Trending Post : ಈ ‘ಮೆಕ್​ಡೊನಾಲ್ಡ್​ನ ‘ಉಪ್ಪಿನಕಾಯಿ‘ಗೆ ರೂ 4.9 ಲಕ್ಷ!

TV9 Digital Desk

| Edited By: ಶ್ರೀದೇವಿ ಕಳಸದ

Updated on:Aug 05, 2022 | 6:02 PM

McDonald's Pickle Art : ‘ಒಂದು ಕಲಾಕೃತಿಯ ಕುರಿತು ತಮಾಷೆ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರೆ ಅದು ಮಾನ್ಯವೇ. ಕಲಾಕೃತಿಯು ಜನರಲ್ಲಿ ಏನೆಲ್ಲ ಅರ್ಥಗಳನ್ನು ಹೊಮ್ಮಿಸುತ್ತಿದೆ ಎನ್ನುವುದಷ್ಟೇ ಕಲಾವಿದನಿಗೆ ಮುಖ್ಯ.’ ಎಂದಿದ್ದಾರೆ.

Trending Post : ಈ ‘ಮೆಕ್​ಡೊನಾಲ್ಡ್​ನ ‘ಉಪ್ಪಿನಕಾಯಿ‘ಗೆ ರೂ 4.9 ಲಕ್ಷ!
ಆಸ್ಟ್ರೇಲಿಯಾದ ಆರ್ಟ್​ ಗ್ಯಾಲರಿಯಲ್ಲಿರುವ ‘ಉಪ್ಪಿನಕಾಯಿ’ ಕಲಾಕೃತಿ.

Trending : ಈ ಉಪ್ಪಿನಕಾಯಿ ಮೆಕ್‌ಡೊನಾಲ್ಡ್‌ನ ಚೀಸ್‌ಬರ್ಗರ್‌ನಿಂದ ಸಿಡಿದು ನ್ಯೂಜಿಲೆಂಡ್‌ನ ಆರ್ಟ್ ಗ್ಯಾಲರಿಯ ಸೀಲಿಂಗ್​ಗೆ ಅಂಟಿಕೊಂಡಿದೆ! ಹೌದು, ಈ ಉಪ್ಪಿನಕಾಯಿ ಕಲಾಕೃತಿ ಈಗ ವೈರಲ್ ಆಗಿದೆ. ‘ಉಪ್ಪಿನಕಾಯಿ’ ಎಂಬ ಶೀರ್ಷಿಕೆಯ ಈ ಕಲಾಕೃತಿಯು ಆಸ್ಟ್ರೇಲಿಯಾದ ಕಲಾವಿದ ಮ್ಯಾಥ್ಯೂ ಗ್ರಿಫಿನ್‌ ಅವರಿಂದ ರಚಿತವಾಗಿದೆ. ಈ ಕಲಾಕೃತಿಗೆ ಅವರು ರೂ. 4.93,000 ಬೆಲೆ ನಿಗದಿ ಮಾಡಿದ್ದಾರೆ. ಆಸ್ಟ್ರೇಲಿಯಾದ ಮೈಕೆಲ್ ಲೆಟ್ ಗ್ಯಾಲರಿಯಲ್ಲಿ ಪ್ರದರ್ಶನಕ್ಕಿರುವ ಈ ‘ಉಪ್ಪಿನಕಾಯಿ’ಯನ್ನು ಮೈಕೆಲ್ ಲೆಟ್ ಗ್ಯಾಲರಿಯಲ್ಲಿ ಪ್ರದರ್ಶನಕ್ಕಿಡಲಾಗಿದೆ. ಅಲ್ಲದೆ ಆಕ್ಲೆಂಡ್‌ನಲ್ಲಿ ಏರ್ಪಡಿಸಿದ್ದ ಕಲಾಪ್ರದರ್ಶನದಲ್ಲಿದ್ದ ನಾಲ್ಕು ಹೊಸ ಕೃತಿಗಳ ಪೈಕಿ ಇದೂ ಒಂದು. ‘ಮ್ಯಾಥ್ಯೂ ಗ್ರಿಫಿನ್ – ‘ಪಿಕಲ್’ 2022’ ಪೋಸ್ಟ್​ ಅನ್ನು ಇನ್​ಸ್ಟ್ರಾಗ್ರಾಂನಲ್ಲಿ ಹಂಚಿಕೊಂಡಾಗಿನಿಂದ ನೆಟ್ಟಿಗರು ಬೆರಗಿನಿಂದ ನೋಡುತ್ತಿದ್ದಾರೆ, ಮರುಹಂಚಿಕೊಳ್ಳುತ್ತಿದ್ದಾರೆ.

ಈ ಕಲಾಕೃತಿಯನ್ನು, ಕಲಾವಿದನನ್ನು ಕೆಲವರು ‘ಅದ್ಭುತ, ಪ್ರತಿಭಾವಂತ’ ಎಂದು ಹೇಳಿದರೆ ಇನ್ನೂ ಕೆಲವರು ‘ಮೂರ್ಖತನ’ ಎಂದಿದ್ದಾರೆ. ಒಬ್ಬರು, ‘ಇದು ನಾನು ನೋಡಿದ ಅತ್ಯುತ್ತಮ ಕಲಾಕೃತಿ’ ಎಂದಿದ್ದಾರೆ. ಇನ್ನೊಬ್ಬರು, ‘ಮೂರ್ಖ ಮತ್ತು ನಿಷ್ಪ್ರಯೋಜಕ. ಕಲೆಯ ಕೊಲೆಯಾಗಿದೆ.’ ಎಂದಿದ್ದಾರೆ. ಮಗದೊಬ್ಬರು, ‘ನಾನು ಹದಿಹರೆಯದವನಾಗಿದ್ದಾಗ ಇದನ್ನು ತಯಾರಿಸಿದ್ದೆ. ಅದಕ್ಕಾಗಿ ಪೊಲೀಸರು ಮೆಕ್​ಡೊನಾಲ್ಡ್​ನಿಂದ ನನ್ನನ್ನು ಹೊರಹಾಕಿದ್ದರು. ಅದೀಗ ಇಲ್ಲಿ ಕಲಾಕೃತಿಯಾಗಿದೆ.’ ಎಂದು ತಮಾಷೆ ಮಾಡಿದ್ದಾರೆ.

ಇದನ್ನೂ ಓದಿ

ಗ್ರಿಫಿನ್ ಅವರ ಈ ಕಲಾಕೃತಿಯನ್ನುದ್ದೇಶಿಸಿ ‘ದಿ ಗಾರ್ಡಿಯನ್​’ನೊಂದಿಗೆ ಮಾತನಾಡಿದ ಸಿಡ್ನಿ ಕಲಾಪ್ರದರ್ಶನದ ನಿರ್ದೇಶಕ ರಿಯಾನ್ ಮೂರ್,  ‘ಒಂದು ಕಲಾಕೃತಿಯ ಕುರಿತು ತಮಾಷೆ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರೆ ಅದು ಮಾನ್ಯವೇ. ಕಲಾಕೃತಿಯು ಜನರಲ್ಲಿ ಏನೆಲ್ಲ ಅರ್ಥಗಳನ್ನು ಹೊಮ್ಮಿಸುತ್ತಿದೆ ಎನ್ನುವುದಷ್ಟೇ ಕಲಾವಿದನಿಗೆ ಮುಖ್ಯ.’ ಎಂದಿದ್ದಾರೆ.

‘ಸಾಮಾನ್ಯವಾಗಿ ಕಲಾವಿದ ತನ್ನ ಪಾಡಿಗೆ ತಾನು ಕಲಾರಚನೆಯಲ್ಲಿ ಮುಳುಗಿರುತ್ತಾನೆ. ಇದು ಕಲೆ ಹೌದೋ ಅಲ್ಲವೋ ಎಂದೂ ಕೂಡ ಅವ ನಿರ್ಧರಿಸಲಾರ. ಒಟ್ಟಾರೆ ಒಂದು ಕಲಾಕೃತಿಯನ್ನು ನೋಡಿದಾಗ ಅದು ಹೊಮ್ಮಿರುವ ಅರ್ಥ, ಮೌಲ್ಯದ ಬಗ್ಗೆ ಮಾತನಾಡಬೇಕಿರುವುದು ಸಮಾಜ. ಅಲ್ಲದೆ, ಇದು ಮೇಲ್ಛಾವಣಿಗೆ ಅಂಟಿಸಲಾದ ಉಪ್ಪಿನಕಾಯಿಯಂತೆ ತೋರುತ್ತಿದೆ. ಅಲ್ಲಿ ಯಾವುದೇ ಕೃತಕತೆ ಇಲ್ಲ, ಅದೊಂದು ಶಿಲ್ಪದಂತೆ ಗೋಚರಿಸುತ್ತದೆ’ ಎಂದು ಮೂರ್ ಹೇಳಿದ್ದಾರೆ.

ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada