ಯುವತಿಯ ಉಗುರುಗಳ ಮೇಲೆ ವ್ಯಾನ್ ಗೋ ಕಲಾಕೃತಿ, ವೈರಲ್ ಆಗುತ್ತಿರುವ ನೇಲ್ ಆರ್ಟ್
Nail Art : ವ್ಯಾನ್ಗೋನ ಪ್ರಸಿದ್ಧ ಕಲಾಕೃತಿ ‘ಸ್ಟಾರೀ ನೈಟ್ಸ್’. ಯುವತಿಯೊಬ್ಬಳ ಉಗುರುಗಳ ಮೇಲೆ ಅರಳುತ್ತಿರುವ ಈ ಕಲಾಕೃತಿಯ ವಿಡಿಯೋ ಕಲಾಸಕ್ತ ನೆಟ್ಟಿಗರ ಅಚ್ಚರಿಗೆ ಕಾರಣವಾಗಿದೆ.

Viral Video : ಡಚ್ ಮೂಲದ ಕಲಾವಿದ ವಿನ್ಸೆಂಟ್ ವ್ಯಾನ್ ಗೋ ಅವರ ಪ್ರಸಿದ್ಧ ಕಲಾಕೃತಿಗಳಲ್ಲಿ ‘ಸ್ಟಾರೀ ನೈಟ್ಸ್’ (Starry Night) ಕೂಡ ಒಂದು. ಅವರು ಇದನ್ನು 1889ರಲ್ಲಿ ಆಯಿಲ್ ಪೇಂಟ್ ಮೂಲಕ ಕ್ಯಾನ್ವಾಸಿನ ಮೇಲೆ ಚಿತ್ರಿಸಿದ್ದಾರೆ. ಆ ನೀಲಿ ಸುಳಿಗಳು, ಹೊಳೆಯುವ ಅರ್ಧಚಂದ್ರಾಕಾರ, ನಕ್ಷತ್ರಗಳು, ಆ ರಾತ್ರಿ, ಗೋಪುರ, ಸಣ್ಣ ಗುಡಿಸಲು, ಚರ್ಚ್, ಸುರುಳಿಸುರುಳಿಯಾಗಿ ಸುತ್ತುವ ಬೆಟ್ಟಗಳು, ಮಧ್ಯೆ ಮಿಳಿತಗೊಂಡಿರುವ ಹಳದಿ ಚೌಕಗಳು ಒಟ್ಟಾರೆಯಾಗಿ ಈ ವರ್ಣಚಿತ್ರ ನೋಡಿದಾಗ ಒಂದು ರೀತಿಯ ಪ್ರಕ್ಷುಬ್ಧತೆಯ ನಡುವೆ ಶಾಂತಿಯನ್ನು ಅರಸುವ ರೂಪಕದಂತೆ ಕಾಣುತ್ತದೆ. ಇದೀಗ ನೇಲ್ ಆರ್ಟ್ ಕಲಾವಿದರು ಈ ಪೇಂಟಿಂಗ್ ಅನ್ನು ಯುವತಿಯೊಬ್ಬರ ಉಗುರುಗಳ ಮೇಲೆ ಮಾಡಿದ್ದಾರೆ. ಅದೀಗ ವೈರಲ್ ಆಗಿದ್ದು ಕಲಾಪ್ರೇಮಿಗಳ ಮನಸೂರೆಗೊಳ್ಳುತ್ತಿದೆ.
ಸ್ಯಾಂಡಿ ಕ್ರಿಸ್ಟಲ್ ಎಂಬ ನೇಲ್ ಆರ್ಟ್ ಕಲಾವಿದರು ಚಿತ್ರಿಸುತ್ತಿರುವ ಈ ವಿಡಿಯೋಅನ್ನು ಈಗಾಗಲೇ 27,000 ಕ್ಕೂ ಹೆಚ್ಚು ಜನರು ಮೆಚ್ಚಿದ್ದಾರೆ. ನೂರಾರು ಪ್ರತಿಕ್ರಿಯೆಗಳು ವ್ಯಕ್ತಗೊಂಡಿವೆ. ಇಂತಹ ಅಪ್ರತಿಮ ಕಲಾಕೃತಿಯನ್ನು ಉಗುರುಗಳ ಮೇಲೆ ಸೂಕ್ಷ್ಮವಾಗಿ ಬಿಡಿಸುವುದನ್ನು ಬಹುವಾಗಿ ಶ್ಲಾಘಿಸಿದ್ದಾರೆ. ವ್ಯಾನ್ಗೋನ ಈ ಕಲಾಕೃತಿಯನ್ನು, ಅದೂ ಉಗುರನ್ನೇ ಕ್ಯಾನ್ವಾಸಾಗಿಸಿಕೊಂಡು ಯಥಾವತ್ ಚಿತ್ರಿಸಲು ಅವರು ಅದೆಷ್ಟು ಅಭ್ಯಾಸ ಮಾಡಿರಬೇಡ ಎಂದು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.
ವ್ಯಾನ್ಗೋ ಬದುಕಿನ ಕೆಲ ಪುಟಗಳನ್ನು ಇಲ್ಲಿ ಓದಿ: Vincent van Gogh : ಅಭಿಜ್ಞಾನ ; ಸೂಳೆಕೆರೆಗಳಿಗೆ ಹೋಗಿದ್ದು ಸುಖದ ಕ್ಷಣಗಳನ್ನು ಅರಸುತ್ತ ಅಲ್ಲ
ಈ ನೇಲ್ ಆರ್ಟ್ ನೋಡುತ್ತಿರುವ ನಿಮಗೆ ವ್ಯಾನ್ಗೋನ ಬಗ್ಗೆ ಮತ್ತಷ್ಟು ಓದಬೇಕು ಎನ್ನಿಸುತ್ತಿರಬೇಕಲ್ಲ? ಕಲೆಯ ಹುಚ್ಚಿಗೆ ಬಿದ್ದವರ ಬದುಕು ಎಂದೂ ಸಾಮಾನ್ಯರ ಬದುಕಿನಂತಿರುವುದಿಲ್ಲ. ಕಲೆಗೆ ಮುಕ್ತವಾಗಿ ತೆರೆದುಕೊಳ್ಳಬೇಕೆಂದರೆ ನಿಮ್ಮನ್ನು ನೀವು ಸಾಕಷ್ಟು ವಿಷಯವಾಗಿ ಕಟ್ಟಿಹಾಕಿಕೊಳ್ಳಬೇಕು ಕೆಲ ವಿಷಯವಾಗಿ ತೆರೆದುಕೊಳ್ಳಬೇಕು. ಈ ಕಟ್ಟಿಹಾಕಿಕೊಳ್ಳುವ ಮತ್ತು ತೆರೆದುಕೊಳ್ಳುವ ಮಧ್ಯೆಯೇ ಸೃಜನಶೀಲತೆ ಕಣ್ಣುಬಿಡುವುದು. ಇದೆಲ್ಲವೂ ಸಾಧ್ಯವಾಗುವ ಹಂತದಲ್ಲಿ ಬರುವ ಸವಾಲುಗಳನ್ನು, ಅಸಹಾಯಕತೆಯನ್ನು, ಅನಿಶ್ಚಿತತೆಯನ್ನು, ನಿರಾಸೆಗಳನ್ನು, ಹತಾಶೆಯನ್ನು ತಾಳ್ಮೆಯಿಂದ ಕಲಾವಿದರು ಅನುಭವಿಸಬೇಕು. ಗೆಲುವು, ಖುಷಿ, ಸಾಧನೆ ಎನ್ನುವುದು ಕಲಾಕೃತಿಯ ಅನಾವರಣದ ಮೂಲಕ ಕ್ಷಣಿಕವಾಗಿ ಮಿಂಚಿ ಮಾಯವಾಗುತ್ತದೆ. ನಂತರ ಮತ್ತೆ ಕತ್ತಲೆಯೇ. ಹೀಗೆ ಕತ್ತಲೆಯನ್ನು ಕಲೆಯ ಮೂಲಕ ಬೆಳಕು ಮಾಡಿಕೊಳ್ಳುವ ನಿರಂತರ ಪ್ರಕ್ರಿಯೆಯೇ ಕಲೆ ಮತ್ತು ಸಾಧನೆ.
ವ್ಯಾನ್ಗೋನ ಪೇಂಟಿಂಗ್ಗಳು ಆನ್ಲೈನ್ನಲ್ಲಿ ನೋಡಲು ಸಿಗುತ್ತವೆ. ಹುಡುಕಿ ನೋಡಿ. ಬಹಳ ಆಸಕ್ತಿದಾಯಕವಾಗಿವೆ.
ಮತ್ತಷ್ಟು ವೈರಲ್ ವಿಡಿಯೋ ನೋಡಲು ಕ್ಲಿಕ್ ಮಾಡಿ
Published On - 12:13 pm, Sat, 15 October 22