ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮತ್ತು ಟೇಕ್ ಆಫ್ ಆಗುವ ಪ್ರತಿಯೊಂದು ವಿಮಾನದಲ್ಲಿ ಕನ್ನಡ ಭಾಷೆಯಲ್ಲಿಯೂ ಅನೌನ್ಸ್‌ಮೆಂಟ್ ಮಾಡಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್‌ಗೆ ಮನವಿಯನ್ನು ಮಾಡಿತ್ತು. ಆದರೂ ಕೆಲವು ಭಾರತೀಯ ವಿಮಾನಯಾನ ಸಂಸ್ಥೆಗಳು ಸ್ಥಳೀಯ ಭಾಷೆಗಳಿಗೆ ಗೌರವ ನೀಡದೆ ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಮಾತ್ರ ಅನೌನ್ಸ್‌ಮೆಂಟ್ ನೀಡುತ್ತಿವೆ. ಹೀಗಿರುವಾಗ ಇಲ್ಲೊಂದು ಅಂತರಾಷ್ಟ್ರೀಯ ವಿಮಾನಯಾನ ಸಂಸ್ಥೆ ಕನ್ನಡ ಭಾಷೆಯಲ್ಲಿಯೂ ಅನೌನ್ಸ್‌ಮೆಂಟ್ ನೀಡಲು ಆರಂಭಿಸಿದೆ. ಈ ಕುರಿತ ಪೋಸ್ಟ್ ಒಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಬೆಂಗಳೂರಿನಿಂದ ಜರ್ಮನಿಯ ಮ್ಯೂನಿಚ್‌ಗೆ ಪ್ರಯಾಣಿಸುತ್ತಿದ್ದ ಲುಫ್ತಾನ್ಸಾ ವಿಮಾನದಲ್ಲಿ ಕನ್ನಡದಲ್ಲಿಯೂ ಪ್ರಕಟಣೆಯನ್ನು ನೀಡಿದ್ದು, ಸ್ಥಳೀಯ ಭಾಷೆಯನ್ನು ಗೌರವಿಸುವ ಅಂತರಾಷ್ಟ್ರೀಯ ವಿಮಾನಯಾನ ಸಂಸ್ಥೆಯ ಈ ಉಪಕ್ರಮದ ಬಗ್ಗೆ ಪ್ರಯಾಣಿಕರೊಬ್ಬರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಪ್ರಸನ್ನ (prasanna1209) ಎಂಬವರು ಈ ಕುರಿತ ಪೋಸ್ಟ್ ಒಂದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಬೆಂಗಳೂರು-ಮ್ಯೂನಿಚ್ ಫ್ಲೈಟ್‌ನಲ್ಲಿ ಟೇಕ್‌ಆಫ್‌ಗೆ ಮುಂಚಿತವಾಗಿ ಕನ್ನಡದಲ್ಲಿ ಪ್ರಕಟಣೆಯನ್ನು ನೀಡಿದ್ದಕ್ಕಾಗಿ ಧನ್ಯವಾದಗಳು” ಎಂದು ಲುಫ್ತಾನ್ಸ ವಿಮಾನಯಾನ ಸಂಸ್ಥೆಯನ್ನು ಟ್ಯಾಗ್ ಮಾಡಿ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
Credit to @lufthansa for having the pre-take off passenger announcement made in Kannada as well, in the BLR-MUC flight. pic.twitter.com/hfHPDt2sfx
— Prasanna (@prasanna1209) November 10, 2024
ವೈರಲ್ ಆಗುತ್ತಿರುವ ಈ ಫೋಟೋದಲ್ಲಿ ಸ್ಕ್ರೀನ್ ಮೇಲೆ ಇಂಗ್ಲೀಷ್ ಜೊತೆಗೆ ಕನ್ನಡದಲ್ಲಿಯೂ ಪ್ರಕಟಣೆಯನ್ನು ನೀಡಿರುವಂತಹ ದೃಶ್ಯವನ್ನು ಕಾಣಬಹುದು. ಹೀಗೆ ಅಂತರಾಷ್ಟ್ರೀಯ ವಿಮಾನಯಾನ ಸಂಸ್ಥೆಯಾದ ಲುಫ್ತಾನ್ಸ ವಿಮಾನ ಬೆಂಗಳೂರಿನಿಂದ ಮ್ಯೂನಿಚ್‌ಗೆ ತೆರಳುತ್ತಿದ್ದ ವಿಮಾನದಲ್ಲಿ ಇಂಗ್ಲೀಷ್ ಜೊತೆಗೆ ಕನ್ನಡ ಭಾಷೆಯಲ್ಲಿಯೂ ಪ್ರಕಟಣೆಯನ್ನು ನೀಡುವ ಮೂಲಕ ಸ್ಥಳೀಯ ಭಾಷೆಗೆ ಗೌರವವನ್ನು ನೀಡಿದೆ.
ಇದನ್ನೂ ಓದಿ: ವಾಹನ ಸವಾರರರೇ ಎಚ್ಚರ… ನಿಧಿ ಹುಡುಕುವ ಸಲುವಾಗಿ ರಾಜ್ಯ ಸರ್ಕಾರ ಅಲ್ಲಲ್ಲಿ ರಸ್ತೆ ಮಧ್ಯೆ ಗುಂಡಿ ತೋಡಿದೆ
ನವೆಂಬರ್ 11 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 42 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಎಮಿರೇಟ್ಸ್ ವಿಮಾನ ಸಹ ಕನ್ನಡದಲ್ಲಿ ಪ್ರಕಟಣೆ ನೀಡುತ್ತದೆ ಆದ್ರೆ ನಮ್ಮ ಭಾರತೀಯ ವಿಮಾನ ಎಂದಿಗೂ ಸ್ಥಳೀಯ ಭಾಷೆಗಳಲ್ಲಿ ಪ್ರಕಟಣೆಯನ್ನು ನೀಡಿಲ್ಲʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಪ್ರಮುಖ ಪ್ರಕಟಣೆಗಳಿಗಾಗಿ ಕನ್ನಡ ಭಾಷೆಯನ್ನು ಬಳಸಿದ್ದಕ್ಕಾಗಿ ಲುಫ್ತಾನ್ಸಗೆ ಧನ್ಯವಾದಗಳುʼ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ