ಹಿಂಗಾದ್ರೆ ಹೆಂಗೆ ಸ್ವಾಮಿ ಕನ್ನಡದುದ್ಧಾರ!? ಶುರುವಾಯ್ತು ರಾಜ್ಯೋತ್ಸವದ ಕಹಳೆ

Kannada Rajyotsava : ಪಾಯಸಾ ಅನ್ನೋಕ ಖೀರ್ ಅಂತೀ, ಹುಗ್ಗಿ ಅನ್ನೋಕ ಪೊಂಗಲ್ ಅಂತೀ, ಸಾರು ಅನ್ನೋಕ ರಸಂ ಅಂತೀ; ಈ ‘ಮರಿ ಎಸ್​ಪಿಬಿ’ ನಿಮ್ಮೂರಿನವರಾ, ಹೆಸರೇನು ಗೊತ್ತಾ? ಸಿಕ್ಕರೆ ನಮಗೊಪ್ಪಿಸಿ ಇವರಿಗೆ ಸಿಹಿಯಾದ ಶಿಕ್ಷೆ ಕಾದಿದೆ!

ಹಿಂಗಾದ್ರೆ ಹೆಂಗೆ ಸ್ವಾಮಿ ಕನ್ನಡದುದ್ಧಾರ!? ಶುರುವಾಯ್ತು ರಾಜ್ಯೋತ್ಸವದ ಕಹಳೆ
Updated By: ಶ್ರೀದೇವಿ ಕಳಸದ

Updated on: Oct 15, 2022 | 5:24 PM

Viral Video : ಇನ್ನು ಹದಿನೈದು ದಿನ ಕಳೆದರೆ ಕನ್ನಡ ರಾಜ್ಯೋತ್ಸವ ಸಂಭ್ರಮ. ಬೀದಿಬೀದಿಗಳಲ್ಲಿ, ಶಾಲೆಕಾಲೇಜುಗಳಲ್ಲಿ, ಊರುಕೇರಿಗಳಲ್ಲಿ ಎಲ್ಲಕ್ಕಿಂತ ಮುಖ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಾಭಿಮಾನ ಮತ್ತು ಕನ್ನಡ ಜಾಗೃತಿಯ ಕಲರವ. ಈ ಎಲ್ಲದಕ್ಕೂ ಓನಾಮವೆಂಬಂತೆ ಈ ಪುಟ್ಟಣ್ಣ ಕನ್ನಡಭಾಷೆಯ ಮಹತ್ವದ ಕುರಿತು ಹೀಗೆ ತನ್ಮಯಾಗಿ ಹಾಡಿರುವ ವಿಡಿಯೋ ವೈರಲ್ ಆಗುತ್ತಿದೆ. ಕನ್ನಡ ಭಾಷೆಯನ್ನು ಆಡುತ್ತಾಡುತ್ತಾ ಬೆಳೆಸಬೇಕು ಅದೇ ಕನ್ನಡದ ಸಿಂಗಾರ ಎನ್ನುತ್ತಿರುವ ಈ ಪೋರನಿಗೆ ಅದೆಂಥ ಲಯ, ಉಚ್ಛಾರ, ಪಲಕು, ಗತ್ತು, ಕೇಳಿ ಒಮ್ಮೆ…  ಪಾಯಸಾ ಅನ್ನೋದಕ್ಕೆ ಖೀರ್ ಅಂತೀ, ಹುಗ್ಗಿ ಅನ್ನೋಕ ಪೊಂಗಲ್ ಅಂತೀ, ಸಾರು ಅನ್ನಾಕ ರಸಂ ಅಂತೀ, ಹುರಳಿಕಾಯಿಗೆ ಬೀನ್ಸ್​ ಅಂತೀ, ಪಲ್ಯ ಅನ್ನಾಕ ಕರೀ ಅಂತೀ. ಯಾಕಪ್ಪಾ ಯಾಕಮ್ಮಾ ಯಾಕಣ್ಣಾ ಯಾಕಣ್ಣಾ ಯಾಕಲೇ ತಮ್ಮಾ ಹಿಂಗಾದರೆ ಹೆಂಗೆ ಸ್ವಾಮಿ ಕನ್ನಡದುದ್ಧಾರ!

 

ಕನ್ನಡದಲ್ಲಿ ಪದ ಇದ್ದರೂ ಕೂಡ ಯಾಕೆ ಹಿಂಜರಿಕೆ ನಿಮಗೆ, ಹಾತೊರೆಯೋದೆಲ್ಲ ಪಕ್ಕದ ಮನೆ ಕವಳಕ್ಕೇ? ಎನ್ನುತ್ತಾನೆ. ನಮಗೆಲ್ಲ ಅಕ್ಕಪಕ್ಕದವರನ್ನು ಮೆಚ್ಚಿಸುವ ಖಯಾಲಿ ಅಲ್ಲವೆ? ಮೊದಲು ಮಾತೃಭಾಷೆಯನ್ನು ಪ್ರೀತಿಸಿ, ಪ್ರೀತಿಸುವುದೆಂದರೆ ನಿತ್ಯವೂ ಆ ಭಾಷೆಯಲ್ಲಿಯೇ ಒಡನಾಡುವುದು. ಅಷ್ಟೊಂದು ಅರ್ಥವತ್ತಾದ, ಮಧುರವಾದ ಭಾಷೆ ನಮ್ಮ ಕನ್ನಡ. ಈ ಕನ್ನಡಕ್ಕೆ ಪರಭಾಷಿಕರೂ ಕೊಡುಗೆ ಕೊಟ್ಟಿದ್ದಾರೆ. ಅವರನ್ನೆಲ್ಲ ಮರೆಯುವುದುಂಟೇ?

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಚಿಕ್ಕಮ್ಮ, ಚಿಕ್ಕಪ್ಪ, ಅತ್ತೆ, ಮಾವ ಎಷ್ಟೆಲ್ಲ ಆಪ್ತ ಸಂಬಂಧವಾಚಕಗಳು, ರೊಟ್ಟಿ, ಹುಗ್ಗಿ, ಸಾರು ಇನ್ನೂ ಏನೆಲ್ಲ  ತಿಂಡಿತಿನಿಸುಗಳ ಹೆಸರುಗಳು ನಮ್ಮ ಅಚ್ಚಕನ್ನಡದಲ್ಲಿ. ಸಾಕಲ್ಲವಾ ಇನ್ನು ಕಡತಂದ ಪದಗಳ ತೊಟ್ಟುಕೊಳ್ಳುವಿಕೆ?

ಉಳಿದ ಭಾಷೆಗಳೂ ಇರಲಿ. ಆದರೆ ಮೊದಲು ನಮ್ಮ ನೆಲದ ಭಾಷೆ. ಹೇಗನ್ನಿಸಿತು ಈ ಪುಟ್ಟಣ್ಣನ ಹಾಡು ನಿಮಗೆ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:10 pm, Sat, 15 October 22