ಯಾರಿಗೆ ತಾನೇ ಬಾಯಲ್ಲಿ ನೀರೂರುವುದಿಲ್ಲ ಇದೆಲ್ಲ ನೋಡಿದರೆ; ಫುಡ್ ಆರ್ಟ್
Food Art : ಮಸಾಲೆದೋಸೆ, ಪಾವ್ ಭಾಜಿ, ಉತ್ತಪ್ಪ, ಅಪ್ಪಂ ಏನೆಲ್ಲಾ ಇದೆ ಇಲ್ಲಿ. ನಿಮಗೇನು ಇಷ್ಟ? ಆದರೆ ಇದರಲ್ಲಿ ಎಲ್ಲವನ್ನೂ ತಿನ್ನಲಾಗದು. ಒಂದನ್ನು ಮಾತ್ರ ತಿನ್ನಬಹುದು. ಗುರುತಿಸಬಲ್ಲಿರಾ? ನೋಡಿ ವಿಡಿಯೋ.

Viral Video : ಇದ್ದಲ್ಲಿಯೇ ಇದ್ದು ಈವತ್ತು ಗಮನ ಸೆಳೆಯಲು ಸಾಮಾಜಿಕ ಜಾಲತಾಣ ಒಳ್ಳೆಯ ವೇದಿಕೆ. ಕಲಾವಿದರಿಗಂತೂ ಇದು ದೊಡ್ಡ ವರದಾನ. ಈಗ ಇಲ್ಲಿರುವ ಈ ಫೋಟೋದಲ್ಲಿ ಪಾವ್ ಭಾಜೀ, ಮಸಾಲೆ ದೋಸೆ, ಅಪ್ಪಂ, ಉತ್ತಪ್ಪ ನೋಡುತ್ತ, ಆಹಾ ಏನು ತಿನ್ನಲಿ ಏನು ಬಿಡಲಿ ಎಂದೆನ್ನಿಸುತ್ತಿರಬೇಕಲ್ಲ? ಇದೀಗ ವೈರಲ್ ಆಗಿರುವ ಈ ಪೋಸ್ಟ್ ಅನ್ನು ನೆಟ್ಟಿಗರು ಬಿಟ್ಟಕಣ್ಣಿನಿಂದ ನೋಡುತ್ತ ಕುಳಿತಿದ್ದಾರೆ. ಇಲ್ಲಿರುವ ಕಲಾವಿದೆ ಕುಕರಿ ಷೋ ಪ್ರಸ್ತುಪಡಿಸಿಲ್ಲ. ಹಾಗಿದ್ದರೆ ಏನಿರಬಹುದು ಇದು?
ಇದು ಫುಡ್ ಆರ್ಟ್. @ruandchai ಈ ಇನ್ಸ್ಟಾಗ್ರಾಂ ಖಾತೆಯು ರುಚಾ ಮತ್ತು ಚೈತನ್ಯ ಎನ್ನುವವರು ತಮ್ಮ ಕಲಾಕೃತಿಯನ್ನು ಪೋಸ್ಟ್ ಮಾಡಿದ್ದಾರೆ. ಕಲಾವಿದೆ ರುಚಾ ದೋಸೆ ಸಾಂಬಾರ್, ಅಪ್ಪಂ, ಪಾವ್ ಭಾಜಿ, ಉತ್ತಪ್ಪ ಮುಂದಿಟ್ಟುಕೊಂಡಿದ್ದಾರೆ. ಈ ಎಲ್ಲ ತಿನಿಸುಗಳಲ್ಲಿ ಒಂದು ಮಾತ್ರ ನಿಜವಾದದ್ದು, ಉಳಿದುದೆಲ್ಲ ಪೇಂಟಿಂಗ್. ಯಾವುದು ನಿಜವಾದದ್ದು ಗುರುತಿಸಿ ಎಂದಿದ್ಧಾರೆ. ನೆಟ್ಟಿಗರಿಗೆ ಊಹಿಸಲು ಕಷ್ಟಕರವಾದ ಸವಾಲು ಇದು. ಏಕೆಂದರೆ ಎಲ್ಲವೂ ತಿನ್ನಬಹುದಾದಷ್ಟು ನೈಜತೆಯಿಂದಲೇ ಕೂಡಿವೆ.
6 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ ಈ ರೀಲ್ ಅನ್ನು 16,000ಕ್ಕಿಂತಲೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ. ‘ಇವೆಲ್ಲವೂ ನಿಜವೆಂದೇ ಭಾವಿಸಿದೆವು. ಬಹಳ ಚೆನ್ನಾಗಿ ಮಾಡಿದ್ದೀರಿ’ ಎಂದಿದ್ದಾರೆ ಒಬ್ಬರು. ‘ಓಹ್ ವಾವ್! ನಿಜವಾಗಲೂ ಇವು ಬಹಳ ರುಚಿಯಿಂದ ಕೂಡಿರಬೇಕು’ ಎಂದಿದ್ದಾರೆ ಮತ್ತೊಬ್ಬರು. ‘ಎಷ್ಟೊಂದು ಪ್ರೀತಿ, ಶ್ರದ್ಧೆಯಿಂದ ನೀವಿದನ್ನು ರೂಪಿಸಿದ್ದೀರಿ ಎನ್ನುವುದು ಗೊತ್ತಾಗುತ್ತಿದೆ’ ಎಂದಿದ್ದಾರೆ ಮಗದೊಬ್ಬರು.
ನಿಜಕ್ಕೂ ಇದು ಅದ್ಭುತವಾಗಿದೆಯಲ್ಲವಾ? ಹಾಗಿದ್ದರೆ ನಿಜವಾಗಿಯೂ ತಿನ್ನುವಂಥ ತಿನಿಸು ಯಾವುದು ಅಂತ ನೀವು ಊಹಿಸಿದಿರಾ? ಅದೇ ಉತ್ತಪ್ಪ.
ಟ್ರೆಂಡಿಂಗ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 3:13 pm, Sat, 15 October 22