ನಾವೆಲ್ಲದ್ರೂ ಟ್ರಿಪ್ ಹೋದ್ರೆ, ಅಲ್ಲಿ ಏನಾದ್ರೂ ಸ್ಪೆಷಲ್ ಉಡುಗೊರೆಗಳನ್ನು ನಾವು ನಮ್ಮ ಸ್ನೇಹಿತರು ಹಾಗೂ ಕುಟುಂಬದವರಿಗಾಗಿ ಕೊಂಡುಕೊಳ್ಳುತ್ತೇವೆ ಅಲ್ವಾ. ಈ ಉಡುಗೊರೆಗಳನ್ನು ವಿಶೇಷ ಸ್ಥಳಗಳಿಂದ ಖರೀದಿಸಿದಾಗ ಆ ಉಡುಗೊರೆಯೂ ತುಂಬಾನೇ ವಿಶೇಷವಾಗಿರುತ್ತೆ. ಹೀಗೆ ನೀವೇನಾದ್ರೂ ಕೇರಳ ಕಡೆಗೆ ಟ್ರಿಪ್ ಹೋದ್ರೆ, ಅಲ್ಲಿನ ಈ ಒಂದು ವಿಶೇಷ ಸ್ಥಳದಿಂದ ನಿಮ್ಮ ಪ್ರೀತಿಪಾತ್ರರಿಗೆ ವಿಶೇಷ ಉಡುಗೊರೆಗಳನ್ನು ಕೊಂಡುಕೊಳ್ಳಲು ಮರೆಯದಿದೆ.
ಆ ವಿಶೇಷ ಸ್ಥಳ ಯಾವುದು ಅಂತಾ ಯೋಚ್ನೆ ಮಾಡ್ತಿದ್ದಿರಾ, ಅದುವೇ ಕೇರಳದ ಕೋಝಿಕ್ಕೋಡ್ ಅಲ್ಲಿರುವ ULCCS ಫೌಂಡೇಶನ್ ಮತ್ತು ಡೌನ್ಸ್ ಸಿಂಡ್ರೋಮ್ ಟ್ರಸ್ಟ್ ನಡೆಸುತ್ತಿರುವ ʼಸರ್ಗಶೇಷಿʼ ಎಂಬ ಹೆಸರಿನ ಕರಕುಶಲ ಮಳಿಗೆ. ಈ ಕರಕುಶಲ ಮಳಿಗೆಯ ವಿಶೇಷವೇನೆಂದ್ರೆ, ಇಲ್ಲಿ ಡೌನ್ ಸಿಂಡ್ರೋಮ್ನಿಂದ ಬಳಲುತ್ತಿರುವಂತಹ ವಿಶೇಷಚೇತನರೇ ಈ ಮಳಿಗೆಯನ್ನು ನಿರ್ವಹಿಸುತ್ತಿದ್ದಾರೆ. ಲ್ಯಾಪ್ ಟಾಪ್ ಬ್ಯಾಗ್ನಿಂದ ಹಿಡಿದು ವಿವಿಧ ಬಗೆಯ ಗಿಫ್ಟ್ ಐಟಂ ವರಗೆ ಇಲ್ಲಿ ಪ್ರತಿಯೊಂದು ವಸ್ತುವೂ ಲಭ್ಯವಿದೆ. ವಿಶೇಷಚೇತನರು ತಯಾರಿಸಿದಂತ ಹ್ಯಾಂಡ್ ಮೇಡ್ ಬ್ಯಾಗ್, ಫೋಟೋ ಫ್ರೇಮ್, ಗಿಫ್ಟ್ ಪ್ರೋಡಕ್ಟ್ಗಳನ್ನು ಈ ಮಳಿಗೆಯಲ್ಲಿ ಮಾರಾಟ ಮಾಡಲಾಗುತ್ತದೆ. ಅಷ್ಟೇ ಅಲ್ಲದೆ ಭಾರಿ ಡಿಸ್ಕೌಂಟ್ ಬೆಲೆಯಲ್ಲಿ ಎಲ್ಲಾ ರೀತಿಯ ಕರಕುಶಲ ಉತ್ಪನ್ನಗಳು ಇಲ್ಲಿ ಲಭ್ಯವಿದೆ. ಮುಂದಿನ ಬಾರಿ ನೀವೇನಾದ್ರೂ ಕೇರಳಕ್ಕೆ ಟ್ರಿಪ್ ಹೋದ್ರೆ ಈ ವಿಶೇಷ ಸ್ಥಳದಿಂದ ನಿಮ್ಮ ಪ್ರೀತಿಪಾತ್ರರಿಗೆ ವಿಶೇಷ ಉಡುಗೊರೆಗಳನ್ನು ಖರೀದಿಸಲು ಮರೆಯದಿರಿ.
ಈ ವಿಶೇಷ ಮಳಿಗೆಯ ಕುರಿತ ವಿಡಿಯೋವನ್ನು ಅಸ್ವಲ್ ಪುತ್ರೆನ್ (@kozhikode_to_you) ಎಂಬವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ವಿಡಿಯೋದಲ್ಲಿ ಈ ಒಂದು ವಿಶೇಷ ಮಳಿಗೆಯ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದ್ದಾರೆ.
ಇದನ್ನೂ ಓದಿ: ಅಮ್ಮನ ಮಡಿಲು ಸೇರಿದ ಕಂದಮ್ಮ, ಆನೆಗಳ ಭಾವನಾತ್ಮಕ ಚಿತ್ರ ಹೇಗಿದೆ? ನೋಡಿ
ಜನವರಿ 02 ರಂದು ಹಂಚಿಕೊಳ್ಳಲಾದ ಈ ವಿಡಿಯೋ 2.8 ಮಿಲಿಯನ್ ವೀಕ್ಷಣೆಗಳನ್ನು ಒಂದುವರೆ ಲಕ್ಷಕ್ಕೂ ಅಧಿಕ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ಈ ವಿಶೇಷ ಶಾಪ್ ಬಗ್ಗೆ ಮಾಹಿತಿಯನ್ನು ನೀಡಿದ್ದಕ್ಕಾಗಿ ಧನ್ಯವಾದಗಳನ್ನು ತಿಳಿಸಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇಂತಹ ಮಳಿಗೆಗಗಳಿಂದ ವಸ್ತುಗಳನ್ನು ಖರೀದಿಸುವ ಮೂಲಕ ನಮ್ಮ ಕೈಲಾದಷ್ಟು ಸಹಾಯವನ್ನು ಮಾಡಬೇಕುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಾನು ಖಂಡಿತವಾಗಿಯೂ ಇಲ್ಲಿಗೆ ಭೇಟಿ ನೀಡುತ್ತೇನೆʼ ಎಂದು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:52 pm, Thu, 4 January 24