ಪುನರ್ಜನ್ಮವಾಗಿದೆ..ನನಗೆ ನನ್ನ ಹಿಂದಿನ ಜನ್ಮದ ಬಗ್ಗೆ ಸ್ವಲ್ಪ ಮಟ್ಟಿಗೆ ನೆನಪು ಬಂದಿದೆ. ನಾನು ನನ್ನ ಹಿಂದಿನ ಜನ್ಮದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕು. ನಾನು ಭಾನುವಾರ ಭಗವದ್ಗೀತೆ ಓದಬೇಕು. ಅಹಂಕಾರ ತೊಡೆದುಕೊಳ್ಳಲು ಮನೆಮನೆಗೆ ಹೋಗಿ ಭಿಕ್ಷಾಟನೆ ಮಾಡಬೇಕು ಎಂಬಿತ್ಯಾದಿ ಕಾರಣಗಳನ್ನು ರಾಜ್​ಕುಮಾರ್ ಯಾದವ್​ ತಮ್ಮ ರಜಾ ಅರ್ಜಿಯಲ್ಲಿ ಬರೆದಿದ್ದಾರೆ. ಅಷ್ಟೇ ಅಲ್ಲ, ತಮ್ಮ ಹಿಂದಿನ ಜನ್ಮದ ಬಗ್ಗೆ ಹೇಳುವಾಗ ಮಹಾಭಾರತದ ಉಲ್ಲೇಖ ಮಾಡಿದ್ದಾರೆ. ಈಗಿನ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್​ ಓವೈಸಿಯನ್ನು ನಾನು ಹೋದ ಜನ್ಮದಲ್ಲೂ ಬಲ್ಲೆ. ಆಗ ಅವರು ನಕುಲ ಎಂದಾಗಿದ್ದರು. ನನ್ನ ಬಾಲ್ಯದ ಗೆಳೆಯರಾಗಿದ್ದರು. ಹಾಗೇ, ಈಗಿನ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​ ಶಕುನಿ ಮಾಮಾ ಆಗಿದ್ದರು ಎಂದೂ ಹೇಳಿದ್ದಾರೆ.  ನನಗೀಗ ನನ್ನ ಪುನರ್ಜನ್ಮ, ಹೋದ ಜನ್ಮದ ಬಗ್ಗೆ ಇನ್ನಷ್ಟು ಮಾಹಿತಿ ಗೊತ್ತಾಗಬೇಕು. ಇದು ನನ್ನ ಆತ್ಮಕ್ಕೆ ಸಂಬಂಧಪಟ್ಟ ವಿಚಾರ. ಹಾಗಾಗಿ ದಯವಿಟ್ಟು ಭಾನುವಾರ ರಜೆ ಕೊಡಿ ಎಂದು ಬರೆದಿದ್ದಾರೆ. ಪಂಚಾಯತ್​ ವಾಟ್ಸ್​ ಆ್ಯಪ್​ ಗ್ರೂಪ್​​ಲಿ ಕೂಡ ಶೇರ್​ ಆಗಿದೆ.

ಇವರ ರಜಾ ಅರ್ಜಿ ವೈರಲ್​ ಆಗುತ್ತಿದ್ದಂತೆ ಕೆಲವು ಮಾಧ್ಯಮಗಳು ಯಾದವ್​ರನ್ನು ಮಾತನಾಡಿಸಿವೆ. ಉತ್ತರಿಸಿದ ಅವರು, ಖಂಡಿತವಾಗಿಯೂ ನಾನು ಬರೆದಿದ್ದು ಸತ್ಯ. ಸರ್ಕಾರಿ ಇಂಜಿನಿಯರ್ ಆಗಿರುವ ನನಗೆ ಭಾನುವಾರವೂ ಕೆಲಸ ಮಾಡುವ ಅಗತ್ಯ ಇರುತ್ತದೆ. ಆದರೆ ನನಗೆ ಕೆಲ ದಿನಗಳ ಹಿಂದೆ ವಿಚಿತ್ರ ಕನಸು ಬಿದ್ದಿದೆ. ಹಾಗಾಗಿ ಅಧ್ಯಾತ್ಮವಾಗಿ ನಾನು ಇನ್ನಷ್ಟು ಅಧ್ಯಯನ ಮಾಡಬೇಕು. ನನ್ನ ಹಿಂದಿನ ಜೀವನ ತಿಳಿದುಕೊಳ್ಳಬೇಕು. ಹಾಗಾಗಿ ಭಾನುವಾರ ರಜಾ ಬೇಕು ಎಂದು ಹೇಳಿದ್ದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ದೀಪಾವಳಿ ಹಬ್ಬ ಸಂದರ್ಭದಲ್ಲಿ ಸಾಲು ಸಾಲು ಹೊಸ ದ್ವಿಚಕ್ರ ವಾಹನಗಳು ಮಾರುಕಟ್ಟೆಗೆ ಬಿಡುಗಡೆಯಾಗಲಿವೆ

‘ಪೆಟ್ರೋಲ್​-ಡೀಸೆಲ್​ ಬೆಲೆ ಹೆಚ್ಚಾಗಲು ಕೊವಿಡ್ 19 ಲಸಿಕೆಯೇ ಕಾರಣ’ ಎಂದ ಕೇಂದ್ರ ಸಚಿವ

Published On - 7:21 pm, Mon, 11 October 21