ಪರಿಸರದ ಪ್ರಾಮುಖ್ಯತೆಯನ್ನು ಸಾರುವ ಅತಿದೊಡ್ಡ ಚಿತ್ರ ಬಿಡಿಸಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ನಿರ್ಮಿಸಿದ ಯುವಕ
ಭಾರತದಲ್ಲಿ ಮರಗಳನ್ನು ಅನಾದಿಕಾಲದಿಂದಲೂ ಪೂಜಿಸುತ್ತಲೇ ಬಂದಿದ್ದೇವೆ. ಅವುಗಳು ಸದಾ ಕಾಲ ಮಾನವರೊಂದಿಗೆ ಸಂಭಾಷಣೆ ನಡೆಸುತ್ತವೆ. ನಮ್ಮ ಜೀವನದಲ್ಲಿ ಯಾವುದು ಅಥವಾ ಯಾರೊಬ್ಬರ ಮಹತ್ವವನ್ನು ಅವರ ಅನುಪಸ್ಥಿತಿಯಲ್ಲಿಯೇ ಅರ್ಥ ಮಾಡಿಕೊಳ್ಳುತ್ತೇವೆ.
ಗಿನ್ನಿಸ್ ದಾಖಲೆ ಮಾಡುವುದು ಸುಲಭ ಕೆಲಸವಲ್ಲ. ಅದೇಷ್ಟೋ ದಿನಗಳ ನಿರಂತರ ಸಾಧನೆ, ತಾಳ್ಮೆಯ ಅವಶ್ಯಕತೆ ಇರುತ್ತದೆ. ಹಿಂದೆ ನಿರ್ಮಿಸಿದ ರೆಕಾರ್ಡ್ಗಳನ್ನು ಮುರಿದು ಹೊಸ ಇತಿಹಾಸ ಸೃಷ್ಟಿಸುವ ಧೈರ್ಯ ಬೇಕು. ಹಾಗಿದ್ದರೆ ಮಾತ್ರ ಹೊಸ ದಾಖಲೆಯನ್ನು ನಿರ್ಮಿಸಲು ಸಾಧ್ಯ. ಅಂತಹ ಗಟ್ಟಿತನದ ನಿರ್ಧಾರ ಮಾಡಿ ಕಾರ್ಪೋರೇಟ್ ಉದ್ಯೋಗವನ್ನು ತ್ಯಜಿಸಿ, ಹವ್ಯಾಸವಾಗಿದ್ದ ಪೇಂಟಿಗ್ ಮೂಲಕ ಗಿನ್ನಿಸ್ ವರ್ಲ್ಡ್ ದಾಖಲೆ ನಿರ್ಮಿಸಿದ್ದಾರೆ ರಾಜಸ್ಥಾನದ ರವಿ ಸೋನಿ. ರಾಜಸ್ಥಾನದ ಉದಯಪುರ ನಿವಾಸಿ ರವಿ ‘ಪರಿಸರವೇ ನಿಜವಾದ ಜೀವನ’ ಎನ್ನುವ ಕಾನ್ಸೆಪ್ಟ್ ಇಟ್ಟುಕೊಂಡು ಜಗತ್ತಿನ ಅತೀ ದೊಡ್ಡ ಚಿತ್ರವನ್ನು ಚಿತ್ರಿಸುವುದರ ಮೂಲಕ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಮಾಡಿದ್ದಾರೆ. ರವಿ 24 ಗಂಟೆ 33 ನಿಮಿಷಗಳ ಸಮಯದಲ್ಲಿ ಬೃಹತ್ ಕ್ಯಾನ್ವಾಸ್ನಲ್ಲಿ ಮರ, ಗುಡ್ಡ ಸೇರಿದಂತೆ ಒಟ್ಟಾರೆ ಪರಿಸರದ ಚಿತ್ರವನ್ನು ಚಿತ್ರಿಸಿದ್ದಾರೆ, ಒಟ್ಟು 629.98 ಚದರ ಮೀಟರ್ ವಿಸ್ತೀರ್ಣದಲ್ಲಿ ಕಲಾಕೃತಿಯನ್ನು ನಿರ್ಮಿಸಿದ್ದಾರೆ. ಈ ಮೂಲಕ 2020ರಲ್ಲಿ ಇಟಾಲಿಯನ್ ಆರ್ಟಿಸ್ಟ್ ಡೂಡಲ್ 568.47 ಚದರ ಮೀಟರ್ ಕಲಾಕೃತಿ ರಚಿಸಿ ನಿರ್ಮಿಸಿದ್ದ ರೆಕಾರ್ಡ್ ಅನ್ನು ಮುರಿದಿದ್ದಾರೆ.
View this post on Instagram
ರವಿ ಅವರು ಕೊರೋನಾ ವೇಳೆಯಲ್ಲಿ ಕಾರ್ಪೋರೇಟ್ ಕಂಪನಿಯಲ್ಲಿ ಕೆಲಸವನ್ನು ತ್ಯಜಿಸಿದರು. ಆ ಬಳಿಕ ಬೊಂಬಕೇಸಿ ಕುಟುಂಬಕ್ಕೆ ಸೇರಿದ ಬಾವೋಬಾಬ್ ಮರದ ಬಗ್ಗೆ ಮಾಹಿತಿ ಪಡೆದು ಅವುಗಳ ದೀರ್ಘಾಯುಷ್ಯ ಮತ್ತು ಅವುಗಳು ಪರಿಸರಕ್ಕೆ ನೀಡುವ ಕೊಡುಗೆಗಳನ್ನು ಅರಿತು ಸಮಾಜಕ್ಕೆ ತಿಳಿಸುವ ಉದ್ದೇಶದಿಂದ ಬಾವೋಬಾಬ್ ಮರಗಳಿರುವ ಬೃಹತ್ ಪರಿಸರದ ಚಿತ್ರವನ್ನು ಬಿಡಿಸಿದ್ದಾರೆ. ಈ ಕುರಿತು ಸೋನಿ ರವಿ ಅವರು ಇಂಡಿಯನ್ ಎಕ್ಸ್ಪ್ರೆಸ್ ಜತೆ ಮಾತಾನಾಡುವ ವೇಳೆ, ಬಾವೋಬಾಬ್ ಮರಗಳು ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ದೃಢವಾಗಿ ಬದುಕುಳಿಯುವ ಸಾಮರ್ಥ್ಯವನ್ನು ಹೊಂದಿವೆ. ಇದು ನನ್ನನ್ನು ಪ್ರೇರೇಪಿಸಿತು. ನಾನು ಕೂಡ ಕೆಲಸ ತ್ಯಜಿಸಿದಾಗ ಬದುಕನ್ನು ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದೆ ಆಗ ಇದೇ ಮರಗಳು ನನಗೆ ಸ್ಪೂರ್ತಿಯಾಗಿದೆ. ಹೀಗಾಗಿ ಅದೇ ಮರಗಳನ್ನು ಚಿತ್ರಿಸುವ ಮೂಲಕ ದಾಖಲೆಯನ್ನು ನಿರ್ಮಿಸಿಲು ತೀರ್ಮಾನಿಸಿದೆ. ಇದರಲ್ಲಿ ಒಟ್ಟಾರೆ ಪರಿಸರದ ಸಮತೋಲನದ ಪ್ರಾಮುಖ್ಯತೆಯನ್ನು ತಿಳಿಸುವ ಪ್ರಯತ್ನವಾಗಿದೆ ಎಂದಿದ್ದಾರೆ.
ಭಾರತದಲ್ಲಿ ಮರಗಳನ್ನು ಅನಾದಿಕಾಲದಿಂದಲೂ ಪೂಜಿಸುತ್ತಲೇ ಬಂದಿದ್ದೇವೆ. ಅವುಗಳು ಸದಾ ಕಾಲ ಮಾನವರೊಂದಿಗೆ ಸಂಭಾಷಣೆ ನಡೆಸುತ್ತವೆ. ನಮ್ಮ ಜೀವನದಲ್ಲಿ ಯಾವುದು ಅಥವಾ ಯಾರೊಬ್ಬರ ಮಹತ್ವವನ್ನು ಅವರ ಅನುಪಸ್ಥಿತಿಯಲ್ಲಿಯೇ ಅರ್ಥ ಮಾಡಿಕೊಳ್ಳುತ್ತೇವೆ. ಮರಗಳನ್ನು ಕಡಿದು ಅವಶ್ಯಕತೆಗೆ ತಕ್ಕ ಹಾಗೆ ಬಳಸಿಕೊಂಡಿದ್ದೇವೆ. ಆದರೆ ಕೊರೋನಾ ಆಮ್ಲಜನಕ ಪ್ರಾಮುಖ್ಯತೆಯನ್ನು ತಿಳಿಸಿದೆ ಎಂದಿದ್ದಾರೆ. ಸೋನಿ ರವಿ ಇದೀಗ ದಾಖಲೆಯನ್ನು ನಿರ್ಮಿಸಿದ ಬಳಿಕ ಮತ್ತೊಂದು ದಾಖಲೆಯನ್ನು ನಿರ್ಮಿಸಲು ತಯಾರಿ ನಡೆಸಿದ್ದಾರೆ.