Video: ಅಪರಿಚಿತ ವ್ಯಕ್ತಿಗೆ ಊಟ ಹಾಕಿ ಸತ್ಕರಿಸಿದ ಬೆಂಗಳೂರಿನ ಕುಟುಂಬ, ಇದೇ ನೋಡಿ ನಿಜವಾದ ಸಂಸ್ಕಾರ
ಕನ್ನಡಿಗರ ಮನಸ್ಸು ನಿಜಕ್ಕೂ ದೊಡ್ಡದು, ಭಾಷಿಕರು ಯಾರೇ ಬಂದು ಸಹಾಯ ಕೇಳಿದರೂ ಹಿಂದೆ ಮುಂದೆ ನೋಡದೇ ಸಹಾಯ ಮಾಡುವ ದೊಡ್ಡಗುಣ ನಮ್ಮವರದ್ದು. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋ ಇದಕ್ಕೆ ಸಾಕ್ಷಿಯೆನ್ನುವಂತಿದೆ. ಮಾಯಾನಗರಿ ಬೆಂಗಳೂರಿಗೆ ಬಂದ ಹಿಂದಿ ಭಾಷಿಕನೊಬ್ಬನಿಗೆ ಬೆಂಗಳೂರಿನಲ್ಲಿ ನೆಲೆಸಿರುವ ಕುಟುಂಬವೊಂದು ಅತಿಥಿ ಸತ್ಕಾರ ನೀಡಿದೆ. ಈ ಹೃದಯಸ್ಪರ್ಶಿ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರ ಹೃದಯ ಗೆದ್ದುಕೊಂಡಿದೆ.

ಇತ್ತೀಚೆಗಿನ ದಿನಗಳಲ್ಲಿ ಕನ್ನಡಿಗರು ಹಾಗೂ ಪರಭಾಷಿಕರ ನಡುವೆ ಒಂದಲ್ಲ ಒಂದು ವಿವಾದಗಳು ನಡೆಯುತ್ತಲೇ ಇದೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸೋಶಿಯಲ್ ಮೀಡಿಯಾ (social media) ದಲ್ಲಿ ವೈರಲ್ ಆಗುವುದನ್ನು ನೀವು ನೋಡಿರಬಹುದು. ಆದರೆ ಇದೀಗ ಇದಕ್ಕೆ ತದ್ವಿರುದ್ಧ ಎನ್ನುವಂತಹ ವಿಡಿಯೋ ವೈರಲ್ ಆಗಿದ್ದು, ಇದು ಬಾಂಧವ್ಯ ಸಾರುವಂತಿದೆ. ಗುರುತು ಪರಿಚಯವಿಲ್ಲದ ವ್ಯಕ್ತಿಗಳು ಮನೆಗೆ ಬಂದು ಊಟ ಹಾಕಿ ಎಂದಾಗ ಒಂದು ಕ್ಷಣ ಹಿಂದೆ ಮುಂದೆ ಯೋಚಿಸುವವರೇ ಹೆಚ್ಚು. ಹೌದು ದೆಹಲಿ ಮೂಲದ ಅಪರಿಚಿತ ವ್ಯಕ್ತಿಯಾಗಿರುವ ಸದೀವ್ ಸಿಂಗ್ (Sadeev Singh) ಅವರಿಗೆ ಬೆಂಗಳೂರಿನ ಕುಟುಂಬವೊಂದು ಅತಿಥ್ಯ ನೀಡಿ ನೆಟ್ಟಿಗರ ಹೃದಯ ಗೆದ್ದುಕೊಂಡಿದೆ.
ವೈರಲ್ ವಿಡಿಯೋದಲ್ಲಿ ಏನಿದೆ?
saadeevxsingh ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ದೆಹಲಿಯ ವ್ಯಕ್ತಿ ಇನ್ಫ್ಲುಯೆನ್ಸರ್ ಮತ್ತು ಸ್ಟಾರ್ಟ್‌ಅಪ್ ಸಂಸ್ಥಾಪಕರಾದ ಸದೀವ್ ಸಿಂಗ್ ಶೇರ್ ಮಾಡಿಕೊಂಡಿದ್ದಾರೆ. ಈ ವ್ಯಕ್ತಿ ಬೆಂಗಳೂರಿನ ಯಾವುದಾದರೂ ಮನೆಯಲ್ಲಿ ತಯಾರಿಸಿದ ಊಟದ ರುಚಿ ಸವಿಯಬೇಕೆಂದು ಎಂದು ಕೊಂಡಿದ್ದಾರೆ. ಹೀಗಾಗಿ ಬೆಂಗಳೂರಿನ ಅಪರಿಚಿತ ಮನೆಯ ಮುಂದೆ ನಿಂತು ನಿಮ್ಮ ಮನೆಯಲ್ಲಿ ಉಪಹಾರ ಮಾಡಬಹುದೇ ಎಂದು ಕೇಳಿಕೊಂಡಿದ್ದು, ಆ ಕುಟುಂಬವು ಸಮ್ಮತಿ ಸೂಚಿಸಿದೆ. ಈ ವಿಡಿಯೋದಲ್ಲಿ ಮನೆಯ ಮುಂದೆ ನಿಂತ ಮಹಿಳೆಯನ್ನು ಬೆಳಗಿನ ಉಪಾಹಾರಕ್ಕೆ ನಿಮ್ಮ ಮನೆಯಲ್ಲಿ ಮಾಡಬಹುದೇ ಎಂದು ಕೇಳುವುದನ್ನು ನೀವು ನೋಡಬಹುದು. ಆದರೆ ಆ ತಕ್ಷಣ ಯಾವುದೇ ಪ್ರತಿಕ್ರಿಯೆ ನೀಡದೇ ಒಳಗೆ ಹೋಗಿ ಕೇಳಿ ಬರುತ್ತೇನೆ ಎಂದೇಳಿ ಕೊನೆಗೆ ಇವರನ್ನು ಬೆಳಗ್ಗಿನ ತಿಂಡಿ ತಿನ್ನಲು ಆಹ್ವಾನಿಸಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು.
ಸದೀವ್ ಸಿಂಗ್ ಹಾಗೂ ಅವರ ಜೊತೆಗಿದ್ದ ಮಹಿಳೆಯೂ ಮನೆ ಒಳಗೆ ಹೋಗುತ್ತಾರೆ. ಪ್ರೀತಿಯಿಂದ ರಾಗಿ ಮುದ್ದೆ ಹಾಗೂ ಚಿಕನ್ ಸಾಂಬಾರ್ ಬಡಿಸಿದ್ದು, ಹೊಟ್ಟೆ ತುಂಬಾ ತಿಂದ ಸದೀವ್ ಮತ್ತು ಅವರ ಜೊತೆಗಿದ್ದ ಮಹಿಳೆ ಮನೆಯವರ ಪಾದಗಳಿಗೆ ನಮಸ್ಕರಿಸಿದ್ದಾರೆ. ಈ ವೇಳೆಯಲ್ಲಿ ಬೆಂಗಳೂರಿನ ಜನರು ನಿಜಕ್ಕೂ ತುಂಬಾನೇ ಒಳ್ಳೆಯವರು ಎಂದು ಹೇಳಿರುವುದನ್ನು ಕಾಣಬಹುದು. ಊಟ ತುಂಬಾನೇ ಚೆನ್ನಾಗಿತ್ತು ಹೇಳಿ ಮನೆಯಿಂದ ತೆರಳಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಈ ವಿಡಿಯೋವೊಂದು 33 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರು ಈ ಹೃದಯಸ್ಪರ್ಶಿ ವಿಡಿಯೋವನ್ನು ಮೆಚ್ಚಿಕೊಂಡಿದ್ದಾರೆ. ಈ ವಿಡಿಯೋಗೆ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದು, ಇವರು ಸವಿದದ್ದು ರಾಗಿ ಮುದ್ದೆ, ಇದು ನಿಜಕ್ಕೂ ಒಳ್ಳೆಯ ಹಾಗೂ ಆರೋಗ್ಯಕರ ಆಹಾರ ಎಂದಿದ್ದಾರೆ. ಇನ್ನೊಬ್ಬರು, ರಾಗಿ ಮುದ್ದೆ, ಇವರು ನಿಜವಾದ ಕನ್ನಡಿಗರು, ಅತಿಥಿ ದೇವೋ ಭವ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಇವರು ನಿಜವಾದ ಬೆಂಗಳೂರಿಗರು ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:08 pm, Wed, 18 June 25








