Video: ಸಿಮೆಂಟ್ ಬೆಳ್ಳುಳ್ಳಿ ಹಾವಳಿ; ಬೆಳ್ಳುಳ್ಳಿ ಕೊಂಡುಕೊಳ್ಳುವ ಮುನ್ನ ಎಚ್ಚರ

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 19, 2024 | 5:56 PM

ಪ್ರಪಂಚದಲ್ಲಿ ಸಿಗುವ ಆಹಾರ ಪದಾರ್ಥಗಳು, ದವಸ ಧಾನ್ಯಗಳು, ಹಣ್ಣು ತರಕಾರಿಗಳು ಎಲ್ಲವೂ ಸಹ ಇಂದು ಕಲಬೆರಕೆ ಆಗುತ್ತಿರುವುದು ನಮಗೆಲ್ಲ ಗೊತ್ತೇ ಇದೆ. ಅದರಲ್ಲೂ ಈ ನಕಲಿ ಉತ್ಪನ್ನಗಳ ಹಾವಳಿ ಬಹಳ ಹೆಚ್ಚಾಗಿದೆ. ಅಕ್ಕಿ, ಮೊಟ್ಟೆ, ಮಸಾಲೆ ಪದಾರ್ಥಗಳ ಬಳಿಕ ಇದೀಗ ಸಿಮೆಂಟ್ ನಿಂದ ಮಾಡಿದ ನಕಲಿ ಬೆಳ್ಳುಳ್ಳಿ ಕೂಡ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ.

Video: ಸಿಮೆಂಟ್ ಬೆಳ್ಳುಳ್ಳಿ ಹಾವಳಿ; ಬೆಳ್ಳುಳ್ಳಿ ಕೊಂಡುಕೊಳ್ಳುವ ಮುನ್ನ ಎಚ್ಚರ
ವೈರಲ್​​ ವಿಡಿಯೋ
Follow us on

ನಕಲಿ ಉತ್ಪನ್ನಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಆಹಾರ ಪದಾರ್ಥಗಳ ಕಲಬೆರಕೆ ಮತ್ತು ನಕಲಿ ಆಹಾರಗಳ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಹೌದು ಈ ಹಿಂದೆ ಪ್ಲಾಸ್ಟಿಕ್ ಮೊಟ್ಟೆ, ಪ್ಲಾಸ್ಟಿಕ್ ಅಕ್ಕಿ, ನಕಲಿ ಪನೀರ್, ನಕಲಿ ಅಡುಗೆ ಎಣ್ಣೆ, ನಕಲಿ ದವಸ ಧಾನ್ಯಗಳ ಹಾವಳಿ ಹೆಚ್ಚಾಗಿತ್ತು. ಇದೀಗ ಬೆಳ್ಳುಳ್ಳಿಯ ಸರದಿ. ಮಾರುಕಟ್ಟೆಗೆ ಈಗ ಈ ಸಿಮೆಂಟ್ ಬೆಳ್ಳುಳ್ಳಿ ಲಗ್ಗೆ ಇಟ್ಟಿದು, ನೋಡಲು ನಿಜವಾದ ಬೆಳ್ಳುಳ್ಳಿಯಂತೆ ಕಾಣುವ ಈ ನಕಲು ಉತ್ಪನ್ನವನ್ನು ಕಂಡು ನೋಡುಗರು ಫುಲ್ ಶಾಕ್ ಆಗಿದ್ದಾರೆ.

ದೇಶಾದ್ಯಂತ ಬೆಳ್ಳುಳ್ಳಿ ಬೆಲೆ ಗಗನಕ್ಕೇರುತ್ತಿದ್ದಂತೆ, ವ್ಯಾಪಾರಿಗಳು ಅಮಾಯಕ ನಾಗರಿಕರನ್ನು ವಂಚಿಸಿ ನಕಲಿ ಬೆಳ್ಳುಳ್ಳಿ ಮಾರಾಟ ಮಾಡಲು ಪ್ರಾರಂಭಿಸಿದ್ದಾರೆ. ಮಾರುಕಟ್ಟೆಗಳಲ್ಲಂತೂ ಈ ನಕಲಿ ಬೆಳ್ಳುಳ್ಳಿ ಹಾವಳಿ ತೀರಾ ಹೆಚ್ಚಾಗುತ್ತಿದೆ. ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ ಸಿಮೆಂಟ್‌ನಿಂದ ಮಾಡಿದ ನಕಲಿ ಬೆಳ್ಳುಳ್ಳಿಯನ್ನು ಮಾರಾಟ ಮಾಡುವುದು ಪತ್ತೆಯಾಗಿದೆ. ಇಲ್ಲಿನ ನಿವೃತ್ತ ಪೊಲೀಸ್ ಅಧಿಕಾರಿ ಸುಭಾಷ್ ಪಾಟೀಲ್ ಅವರ ಪತ್ನಿ ಮಾರುಕಟ್ಟೆಯಿಂದ ತಂದ ಬೆಳ್ಳುಳ್ಳಿಯಲ್ಲಿ ಒಂದು ಕೃತಕ ಬೆಳ್ಳುಳ್ಳಿ ಪತ್ತೆಯಾಗಿದೆ.

ಈ ಕುರಿತ ಪೋಸ್ಟ್ ಒಂದನ್ನು AajTak ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ದೇಶಾದ್ಯಂತ ಬೆಳ್ಳುಳ್ಳಿ ಬೆಲೆ ಗಗನಕ್ಕೇರಿದ್ದು, ಈ ಮಧ್ಯೆ ಮಹಾರಾಷ್ಟ್ರದ ಅಕೋಲಾದಲ್ಲಿ ಕೆಲ ವ್ಯಾಪಾರಿಗಳು ಸಿಮೆಂಟ್‌ನಿಂದ ತಯಾರಿಸಿದ ನಕಲಿ ಬೆಳ್ಳುಳ್ಳಿಯನ್ನು ಮಾರಾಟ ಮಾಡಿ ನಾಗರಿಕರನ್ನು ವಂಚಿಸುತ್ತಿರುವ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ಥೇಟ್ ಬೆಳ್ಳುಳ್ಳಿಯಂತೆ ಇರುವ ಸಿಮೆಂಟ್ ನಿಂದ ಮಾಡಿದ ನಕಲಿ ಬೆಳ್ಳುಳ್ಳಿಯನ್ನು ಕಾಣಬಹುದು. ಅದನ್ನು ಕಟ್ ಮಾಡಿದಾಗಲೇ ಅದು ಸಿಮೆಂಟ್ ನಿಂದ ಮಾಡಿದ ನಕಲಿ ಬೆಳ್ಳುಳ್ಳಿ ಎಂಬುದು ಪತ್ತೆಯಾಗಿದೆ.

ಇದನ್ನೂ ಓದಿ: ಬಸ್ಸಿನಲ್ಲಿ ಮಹಿಳೆಗೆ ಹೆರಿಗೆ ಮಾಡಿಸಿ ಮಾನವೀಯತೆ ಮೆರೆದ ಲೇಡಿ ಕಂಡಕ್ಟರ್

ಆಗಸ್ಟ್ 18 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ಈ ಕಲಿಯುಗದಲ್ಲಿ ಏನು ಬೇಕಾದರೂ ಸಾಧ್ಯ, ಮನುಷ್ಯ ಪ್ರಾಣಿಗಳಿಗಿಂತ ಕಡೆಯಾಗಿ ವರ್ತಿಸಲು ಆರಂಭಿಸಿದ್ದಾನೆ’ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ‘ಏನೆಲ್ಲಾ ವಿಚಿತ್ರಗಳು ನಡೆಯುತ್ತೋ’ ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ