ಇಸ್ರೇಲ್ ಇರಾನ್ ಯುದ್ಧಕ್ಕೂ ಅಮೆರಿಕದಲ್ಲಿ ಪಿಜ್ಜಾ ಆರ್ಡರ್ ಹೆಚ್ಚಳಕ್ಕೂ ಏನು ಸಂಬಂಧ? ಇಲ್ಲಿದೆ ಅಸಲಿ ವಿಚಾರ
ಇರಾನ್ ಹಾಗೂ ಇಸ್ರೇಲ್ ನಡುವಿನ ಸಂಘರ್ಷವು ಮುಂದುವರೆದಿದ್ದು, ಉಭಯ ರಾಷ್ಟ್ರಗಳು ಪರಸ್ಪರ ಕ್ಷಿಪಣಿ ದಾಳಿಗಳನ್ನು ನಡೆಸುವ ಮೂಲಕ ಯುದ್ಧದ ತೀವ್ರತೆಯೂ ಹೆಚ್ಚಾಗಿದೆ. ಹೌದು, ಜೂನ್ 13 ರಂದು ಇಸ್ರೇಲ್ ಇರಾನ್ ಮೇಲೆ ದಾಳಿ ನಡೆಸಿತು. ಆದರೆ ಈ ಇರಾನ್ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಗೂ ಮುನ್ನ ಅಮೆರಿಕಾದ ಪೆಂಟಗನ್ ಸುತ್ತಮುತ್ತಲಿನ ಮೂರು ರೆಸ್ಟೋರೆಂಟ್‌ಗಳಲ್ಲಿ ಪಿಜ್ಜಾ ಆರ್ಡರ್‌ಗಳು ಹೆಚ್ಚಾಗಿವೆ ಎಂದು ವರದಿಯಾಗಿವೆ. ಹಾಗಾದ್ರೆ ಈ ಯುದ್ಧಕ್ಕೂ ಪಿಜ್ಜಾ ಆರ್ಡರ್‌ಗಳಲ್ಲಿ ಏಕಾಏಕಿ ಏರಿಕೆಯಾಗುವುದಕ್ಕೂ ಏನು ಸಂಬಂಧ? ಈ ಕುರಿತಾದ ಕುತೂಹಲಕಾರಿ ಮಾಹಿತಿ ಇಲ್ಲಿದೆ.

ಇಸ್ರೇಲ್ ಹಾಗೂ ಇರಾನ್ (Israel and Iran) ನಡುವಿನ ಉದ್ವಿಗ್ನತೆ ಹೆಚ್ಚುತ್ತಿದ್ದು, ಈ ಯುದ್ಧದಿಂದಾಗಿ ಇರಾನ್ ನಲ್ಲಿ ಇಲ್ಲಿಯವರೆಗೆ ಸರಿಸುಮಾರು 639 ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದೆಲ್ಲರ ನಡುವೆ, ಇರಾನ್ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಗೂ ಮುನ್ನ ಪೆಂಟಗನ್ (Pentagon) ಸುತ್ತಮುತ್ತಲಿನ ರೆಸ್ಟೋರೆಂಟ್‌ಗಳಲ್ಲಿ ಪಿಜ್ಜಾ ಆರ್ಡರ್‌ಗಳಲ್ಲಿ ಗಣನೀಯ ಏರಿಕೆ ಕಂಡಿವೆ ಎನ್ನಲಾಗಿದೆ. ಆದರೆ ಈ ಯುದ್ಧ ನಡೆಯುವ ಹಿಂದಿನ ದಿನ ಪಿಜ್ಜಾ ಆರ್ಡರ್‌ಗಳಲ್ಲಿ ಹೆಚ್ಚಳವಿರಲಿಲ್ಲ. ಹೌದು, ಅಮೆರಿಕದ ರಕ್ಷಣಾ ಪ್ರಧಾನ ಕಚೇರಿ (USA Defense Headquarters) ಯಾದ ಪೆಂಟಗನ್ ಬಳಿಯಲ್ಲಿನ ರೆಸ್ಟೋರೆಂಟ್‌ಗಳಲ್ಲಿನ ದಟ್ಟಣೆಯೂ, ಯುದ್ಧಕ್ಕೆ ಪ್ರಮುಖ ಸಿದ್ಧತೆಗಳು ನಡೆಯುತ್ತಿವೆ ಎನ್ನುವುದರ ಸೂಚನೆಯಾಗಿತ್ತು ಎನ್ನಲಾಗಿದೆ.
ವೈರಲ್ ಪೋಸ್ಟ್‌ನಲ್ಲಿ ಏನಿದೆ? ಪೆಂಟಗನ್ ಪಿಜ್ಜಾ ಇಂಡೆಕ್ಸ್ ಎಕ್ಸ್ ಖಾತೆಯಲ್ಲಿ ಪಿಜ್ಜಾ ಔಟ್‌ಲೆಟ್‌ಗಳಲ್ಲಿ ಹೆಚ್ಚಿನ ವಿತರಣೆಯನ್ನು ತೋರಿಸುವ ಸ್ಕ್ರೀನ್ ಶಾರ್ಟ್ ಶೇರ್ ಮಾಡಿಕೊಳ್ಳಲಾಗಿದೆ. ಜೂನ್ 13 ರಂದು ಸಂಜೆ 6 ಗಂಟೆಯ ಸುಮಾರಿಗೆ ಬಹುತೇಕ ಎಲ್ಲಾ ಪೆಂಟಗನ್ ಪಿಜ್ಜಾ ಅಂಗಡಿಗಳಲ್ಲಿ ಹೆಚ್ಚಿನ ಜನಸಂದಣಿ ಕಂಡುಬಂದಿದೆ ಎಂದು ಹೇಳಿರುವುದನ್ನು ಈ ಪೋಸ್ಟ್‌ನಲ್ಲಿ ನೋಡಬಹುದು. ಅದಲ್ಲದೇ ಡೊಮಿನೋಸ್ ಶಾಪ್ ಕೂಡ ರಾತ್ರಿ 11 ಗಂಟೆಯ ಸುಮಾರಿಗೆ ಹೆಚ್ಚಿನ ಜನಸಂದಣಿಯಿಂದ ಕೂಡಿತ್ತು ಎನ್ನಲಾಗಿದೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ
As of 6:59pm ET nearly all pizza establishments nearby the Pentagon have experienced a HUGE surge in activity. pic.twitter.com/ZUfvQ1JBYM
— Pentagon Pizza Report (@PenPizzaReport) June 12, 2025
ಯುದ್ಧಕ್ಕೂ, ಪಿಜ್ಜಾ ಆರ್ಡರ್ ಹೆಚ್ಚಾಗಲು ಕಾರಣವಿದೆಯಂತೆ
ಅಮೆರಿಕದ ರಕ್ಷಣಾ ಪ್ರಧಾನ ಕಚೇರಿಯಾದ ಪೆಂಟಗನ್ ಬಳಿಯಲ್ಲಿನ ಮೂರು ರೆಸ್ಟೋರೆಂಟ್‌ಗಳಿಂದ ಪಿಜ್ಜಾ ಆರ್ಡರ್‌ಗಳು ಹೆಚ್ಚಾಗಿವೆ. ಇದು ಜಾಗತಿಕ ಬಿಕ್ಕಟ್ಟಿನ ಹಾಗೂ ಭೀಕರ ಯುದ್ಧದ ಸೂಚನೆಗಳಾಗಿವೆ. ಹೌದು ಯುದ್ಧ ಆರಂಭಕ್ಕೂ ಮೊದಲು ಇಲ್ಲಿ ರಾಷ್ಟ್ರೀಯ ಭದ್ರತೆಯನ್ನೊಳಗೊಂಡ ಸಭೆಗಳು ಏರ್ಪಟ್ಟಾಗ ಸಿಬ್ಬಂದಿಗಳು ದೊಡ್ಡ ಪ್ರಮಾಣದಲ್ಲಿ ಪಿಜ್ಜಾ ಆರ್ಡರ್ ಮಾಡುತ್ತಾರೆ. ಹೀಗಾಗಿ ಇದು ಮಿಲಿಟರಿ ಪಡೆಗಳು ಯುದ್ಧಕ್ಕೆ ತೆರಳುವ ಮೊದಲು ಕಾಣಿಸಿಕೊಳ್ಳುವ ಪ್ರವೃತ್ತಿಯಲ್ಲಿ ಒಂದಾಗಿದೆ. ಹೆಚ್ಚು ಪಿಜ್ಜಾ ಆರ್ಡರ್‌ಗಳು ಇದ್ದಷ್ಟೂ, ಯುದ್ಧವು ಭುಗಿಲೆದ್ದ ಸಾಧ್ಯತೆ ಹೆಚ್ಚಂತೆ ಹೀಗಾಗಿ ಪಿಜ್ಜಾಗಳು ಹೆಚ್ಚು ಮಾರಾಟವಾದ ಸಮಯದಲ್ಲಿ ಪೆಂಟಗನ್ ನಲ್ಲಿ ನಿರ್ಣಾಯಕ ಸಭೆಗಳು ನಡೆದಿರಬಹುದು ಎನ್ನಲಾಗಿದೆ. ಇದಾದ ಕೆಲವೇ ಕೆಲವು ಗಂಟೆಗಳ ಬಳಿಕವಷ್ಟೇ ಇಸ್ರೇಲ್ ಇರಾನ್ ಮೇಲೆ ದಾಳಿ ನಡೆಸಿತು ಎನ್ನಲಾಗಿದೆ.
ಇದನ್ನೂ ಓದಿ :World Longest Highway : ಇದು ವಿಶ್ವದ ಅತಿ ಉದ್ದದ ರಸ್ತೆಯಂತೆ, ಇದು ಎಲ್ಲಿರುವುದು ಗೊತ್ತಾ?
ಶೀತಲ ಸಮರದ ವೇಳೆಯಲ್ಲಿ ಪಿಜ್ಜಾ ಆರ್ಡರ್‌ಗಳಲ್ಲಿ ಗಣನೀಯ ಏರಿಕೆ
ಪಿಜ್ಜಾ ಆರ್ಡರ್ ಏರಿಕೆ ಹಾಗೂ ಯುದ್ಧದ ನಡುವಿನ ಈ ಸಂಬಂಧವು ಬಹಳ ಹಳೆಯದ್ದೇ ಎನ್ನಬಹುದು. 1990ರಲ್ಲಿ ನಡೆದ ಶೀತಲ ಸಮರದ ಸಂದರ್ಭದಲ್ಲಿ ಕೂಡ ಹೀಗೆಯೇ ಆಗಿತ್ತಂತೆ. ಆ ವೇಳೆಯಲ್ಲಿ ಅಮೆರಿಕವು ಸೋವಿಯತ್ ಒಕ್ಕೂಟದೊಂದಿಗೆ ನಿರಂತರವಾಗಿ ಭಿನ್ನಾಭಿಪ್ರಾಯವಿತ್ತು. ಆ ಸಮಯದಲ್ಲಿ, ವಾಷಿಂಗ್ಟನ್ ಡಿಸಿಯಲ್ಲಿ ಪಿಜ್ಜಾ ವಿತರಣೆ ಇದ್ದಕ್ಕಿದ್ದಂತೆ ಹೆಚ್ಚಾಯಿತು. ಆಗಸ್ಟ್ 1, 1990 ರಂದು, ಸಿಐಎ ಕಟ್ಟಡಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪಿಜ್ಜಾಗಳನ್ನು ಆರ್ಡರ್ ಮಾಡಲಾಯಿತು. ಇದಾದ ಮಾರನೇ ದಿನವೇ ಇರಾಕ್ ಕುವೈತ್ ಮೇಲೆ ದಾಳಿ ಮಾಡಿತು. 1991 ರಲ್ಲಿ ಆಪರೇಷನ್ ಡೆಸರ್ಟ್ ಸ್ಟಾರ್ಮ್ ಸಮಯದಲ್ಲಿಯೂ ಪಿಜ್ಜಾ ಆರ್ಡರ್ ನಲ್ಲಿ ಹೆಚ್ಚಳ ಕಂಡು ಬಂದಿತ್ತು ಎನ್ನಲಾಗಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:15 pm, Thu, 19 June 25








