ವಿಸ್ತಾರಾ ಏರ್ಲೈನ್ಸ್ನಲ್ಲಿ ಪ್ರಯಾಣಿಕರಿಗೆ ಕೊಟ್ಟ ಊಟದಲ್ಲಿ ಜಿರಳೆ ಪತ್ತೆ
Passenger finds cockroach in meals : ವಿಸ್ತಾರಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರಿಗೆ, ವಿಮಾನ ಸಂಸ್ಥೆಯು ವಿತರಿಸಿದ ಊಟದಲ್ಲಿ ಜಿರಳೆ ಸಿಕ್ಕಿದೆ. ಈ ವಿಷಯವನ್ನು ಟ್ವೀಟ್ ಮಾಡಿದಾಗ ಸಂಸ್ಥೆಯು ಪ್ರತಿಕ್ರಿಯಿಸಿದೆ.
Viral : ಮೊನ್ನೆಮೊನ್ನೆಯಷ್ಟೇ ಡೋಮಿನೋ ಪಿಝಾನಲ್ಲಿ ಗಾಜಿನ ಚೂರು ಪತ್ತೆಯಾಗಿದ್ದನ್ನು ಓದಿದ್ದೀರಿ. ಹಾಗೆಯೇ ರೈಲಿನಲ್ಲಿ ಐಆರ್ಸಿಟಿಸಿ ಕೊಟ್ಟ ಸಮೋಸಾದಲ್ಲಿ ಹಳದಿ ಪ್ಲಾಸ್ಟಿಕ್ ಚೂರು ಸಿಕ್ಕಿದ್ದನ್ನು ಓದಿದ್ದೀರಿ. ಈಗ ವಿಸ್ತಾರಾ ವಿಮಾನದ ಪ್ರಯಾಣಿಕರೊಬ್ಬರಿಗೆ ಊಟದಲ್ಲಿ ಜಿರಳೆ ಸಿಕ್ಕಿದೆ. ಹೇಗನ್ನಿಸಿರಬೇಡ ಪ್ರಯಾಣಿಕರಿಗೆ? ಅದೂ ಅರ್ಧ ಊಟ ಒಳಗಿಳಿದ ನಂತರ! ಕುಪಿತಗೊಂಡ ಪ್ರಯಾಣಿಕರು ಫೋಟೋ ತೆಗೆದು ಟ್ವಿಟರ್ಗೆ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Small cockroach in air Vistara meal pic.twitter.com/ebrIyszhvV
— NIKUL SOLANKI (@manikul008) October 14, 2022
ನಿಕುಲ್ ಸೋಲಂಕಿ ಎಂಬ ಪ್ರಯಾಣಿಕರು ವಿಸ್ತಾರಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಪ್ಯಾಕ್ ಮಾಡಿದ ಊಟವನ್ನು ವಿಮಾನ ಸಿಬ್ಬಂದಿಯು ವಿತರಿಸಿದೆ. ಊಟ ಶುರು ಮಾಡಿ ಮೊಸರನ್ನ ತಿನ್ನುವ ಹೊತ್ತಿಗೆ ಜಿರಳೆ ಕಂಡುಬಿಟ್ಟಿದೆ. ಹೋಟೆಲ್, ಪಾರ್ಸೆಲ್, ರೈಲಿನಲ್ಲಿ ಕೊಡುವ ತಿಂಡಿತಿನಿಸುಗಳಲ್ಲಿ ಅಚಾತುರ್ಯ ಘಟಿಸುವುದು ಸಾಮಾನ್ಯ. ಆದರೆ ವಿಮಾನದಲ್ಲಿ ಪ್ರಯಾಣಿಸುವವರು ಅಷ್ಟೊಂದು ಹಣ ತೆತ್ತು ಇಂಥ ಸಮಸ್ಯೆಯನ್ನು ಎದುರಿಸುತ್ತಾರೆಂದರೆ? ನಿಕುಲ್ ಅವರಿಗೆ ಅಸಹ್ಯವೆನ್ನಿಸಿ ಟ್ವಿಟರ್‌ನಲ್ಲಿ ಸಾಕ್ಷಿ ಸಮೇತ ಪೋಸ್ಟ್ ಮಾಡಿದ್ದಾರೆ.
ಈ ಟ್ವೀಟ್ನಲ್ಲಿ ವಿಮಾನ ಸಂಸ್ಥೆಯ ಹೆಸರನ್ನು ಟ್ಯಾಗ್ ಮಾಡಿದಾಗ, ಸಂಸ್ಥೆಯು ತನ್ನ ತಪ್ಪನ್ನು ಒಪ್ಪಿಕೊಂಡು ತಕ್ಷಣವೇ ಪ್ರತಿಕ್ರಿಯೆ ನೀಡಿದೆ. ‘ಹಲೋ ನಿಕುಲ್, ನಮ್ಮ ವಿಮಾನದಲ್ಲಿ ಉತ್ತಮ ಗುಣಮಟ್ಟದ ಆಹಾರವನ್ನು ಲಕ್ಷ್ಯದಲ್ಲಿಟ್ಟುಕೊಂಡು ಪೂರೈಸಲಾಗುತ್ತದೆ. ದಯವಿಟ್ಟು ನಿಮ್ಮ ಟಿಕೆಟ್ನ ವಿವರವನ್ನು ಮೆಸೇಜ್ ಮಾಡಿ. ಶೀಘ್ರದಲ್ಲಿಯೇ ಈ ವಿಷಯವಾಗಿ ಪರಿಶೀಲಿಸಿ, ಪರಿಹಾರದ ವ್ಯವಸ್ಥೆ ಮಾಡಲಾಗುವುದು’ ಎಂದಿದೆ.
ಇಂಥ ಪ್ರಕರಣಗಳಿಗೆ ಕೊನೆಯೇ ಇಲ್ಲವೆ? ಪ್ರಯಾಣಿಕರು ಹೀಗೆ ಸಾಮಾಜಿಕ ಜಾಲತಾಣದಲ್ಲಿ ದನಿ ಎತ್ತುವುದು, ಸಂಬಂಧಿಸಿದ ಸಂಸ್ಥೆಗಳು ಹೀಗೊಂದು ಪ್ರತಿಕ್ರಿಯೆ ನೀಡುತ್ತಲೇ ಇರುವುದು.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 1:30 pm, Sat, 15 October 22