ಕುಕೀಸ್ ಯಾರಿಗೆ ಇಷ್ಟವಿಲ್ಲ ಹೇಳಿ. ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಾದವರ ವರೆಗೂ ಎಲ್ಲರಿಗೂ ಕುಕೀಗಳೆಂದರೆ ತುಂಬಾ ಇಷ್ಟ. ವಿವಿಧ ಫ್ಲೇವರ್, ಬಣ್ಣ, ವಿನ್ಯಾಸಗಳಲ್ಲಿ ಕುಕೀಗಳು ಲಭ್ಯವಿದೆ. ಇನ್ನೇನೂ ಕ್ರಿಸ್ಮಸ್ ಹಬ್ಬ ಬರುತ್ತಿದೆ. ಈ ಸಂದರ್ಭದಲ್ಲಿ ಎಲ್ಲಿ ನೋಡಿದರೂ ಕ್ರಿಸ್ಮಸ್ ಥೀಮ್ ಕುಕೀಗಳೇ ಕಾಣಸಿಗುತ್ತವೆ. ಸಾಮಾನ್ಯವಾಗಿ ಹೆಚ್ಚಿನವರು ಎಲ್ಲಾ ರೀತಿಯ ಕುಕೀಗಳನ್ನು ತಿಂದಿರುತ್ತಾರೆ. ಆದರೆ ನೀವು ಎಂದಾದರೂ ಮೆಹಂದಿ ಕುಕೀಗಳನ್ನು ತಿಂದಿದ್ದೀರಾ? ಅರೇ ಏನು ಮೆಹಂದಿ ಕುಕೀಗಳಾ? ಅಲ್ಲಾ ಈ ಕೈಗೆ ಹಾಕುವಂತಹ ಮೆಹಂದಿಯಿಂದ ಇಂತಹ ತಿನಿಸುಗಳನ್ನು ತಯಾರಿಸಲು ಸಾಧ್ಯನಾ, ಸಾಧ್ಯವಾದರೂ ಅದನ್ನು ತಿನ್ನುವವರರಾದರೂ ಯಾರು ಎಂದು ನೀವು ಯೋಚಿಸುತ್ತಿರಬಹುದು ಅಲ್ವಾ.. ಇದು ಮೆಹಂದಿ ಕುಕಿಗಳೇ ಆದರೆ ನಿಜವಾದ ಮೆಹಂದಿಯಿಂದ ತಯಾರಿಸಿದ್ದಲ್ಲ, ಬದಲಾಗಿ ಮೆಹಂದಿ ಬಣ್ಣದ ರಾಯಲ್ ಐಸಿಂಗ್ ಬಳಸಿ ತಯಾರಿಸಿದ ಕುಕೀಗಳಿವು. ಈ ಸುಂದರವಾದ ಕುಕೀಗಳನ್ನು ತಯಾರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದು ಎಲ್ಲರ ಮನಗೆದ್ದಿದೆ.
ಶರ್ಮೀನ್ ಎಂಬ ಮೆಹಂದಿ ಆರ್ಟಿಸ್ ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ (@sharmeendoeshenne) ಹಂಚಿಕೊಂಡಿದ್ದು, ವಿಡಿಯೋದಲ್ಲಿ ಈಕೆ ಕುಕೀಗಳಲ್ಲಿ ಸುಂದರವಾದ ವಿಧವಿಧದ ಮೆಹಂದಿ ಡಿಸೈನ್ಗಳನ್ನು ಬಿಡಿಸುವುದನ್ನು ಕಾಣಬಹುದು.
ಈ ವೈರಲ್ ವಿಡಿಯೋದಲ್ಲಿ ಶರ್ಮೀನ್ ಮೊದಲಿಗೆ ಕುಕೀಗಳನ್ನು ಬೇಕ್ ಮಾಡಲು ಬೇಕಾದ ಹದವಾದ ಹಿಟ್ಟನ್ನು ತಯಾರಿಸಿ, ಆ ಹಿಟ್ಟಿನಲ್ಲಿ ಮುದ್ದಾದ ಪುಟ್ಟ ಪುಟ್ಟ ಕೈಗಳ ಆಕಾರವನ್ನು ರಚಿಸಿ, ಬಳಿಕ ಆ ಕುಕೀಗಳನ್ನು ಮೈಕ್ರೋವೇವ್ ಅಲ್ಲಿ ಬೇಕ್ ಮಾಡುತ್ತಾರೆ. ಕುಕಿಗಳು ಬೆಂದ ನಂತರ ಅದನ್ನು ಹೊರ ತೆಗೆದು, ಕೈಗಳ ಆಕಾರದಲ್ಲಿರುವ ಕುಕೀಗಳಲ್ಲಿ ಮೆಹಂದಿ ಬಣ್ಣದ ರಾಯಲ್ ಐಸಿಂಗ್ ನಿಂದ ಸುಂದರವಾದ ಮೆಹಂದಿ ಡಿಸೈನ್ಗಳನ್ನು ಬಿಡಿಸುತ್ತಾರೆ. ಹೀಗೆ ಪ್ರತಿಯೊಂದು ಕುಕೀಯಲ್ಲೂ ವಿವಿಧ ಮೆಹಂದಿ ಡಿಸೈನ್ಗಳನ್ನು ಬಿಡಿಸುವುದನ್ನು ವೀಡಿಯೋದಲ್ಲಿ ಕಾಣಬಹುದು. ಈ ಸುಂದರವಾದ ವಿಡಿಯೋ ನೆಟ್ಟಿಗರ ಮನಗೆದ್ದಿದೆ.
ಇದನ್ನೂ ಓದಿ: ಹೀಗೊಂದು ವಿಶೇಷ ಮದುವೆ, ಬಾನಂಗಳದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ನವಜೋಡಿ
ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ 27.1 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 935K ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಗಳನ್ನು ಬಂದಿದೆ. ಒಬ್ಬ ಬಳಕೆದಾರರು ಕೈಗಳ ಆಕಾರದಲ್ಲಿರುವ ಈ ಕುಕೀಗಳು ತುಂಬಾ ಮುದ್ದಾಗಿವೆ” ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು “ಇದು ತುಂಬಾ ಅದ್ಭುತವಾಗಿದೆ” ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು “ಇಂತಹ ಮುದ್ದಾದ ಕುಕೀಗಳನ್ನು ತಿನ್ನಲು ನನಗಂತೂ ಮನಸ್ಸು ಬಾರದು, ಅಷ್ಟು ಮುದ್ದಾಗಿವೆ ಇವುʼ ಎಂದು ಹೇಳಿದ್ದಾರೆ. ಇನ್ನೂ ಹಲವರು ಈಕೆಯ ತಾಳ್ಮೆ ಮತ್ತು ಕೌಶಲ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ