‘ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಾಗಲು ಕೊವಿಡ್ 19 ಲಸಿಕೆಯೇ ಕಾರಣ’ ಎಂದ ಕೇಂದ್ರ ಸಚಿವ
ಪೆಟ್ರೋಲ್ ಬೆಲೆ 40 ರೂಪಾಯಿಯಷ್ಟೇ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅದರ ಮೇಲೆ ತೆರಿಗೆ ವಿಧಿಸಿವೆ. ಅದರಲ್ಲೂ ಅತ್ಯಂತ ಕಡಿಮೆ ವ್ಯಾಟ್ ಹೇರಿದ್ದು ಆಸ್ಸಾಂ ರಾಜ್ಯ ಎಂದೂ ರಾಮೇಶ್ವರ್ ತೇಲಿ ಹೇಳಿದ್ದಾರೆ.
ಸದ್ಯ ಪೆಟ್ರೋಲ್, ಡೀಸೆಲ್ ದರ (Petrol – Diesel Prices)ಗಳು ದಾಖಲೆಯ ಮಟ್ಟದಲ್ಲಿ ಏರಿಕೆಯಾಗುತ್ತಿವೆ. ದೇಶದ ಬಹುತೇಕ ಮಹಾನಗರಗಳಲ್ಲಿ 100 ರೂಪಾಯಿ ಗಡಿ ದಾಟಿವೆ. ಅದನ್ನು ವಿರೋಧ ಪಕ್ಷಗಳು ಸೇರಿ, ಜನಸಾಮಾನ್ಯರು ತೀವ್ರವಾಗಿ ಟೀಕಿಸುತ್ತಿದ್ದಾರೆ. ಆದರೆ ಹೀಗೆ ಪೆಟ್ರೋಲ್-ಡೀಸೆಲ್ ದರ ಹೆಚ್ಚಾಗಲು ಕೊವಿಡ್ 19 ಲಸಿಕೆ (Covid 19 Vaccine)ಯನ್ನು ಉಚಿತವಾಗಿ ಕೊಟ್ಟಿದ್ದೇ ಕಾರಣ ಎನ್ನುತ್ತಿದ್ದಾರೆ ಬಿಜೆಪಿ (BJP)ಯ ಈ ಕೇಂದ್ರ ಸಚಿವರು. ಅಷ್ಟೇ ಅಲ್ಲ, ಒಂದು ಲೀಟರ್ ಹಿಮಾಲಯನ್ ವಾಟರ್ ಬೆಲೆ ಒಂದು ಲೀಟರ್ ಪೆಟ್ರೋಲ್ಗಿಂತಲೂ ಹೆಚ್ಚು ಎಂಬುದು ನೆನಪಿರಲಿ ಎಂಬ ಮಾತುಗಳನ್ನೂ ಅವರು ಆಡಿದ್ದಾರೆ.
ಅಂದ ಹಾಗೆ ಹೀಗೊಂದು ವಿಚಾರಧಾರೆಯನ್ನು ಜನರ ಎದುರು ಇಟ್ಟಿದ್ದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆ ರಾಜ್ಯ ಸಚಿವ ರಾಮೇಶ್ವರ ತೇಲಿ. ಇಂದು ಆಸ್ಸಾಂನ ಗುವಾಹಟಿಯಲ್ಲಿ ಮಾತನಾಡಿದ ಅವರು, ನಿಜ ಹೇಳಬೇಕೆಂದರೆ ಪೆಟ್ರೋಲ್ ದುಬಾರಿಯಲ್ಲ. ಕೇಂದ್ರ ಮತ್ತು ರಾಜ್ಯಗಳು ಪೆಟ್ರೋಲ್ ಮೇಲೆ ತೆರಿಗೆ ವಿಧಿಸುತ್ತಿವೆ. ದೇಶದ ಜನರು ಇಂದು ಕೊವಿಡ್ 19 ಲಸಿಕೆಯನ್ನು ಉಚಿತವಾಗಿ ಪಡೆಯುತ್ತಿದ್ದಾರೆ. ಅದಕ್ಕೆ ಹಣ ಬಂದಿದ್ದು ಎಲ್ಲಿಂದ ಎಂದು ಗೊತ್ತಾ? ಹೀಗೆ ಪೆಟ್ರೋಲ್-ಡೀಸೆಲ್ ಮೇಲೆ ಹೇರಲಾದ ಟ್ಯಾಕ್ಸ್ನ ಹಣದಿಂದಲೇ ಕೊವಿಡ್ 19 ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದು ರಾಮೇಶ್ವರ್ ತೇಲಿ ತಿಳಿಸಿದ್ದಾರೆ.
ದಿಬ್ರುಗಡ್ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ರಾಮೇಶ್ವರ್ ತೇಲಿ, ದೇಶದ 130 ಕೋಟಿ ಜನರಿಗೆ ಉಚಿತವಾಗಿ ಕೊರೊನಾ ಲಸಿಕೆ ನೀಡುವ ಗುರಿಯನ್ನು ನಮ್ಮ ಕೇಂದ್ರ ಸರ್ಕಾರ ಹೊಂದಿದೆ. ಪ್ರತಿ ಲಸಿಕೆಯ ಬೆಲೆ 1200 ರೂಪಾಯಿ. ಪ್ರತಿಯೊಬ್ಬರೂ ಎರಡು ಡೋಸ್ ಪಡೆಯಬೇಕು. ಅಂದರೆ ಅಲ್ಲಿಗೆ ಒಬ್ಬರಿಗೆ ನೀಡಲಾಗುವ ಲಸಿಕೆಯ ಬೆಲೆ 2400 ರೂ. ಆ ಹಣ ಭರಿಸಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗಿದ್ದು, ಇದೇ ಪೆಟ್ರೋಲ್-ಡೀಸೆಲ್ಗೆ ವಿಧಿಸಲಾದ ಟ್ಯಾಕ್ಸ್ನಿಂದ ಎಂದು ಹೇಳಿದ್ದಾರೆ. ಪೆಟ್ರೋಲ್ ಬೆಲೆ 40 ರೂಪಾಯಿಯಷ್ಟೇ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅದರ ಮೇಲೆ ತೆರಿಗೆ ವಿಧಿಸಿವೆ. ಅದರಲ್ಲೂ ಅತ್ಯಂತ ಕಡಿಮೆ ವ್ಯಾಟ್ (Value Added tax) ಹೇರಿದ್ದು ಆಸ್ಸಾಂ ರಾಜ್ಯ ಎಂದೂ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕಕ್ಕೆ ಕಲ್ಲಿದ್ದಲು ಕೊರತೆ ಆಗದು, ವಿದ್ಯುತ್ ಉತ್ಪಾದನೆಯಲ್ಲಿ ಸಮಸ್ಯೆಯಿಲ್ಲ: ಸುನಿಲ್ ಕುಮಾರ್