ಶಿವನ ಕೈಯಲ್ಲಿ ವೈನ್​ ಗ್ಲಾಸ್, ಮೊಬೈಲ್​ ಇಟ್ಟು ಅಚಾತುರ್ಯ ಎಸಗಿದ ಇನ್​ಸ್ಟಾಗ್ರಾಂ; ದೂರು ದಾಖಲಿಸಿದ ಬಿಜೆಪಿ ನಾಯಕ

| Updated By: Skanda

Updated on: Jun 09, 2021 | 10:27 AM

ಈ ಬಗ್ಗೆ ದೂರು ನೀಡಿರುವ ಮನೀಶ್, ಇನ್​ಸ್ಟಾಗ್ರಾಂನಲ್ಲಿ ಹಿಂದೂಗಳ ಆರಾಧ್ಯ ದೈವ ಈಶ್ವರನನ್ನು ಕೆಟ್ಟ ರೀತಿಯಲ್ಲಿ ಅವಮಾನಿಸಲಾಗಿದ್ದು, ಇದು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದೆ. ಇದನ್ನು ಉದ್ದೇಶಪೂರ್ವಕವಾಗಿಯೇ ಮಾಡಲಾಗಿದ್ದು ಹಿಂದೂಗಳನ್ನು ಕೆಣಕಬೇಕು, ಅವಮಾನಿಸಬೇಕು ಎಂಬ ಹುನ್ನಾರ ಒಳಗೊಂಡಿದೆ ಎಂದಿದ್ದಾರೆ.

ಶಿವನ ಕೈಯಲ್ಲಿ ವೈನ್​ ಗ್ಲಾಸ್, ಮೊಬೈಲ್​ ಇಟ್ಟು ಅಚಾತುರ್ಯ ಎಸಗಿದ ಇನ್​ಸ್ಟಾಗ್ರಾಂ; ದೂರು ದಾಖಲಿಸಿದ ಬಿಜೆಪಿ ನಾಯಕ
ಆಕ್ರೋಶಕ್ಕೆ ಕಾರಣವಾದ ಚಿತ್ರ
Follow us on

ಸಾಮಾಜಿಕ ಜಾಲತಾಣಗಳು ಮನರಂಜನೆ, ಮಾಹಿತಿ ಸೇರಿದಂತೆ ಅನೇಕ ಉಪಯುಕ್ತ ವಿಚಾರಗಳನ್ನು ಕುಳಿತಲ್ಲಿಯೇ ಒದಗಿಸಿಕೊಡುತ್ತವೆ. ಆದರೆ, ಅದೇ ಸಾಮಾಜಿಕ ಜಾಲತಾಣಗಳ ಇನ್ನೊಂದು ಮುಖವು ಅಸಭ್ಯ, ಅವಹೇಳನಕಾರಿ, ಪ್ರಚೋದಿತ ಅಂಶಗಳಿಗೆ ಜಾಗ ಮಾಡಿಕೊಡುವಂತಿದ್ದು ಕ್ಷುಲ್ಲಕ ಕಾರಣಗಳಿಂದ ಒಂದಷ್ಟು ಮನಸ್ತಾಪಗಳಿಗೂ ದಾರಿ ಮಾಡಿಕೊಡುತ್ತವೆ. ತೀರಾ ಇತ್ತೀಚೆಗಷ್ಟೇ ಜಾಲತಾಣವೊಂದರಲ್ಲಿ ಕನ್ನಡ ಭಾಷೆಯನ್ನು ಕೊಳಕು ಭಾಷೆ ಎಂದು ನಿಂದಿಸಿದ ಕಾರಣಕ್ಕಾಗಿ ವಿವಾದ ತಲೆ ಎತ್ತಿತ್ತು. ಅದಾದ ಬೆನ್ನಲ್ಲೇ ಅಮೆಜಾನ್​ನಲ್ಲಿ ಒಳ ಉಡುಪಗಳ ಮೇಲೆ ಕನ್ನಡ ಧ್ವಜ ಮುದ್ರಿಸಿ ಕನ್ನಡಿಗರನ್ನು ನಿಂದಿಸುವ ಕೆಲಸವೂ ಆಯಿತು. ವರ್ಷದಲ್ಲಿ ಇಂತಹ ಹಲವು ವಿಚಾರಗಳು ಮರುಕಳಿಸುತ್ತಲೇ ಇರುವುದು ಹಾಗೂ ಅವುಗಳ ವಿರುದ್ಧ ಜನರು ಪ್ರತಿಭಟಿಸುವುದು ಮಾಮೂಲಿ ಎಂಬಂತಾಗಿರುವುದು ವಿಷಾದನೀಯ. ಇದೀಗ ಹಿಂದೂಗಳ ಆರಾಧ್ಯ ದೈವ ಈಶ್ವರನ ವಿಚಾರದಲ್ಲಿ ಇನ್​ಸ್ಟಾಗ್ರಾಂ ಅಚಾತುರ್ಯಕ್ಕೆ ವೇದಿಕೆಯಾಗಿದ್ದು ಬಹುಜನರ ಕೆಂಗಣ್ಣಿಗೆ ಗುರಿಯಾಗಿದೆ. ಅಲ್ಲದೇ, ಈ ವಿಷಯವನ್ನು ಪ್ರತಿಭಟಿಸಿರುವ ಬಿಜೆಪಿ ನಾಯಕ ಮನೀಶ್ ಸಿಂಗ್ ಇನ್​ಸ್ಟಾಗ್ರಾಂ ವಿರುದ್ಧ ದೂರನ್ನೂ ದಾಖಲಿಸಿದ್ದಾರೆ.

ಈ ಹಿಂದೆಯೂ ಪಾದರಕ್ಷೆಗಳ ಮೇಲೆ ಧರ್ಮ, ದೇವರನ್ನು ಪ್ರತಿನಿಧಿಸುವ ಚಿತ್ರಗಳಿಂದ ಹಿಡಿದು ಅನೇಕ ತೆರನಾದ ಅಪಮಾನಕಾರಿ ಕೆಲಸಗಳು ಬೇರೆ ಬೇರೆ ಜಾಲತಾಣಗಳಲ್ಲಿ ಜರುಗಿದ್ದವು. ಇದೀಗ ಇನ್​ಸ್ಟಾಗ್ರಾಂನಲ್ಲಿ ಈಶ್ವರ ಒಂದು ಕೈಯಲ್ಲಿ ವೈನ್​ ಗ್ಲಾಸ್ ಹಾಗೂ ಇನ್ನೊಂದು ಕೈಯಲ್ಲಿ ಮೊಬೈಲ್​ ಫೋನ್ ಹಿಡಿದುಕೊಂಡಿರುವ ಜಿಐಎಫ್​ (ಗ್ರಾಫಿಕ್ಸ್) ಪ್ರಕಟಿಸಲಾಗಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ. ಇನ್​ಸ್ಟಾಗ್ರಾಂನ ಈ ನಡೆಯನ್ನು ಖಂಡಿಸಿ ಸಂಸ್ಥೆ ಹಾಗೂ ಸಂಸ್ಥೆಯ ಮುಖ್ಯಸ್ಥರ ವಿರುದ್ಧ ಬಿಜೆಪಿ ನಾಯಕ ಮನೀಶ್ ಸಿಂಗ್ ನವದೆಹಲಿಯಲ್ಲಿ ದೂರು ದಾಖಲಿಸಿದ್ದು, ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಈ ಬಗ್ಗೆ ದೂರು ನೀಡಿರುವ ಮನೀಶ್, ಇನ್​ಸ್ಟಾಗ್ರಾಂನಲ್ಲಿ ಹಿಂದೂಗಳ ಆರಾಧ್ಯ ದೈವ ಈಶ್ವರನನ್ನು ಕೆಟ್ಟ ರೀತಿಯಲ್ಲಿ ಅವಮಾನಿಸಲಾಗಿದ್ದು, ಇದು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದೆ. ಇದನ್ನು ಉದ್ದೇಶಪೂರ್ವಕವಾಗಿಯೇ ಮಾಡಲಾಗಿದ್ದು ಹಿಂದೂಗಳನ್ನು ಕೆಣಕಬೇಕು, ಅವಮಾನಿಸಬೇಕು ಎಂಬ ಹುನ್ನಾರ ಒಳಗೊಂಡಿದೆ. ಈ ರೀತಿಯಲ್ಲಿ ಪ್ರಚೋದಿಸಿ ಶಾಂತಿ ಕದಡುವ ಯತ್ನ ಮಾಡಿರುವುದು ಅಕ್ಷಮ್ಯ ಅಪರಾಧ ಎಂದು ಹೇಳಿದ್ದಾರೆ.

ಅಲ್ಲದೇ, ಇನ್​ಸ್ಟಾಗ್ರಾಂ ಸಿಇಓ ಹಾಗೂ ಇನ್ನಿತರ ಪ್ರಮುಖ ಉದ್ಯೋಗಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕೆಂದು ಆಗ್ರಹಿಸಲಾಗಿದೆ. ಈ ವಿಚಾರವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು ಮತ್ತು ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಂಡು ಧಾರ್ಮಿಕ ಭಾವನೆ ಕದಡುವ ಯತ್ನ ಮಾಡಿರುವ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಮನೀಶ್ ಸಿಂಗ್ ಕೇಳಿಕೊಂಡಿದ್ದಾರೆ.

ಇದನ್ನೂ ಓದಿ:
Amazon Kannada Insult: ಆ ಗೂಗಲ್ ಆಯ್ತು, ಈಗ ಅಮೆಜಾನ್‌ ಆನ್​ಲೈನ್ ಶಾಪಿಂಗ್​ನಲ್ಲೂ ಕನ್ನಡ ಧ್ವಜ, ಲಾಂಛನಕ್ಕೆ ಅಪಮಾನ

Ugliest Language in India: ಕನ್ನಡಿಗರ ಸ್ವಾಭಿಮಾನ ಕೆಣಕಿದ ಗೂಗಲ್​; ಕನ್ನಡವನ್ನು ಕೊಳಕು ಭಾಷೆ ಎಂದು ಅಪಮಾನಿಸಿದ ಸರ್ಚ್​ ಎಂಜಿನ್