Trending : ಕಾನ್ಪುರದ ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಕ್ಲರ್ಕ್ ತನ್ನ ಮೇಲಧಿಕಾರಿಗೆ ಬರೆದ ಪತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕ್ಲರ್ಕ್ನ ಪ್ರಾಮಾಣಿಕತನಕ್ಕೆ ಅಧಿಕಾರಿಯು ಮನಸೋತು ರಜೆ ನೀಡಿದ್ದನ್ನು ಇಂಡಿಯಾ ಟುಡೇ ವರದಿ ಮಾಡಿದೆ. ಪ್ರಾಮಾಣಿಕತೆ ಇದ್ದಲ್ಲಿ ದಿಟ್ಟತೆ ಇರುತ್ತದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಕ್ಲರ್ಕ್ ಶಂಸಾದ್ ಅಹಮ್ಮದ್ ಪ್ರೇಮ್ ನಗರ ಬ್ಲಾಕ್ ಡೆವಲಪ್ಮೆಂಟ್ ಆಫೀಸರ್ ಅವರಿಗೆ ತನಗೆ ತುರ್ತಾಗಿ ಎರಡು ದಿನಗಳ ರಜೆ ಬೇಕೆಂದು ಪತ್ರ ಬರೆದಿದ್ದಾರೆ. ಅವರು ರಜೆಯ ಕಾರಣವನ್ನು ವಿವರಿಸಿದ ರೀತಿಯೇ ಅತ್ಯಂತ ಹೃದಯಸ್ಪರ್ಶಿಯಾಗಿದೆ. ಅಧಿಕಾರಿ ರಜೆ ಕೊಡದೇ ಬೇರೆ ದಾರಿಯೇ ಇರಲಿಲ್ಲ. ಏನಿತ್ತು ಅಂಥ ಕಾರಣ ಅದರಲ್ಲಿ?
‘ತನ್ನ ಪತ್ನಿ ಜಗಳವಾಡಿಕೊಂಡು ಮಕ್ಕಳೊಂದಿಗೆ ತವರಿಗೆ ತೆರಳಿದ್ದಾಳೆ. ಇದು ಪ್ರೀತಿ ಪ್ರೇಮಕ್ಕೆ ಸಂಬಂಧಿಸಿದ ವಿಷಯ. ನನಗೆ ಬಹಳ ನೋವಾಗಿದೆ. ಪರಸ್ಪರ ಮಾತನಾಡಿಕೊಂಡು ಅವಳನ್ನು ಮನವೊಲಿಸಿ ವಾಪಾಸು ಕರೆತರಬೇಕಿದೆ. ಹಾಗಾಗಿ ನನಗೆ ಎರಡು ದಿನಗಳ ರಜೆಯನ್ನು ಮಂಜೂರು ಮಾಡಿ’ ಎಂದು ರಜಾಪತ್ರದಲ್ಲಿ ಶಂಸಾದ್ ತಮ್ಮ ಮೇಲಧಿಕಾರಿಯನ್ನು ವಿನಂತಿಸಿಕೊಂಡಿದ್ದಾರೆ.
ಶಂಸಾದರ ಮನವಿ ಸೂಕ್ಷ್ಮತೆಯುಳ್ಳ ಅಧಿಕಾರಿಗೆ ತಲುಪಿದ್ದು ಅದೃಷ್ಟವೆಂದೇ ಹೇಳಬೇಕು. ಅವರು ತಕ್ಷಣವೇ ರಜೆ ನೀಡಿದ್ದಾರೆ. ಇನ್ನು ಶಂಸಾದ ಪ್ಯಾರ್ ಮೊಹಬ್ಬತ್ ಕೀ ಬಾತ್ ಅನ್ನು ಸಮಾಧಾನದಿಂದ ಪರಿಹರಿಸಿಕೊಳ್ಳಲು ಹೆಂಡತಿಯ ತವರಿಗೆ ತೆರಳಬಹುದೇನೋ.
A Kanpur government official sent a letter to a higher official seeking two-day leave to make amends with his disgruntled wife. ‘I am hurt,’ he wrote in his leave application. pic.twitter.com/lN2D3WR0t0
— Deadly Law (@DeadlyLaw) August 4, 2022
ಈ ಪತ್ರ ವೈರಲ್ ಆಗುತ್ತಿದ್ದಂತೆ ರಜೆಯ ಅರ್ಜಿ ಕುರಿತು ಅನೇಕರು ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಸಾಹಿಲ್ ಎಂಬುವವರು, ‘ನನ್ನ ಜ್ಯೂನಿಯರ್ಸ್ ಬಹಳ ಸ್ವೀಟ್. ಸಂದರ್ಶನಕ್ಕೆ ಹಾಜರಾಗಬೇಕೆಂದು ರಜೆ ಕೇಳುತ್ತಿದ್ದಾರೆ’ ಎಂದು ಕ್ಯಾಪ್ಷನ್ ಹಾಕಿ ಟ್ವಿಟರ್ ಪೋಸ್ಟ್ ಮಾಡಿದ್ದಾರೆ. ಅರ್ಜಿ ಹೀಗಿದೆ, ‘ಆತ್ಮೀಯ ಸರ್, ಶುಭೋದಯ. ಇನ್ನೊಂದು ಕಂಪನಿಯಲ್ಲಿ ಸಂದರ್ಶನಕ್ಕೆ ಹಾಜರಾಗಲು ನನಗೆ ಇಂದು ರಜೆಯ ಅಗತ್ಯವಿದೆ. ಇ-ಮೇಲ್ ಮೂಲಕ ನಿಮಗೆ ಪತ್ರ ಕಳಿಸುತ್ತಿದ್ದೇನೆ. ದಯವಿಟ್ಟು ರಜೆಯನ್ನು ಮಂಜೂರು ಮಾಡಿ ಎಂದು ವಿನಂತಿಸಿಕೊಳ್ಳುತ್ತೇನೆ.’
ಇನ್ನಷ್ಟು ಇಂಥ ಟ್ರೆಂಡಿಂಗ್ ನ್ಯೂಸ್ ಓದು ಇಲ್ಲಿ ಕ್ಲಿಕ್ ಮಾಡಿ