ತಂದೆಗೆ ವ್ಯಾಕ್ಸಿನ್ ಕೊಡಿಸಲು 6 ಗಂಟೆಗಳ ಕಾಲ ಬೆನ್ನಿನ ಮೇಲೆ ಹೊತ್ತೊಯ್ದ ಯುವಕ: ಆಧುನಿಕ ಶ್ರವಣಕುಮಾರ ಎಂದ ನೆಟ್ಟಿಗರು
ವ್ಯಾಕ್ಸಿನ್ ಕೊಡಿಸಲು ತಂದೆಯನ್ನು 6 ಗಂಟೆಗಳ ಕಾಲ ಬೆನ್ನಿನ ಮೇಲೆ ಮಗನೊಬ್ಬ ಹೊತ್ತೊಯ್ದ ಘಟನೆ ಬ್ರೆಜಿಲ್ನ ಅಮೆಜಾನ್ ಪ್ರದೇಶದಲ್ಲಿ ನಡೆದಿದೆ. ಮಗ ತಂದೆಯನ್ನು ಬೆನ್ನಿನ ಮೇಲೆ ಹೊತ್ತು ಸಾಗುತ್ತಿರುವ ಫೋಟೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೊರೋನಾ ಜಗತ್ತಿನ ಮೂಲೆ ಮೂಲೆಗಳಲ್ಲಿ ಜನರನ್ನು ಹೊಕ್ಕಿ ಕಾಡುತ್ತಿದೆ. ಜನ ವ್ಯಾಕ್ಸಿನ್ ಪಡೆಯಲು ಹರಸಾಹಸವನ್ನೇ ಮಾಡುತ್ತಿದ್ದಾರೆ. ಬಡ ರಾಷ್ಟ್ರಗಳಲ್ಲಿ ವ್ಯಾಕ್ಸಿನ್ ದೊರಕುವುದೇ ಒಂದು ರೀತಿಯ ಸಮಸ್ಯೆಯಾದರೆ ಇನ್ನು ಹಲವೆಡೆ ವ್ಯಾಕ್ಸಿನೇಷನ್ ಪಡೆಯುವುದೇ ಒಂದು ಸಾಹಸ ಎನ್ನುವ ಸ್ಥಿತಿ ಇದೆ. ಅಂತಹ ಒಂದು ಸ್ಥಿತಿಯನ್ನು ಎತ್ತಿ ತೋರಿಸುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಧುನಿಕ ಶ್ರವಣ ಕುಮಾರನಂತೆ ವ್ಯಾಕ್ಸಿನ್ ಕೊಡಿಸಲು ತಂದೆಯನ್ನು 6 ಗಂಟೆಗಳ ಕಾಲ ಬೆನ್ನಿನ ಮೇಲೆ ಮಗನೊಬ್ಬ ಹೊತ್ತೊಯ್ದ ಘಟನೆ ಬ್ರೆಜಿಲ್ನ ಅಮೆಜಾನ್ ಪ್ರದೇಶದಲ್ಲಿ ನಡೆದಿದೆ. ಮಗ ತಂದೆಯನ್ನು ಬೆನ್ನಿನ ಮೇಲೆ ಹೊತ್ತು ಸಾಗುತ್ತಿರುವ ಫೋಟೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
View this post on Instagram
ಟಾವಿ ಎನ್ನುವ 24 ವರ್ಷದ ಯುವಕ 67 ವರ್ಷದ ತಂದೆ ವಹು ಅವರನ್ನು ಬರೋಬ್ಬರಿ ಆರು ಗಂಟೆಗಳ ಕಾಲ ಹೊತ್ತು ಸಾಗಿ ವ್ಯಾಕ್ಸಿನೇಷನ್ ಕೊಡಿಸಿದ್ದಾರೆ. ಅದೇ ರೀತಿ ಮನೆಗೆ ವಾಪಸ್ಸಾಗುವಾಗಲೂ ಆರು ಗಂಟೆಗಳ ಕಾಲ ಹೊತ್ತು ಸಾಗಿದ್ದಾರೆ. ಈ ಫೋಟೋವನ್ನು ಡಾ ಎರಿಕ್ ಜೆನ್ನಿಂಗ್ಸ್ ಸಿಮೊಸ್, ಎನ್ನುವವರು ಇನ್ಸ್ಟಾಗ್ರಾಮಮ್ನಲ್ಲಿ ಹಂಚಿಕೊಂಡಿದ್ದಾರೆ. ಒಂದು ಫೋಟೋ ನೂರು ಕತೆಗಳನ್ನು ಹೇಳುತ್ತವೆ. ಒಂದೆಡೆ ತಂದೆ ಮತ್ತು ಮಗನ ಬಾಂಧವ್ಯವನ್ನು ವಿವರಿಸಿದರೆ ಇನ್ನೊಂದೆಡೆ ಕುಗ್ರಾಮಗಳ ಜನರು ಸಾರಿಗೆ ವ್ಯವಸ್ಥೆ ಇಲ್ಲದೆ ಪರದಾಡುವುದನ್ನು ತೋರಿಸುತ್ತದೆ. ಅದಕ್ಕೂ ಮುಖ್ಯವಾಗಿ ವ್ಯಾಕ್ಸಿನೇಷನ್ ಪಡೆಯಲು ಜನರು ಪಡುವ ಕಷ್ಟಗಳನ್ನು ತೋರಿಸುವಂತಿದೆ.
ಬ್ರೆಜಿಲ್ನಲ್ಲಿ ಈ ವರೆಗೆ 853 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ ಎಂದು ಅಧಿಕೃತ ಮಾಹಿತಿಯಲ್ಲಿ ತಿಳಿಸಲಾಗಿದೆ. ಇನ್ನು ಅಮೆಜಾನ್ ಪ್ರದೇಶಗಳಲ್ಲಿ ವ್ಯಾಕ್ಸಿನೇಷನ್ ಅನ್ನು ಆರಂಭಿಸಿದಾಗ ಸ್ಥಳೀಯವಾಗಿ ಕಾಡುಗಳಲ್ಲಿ ವಾಸಿಸುವ ಝೋ ಜನಾಂಗಗಳಿಗೆ ಹೆಚ್ಚಿನ ಆದ್ಯತೆ ನೀಡಿ ಮೊದಲ ಡೋಸ್ ವ್ಯಾಕ್ಸಿನ್ ಅನ್ನು ನೀಡಲಾಗಿತ್ತು. ಆ ವೇಳೆ ಆರೋಗ್ಯ ಕಾರ್ಯಕರ್ತರು ಹಳ್ಳಗಳಿಗೇ ತೆರಳಿ ಕ್ಯಾಂಪ್ ಮಾಡುವ ಮೂಲಕ ಲಸಿಕೆ ನೀಡಿದ್ದರು. ಆದರೆ ಎರಡನೇ ಡೋಸ್ ಪಡೆಯಲು ಜನರೇ ಆಸ್ಪತ್ರೆಯೆಡೆಗೆ ಮುಖ ಮಾಡುವಂತಹ ಪರಿಸ್ಥಿತಿ ಎದುರಾಗಿದೆ. ಇದು ಸ್ಥಳೀಯ ಜನರಿಗೆ ಕಷ್ಟವಾಗಿದೆ.
ಟಿವಿ ತಂದೆ ಮೂತ್ರಕೋಶದ ಸಮಸ್ಯೆಯಿಂದ ಬಳಲುತ್ತಿದ್ದು, ನಡೆದಾಡಲು ಸಾಧ್ಯವಾಗದೇ ಇರುವ ಕಾರಣ ಮಗ ಬೆನ್ನಿನ ಮೇಲೆ ಹೊತ್ತೊಯ್ದಿದ್ದಾರೆ. ಈ ಫೋಟೋವನ್ನು ಡಾ ಎರಿಕ್ 2021ರ ಜನವರಿ 1 ರಂದು ಹಂಚಿಕೊಂಡಿದ್ದು, 2021ರ ಅತ್ಯುತ್ತಮ ಕ್ಷಣ ಎಂದು ಕ್ಯಾಪ್ಷನ್ ನೀಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಅಧುನಿಕ ಶ್ರವಣಕುಮಾರನಿಗೆ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ:
10ನೇ ವರ್ಷಕ್ಕೆ ಎರಡು ಕಂಪನಿಗಳ ಒಡತಿಯಾದ ಈ ಬಾಲಕಿಗೆ 15ನೇ ವಯಸ್ಸಿಗೇ ನಿವೃತ್ತಿ
Published On - 12:17 pm, Sat, 15 January 22