ಹೃದಯವೇ ಇಲ್ಲದೆ 555 ದಿನ ಕಳೆದ ಪುಣ್ಯಾತ್ಮ; ಕೃತಕ ಹೃದಯ ಹೊತ್ತು ದಾನಿಗಳಿಗೆ ಕಾದವನು ಕೊನೆಗೂ ಗೆದ್ದೇಬಿಟ್ಟ

| Updated By: Skanda

Updated on: Jun 30, 2021 | 10:35 AM

ಲಾರ್ಕಿನ್​ ಎಂಬ ಯುವಕನ ಯಶೋಗಾಥೆ ಇದಾಗಿದ್ದು, ಹೃದಯ ಸಂಬಂಧಿ ಸಮಸ್ಯೆ ಹೊಂದಿದ್ದ ಆತ ದಾನಿಗಳಿಂದ ಹೃದಯ ಪಡೆಯುವ ತನಕ ಕೇವಲ ಕೃತಕ ಉಪಕರಣವೊಂದರ ಸಹಾಯದಲ್ಲಿ ದಿನ ದೂಡಿದ್ದಾನೆ, ಅದು ಕೂಡಾ ಬರೋಬ್ಬರಿ 555 ದಿನಗಳು ಎಂದರೆ ಎಂಥವರೂ ಬೆರಗಾಗಲೇಬೇಕು.

ಹೃದಯವೇ ಇಲ್ಲದೆ 555 ದಿನ ಕಳೆದ ಪುಣ್ಯಾತ್ಮ; ಕೃತಕ ಹೃದಯ ಹೊತ್ತು ದಾನಿಗಳಿಗೆ ಕಾದವನು ಕೊನೆಗೂ ಗೆದ್ದೇಬಿಟ್ಟ
ಲಾರ್ಕಿನ್​
Follow us on

ಕೆಲವೊಂದು ಘಟನೆಗಳು ವಿಜ್ಞಾನ, ವೈದ್ಯಕೀಯ ಲೋಕಕ್ಕೂ ಸವಾಲೊಡ್ಡುತ್ತವೆ. ಎಲ್ಲಾ ಅನುಭವ, ಲೆಕ್ಕಾಚಾರಗಳಾಚೆಗೂ ಅಸಾಧ್ಯ ಸಂಗತಿಯೊಂದು ಸಾಧ್ಯವಾದಾಗ ಅದಕ್ಕೆ ಪವಾಡ ಎಂಬ ಹಣೆಪಟ್ಟಿಯೇ ಸೂಕ್ತ ಎನ್ನಿಸುತ್ತದೆ. ಇನ್ನು ಬದುಕುವುದೇ ಇಲ್ಲ ಎಂದು ವೈದ್ಯರು ಕೈಚೆಲ್ಲಿದ ನಂತರವೂ ಬದುಕಿ ಬಂದವರ, ಅಂತ್ಯಸಂಸ್ಕಾರಕ್ಕೂ ಮುನ್ನ ಉಸಿರಾಡಿ ಅಚ್ಚರಿಗೊಳಿಸಿದವರ, ಕೈ, ಕಾಲು ಇಲ್ಲದಿದ್ದರೂ ಎಲ್ಲರೂ ಬೆರಗುಗೊಳಿಸುವಂತೆ ಬದುಕಿದವರ ಬೇರೆ ಬೇರೆ ರೀತಿಯ ನೈಜ ಕತೆಗಳನ್ನು ಕೇಳಿರುತ್ತೀರಿ. ಇಲ್ಲೂ ಅಂತಹದ್ದೇ ಒಂದು ಅಸಾಧಾರಣ ಘಟನೆಯ ಬಗ್ಗೆ ಹೇಳಲಿದ್ದೇವೆ. ಇದು ನಿಮ್ಮ ಹೃದಯ ಗೆಲ್ಲುವ ಕತೆ.

ಮನುಷ್ಯನ ದೇಹದಲ್ಲಿ ಎಲ್ಲಾ ಅಂಗಾಂಗಗಳೂ ಸರಿಯಿದ್ದು ಹೃದಯವೊಂದು ಕೈಕೊಟ್ಟರೂ ಸಾಕು ಆತನ ಬದುಕು ಅಲ್ಲಿಗೇ ಅಂತ್ಯವಾದಂತೆ. ನಿಯಮಿತವಾಗಿ ಬಡಿದುಕೊಳ್ಳುವ ಹೃದಯ ಸದ್ದು ನಿಲ್ಲಿಸಿದರೆ ಆ ದೇಹ ಸಾವಿಗೆ ಶರಣಾದಂತೆಯೇ. ಈಗ ತಂತ್ರಜ್ಞಾನ ಮುಂದುವರೆದಿರುವ ಕಾರಣ ಹೃದಯಕ್ಕೆ ಸಮಸ್ಯೆ ಆದರೆ ಅದನ್ನು ಮರುಜೋಡಿಸುವ ಮಟ್ಟಿಗೆ ಕಾಲ ಬದಲಾಗಿದೆ. ಆದರೆ, ಅದಕ್ಕೂ ಇಂತಿಷ್ಟು ಕಾಲಾವಕಾಶ, ಸಮಯದ ಮಿತಿ, ವೈದ್ಯಕೀಯ ಸವಾಲುಗಳು ಇರುತ್ತವೆ. ಇಲ್ಲೊಬ್ಬ ಪುಣ್ಯಾತ್ಮ ಮಾತ್ರ ಈ ಸವಾಲುಗಳಿಗೆಲ್ಲಾ ಎದೆಯೊಡ್ಡಿ ಬರೋಬ್ಬರಿ 555 ದಿನಗಳ ಕಾಲ ಹೃದಯವೇ ಇಲ್ಲದೇ ಬದುಕು ಸಾಗಿಸಿದ್ದಾನೆ. ಬದುಕಿದ್ದು ಎಂದರೆ ಆಸ್ಪತ್ರೆಯ ಐಸಿಯುವಿನಲ್ಲೋ, ವೈದ್ಯರ ಕಣ್ಗಾವಿಲಿನಲ್ಲೋ ಉಳಿದಿದ್ದ ಎಂದು ಭಾವಿಸಬೇಡಿ. ಈತ ಹೃದಯವಿಲ್ಲದೇ ಇರುವಾಗಲೂ ಸ್ನೇಹಿತರ ಜತೆ ಓಡಾಡುತ್ತಾ, ಕೆಲ ಸಣ್ಣಪುಟ್ಟ ಆಟಗಳನ್ನಾಡುತ್ತಾ ಆರಾಮಾಗಿಯೇ ಬದುಕಿದ್ದಾನೆ.

ಲಾರ್ಕಿನ್​ ಎಂಬ ಯುವಕನ ಯಶೋಗಾಥೆ ಇದಾಗಿದ್ದು, ಹೃದಯ ಸಂಬಂಧಿ ಸಮಸ್ಯೆ ಹೊಂದಿದ್ದ ಆತ ದಾನಿಗಳಿಂದ ಹೃದಯ ಪಡೆಯುವ ತನಕ ಕೇವಲ ಕೃತಕ ಉಪಕರಣವೊಂದರ ಸಹಾಯದಲ್ಲಿ ದಿನ ದೂಡಿದ್ದಾನೆ, ಅದು ಕೂಡಾ ಬರೋಬ್ಬರಿ 555 ದಿನಗಳು ಎಂದರೆ ಎಂಥವರೂ ಬೆರಗಾಗಲೇಬೇಕು. ಸಿನ್​ಕಾರ್ಡಿಯಾ ಎಂಬ ಉಪಕರಣವನ್ನು ಹೊತ್ತು, ದಾನಿಗಳಿಂದೇನಾದರೂ ಹೃದಯ ಸಿಗಬಹುದೇ ಎಂದು ಅಪೇಕ್ಷಿಸುತ್ತಾ ಒಂದು ವರ್ಷಕ್ಕಿಂತಲೂ ಹೆಚ್ಚು ಸಮಯ ಕಾಲ ಕಳೆದ ಲಾರ್ಕಿನ್​ ಕೊನೆಗೂ ತನ್ನ 25ನೇ ವರ್ಷದಲ್ಲಿ ದಾನಿಗಳೊಬ್ಬರಿಂದ ಹೃದಯ ಪಡೆದಿದ್ದಾನೆ.

ಈತನಿಗೆ 2016ರಲ್ಲಿ ಹೃದಯ ಮರುಜೋಡಣೆ ಆಗಿದ್ದು, ಅದಕ್ಕಿಂತ ಮುಂಚೆ 555 ದಿನಗಳ ಕಾಲ ಕೇವಲ ಕೃತಕ ಹೃದಯದ ಸಹಾಯದಲ್ಲಿ ಬದುಕಿದ್ದು, ವೈದ್ಯಕೀಯ ಲೋಕಕ್ಕೂ ಅಚ್ಚರಿ ಮೂಡಿಸಿದೆ. ಸಾಧಾರಣವಾಗಿ ತಜ್ಞ ವೈದ್ಯರು ಹೇಳುವಂತೆ ಸಿನ್​ಕಾರ್ಡಿಯಾ ಉಪಕರಣ ತುರ್ತು ಸಂದರ್ಭದಲ್ಲಿ ಸಹಾಯ ಮಾಡುತ್ತದೆಯಾದರೂ ದೀರ್ಘಕಾಲ ಜೀವ ಹಿಡಿದಿಟ್ಟುಕೊಳ್ಳುವುದು ಸುಲಭದ ಮಾತಲ್ಲ. ಆದರೆ, ಲಾರ್ಕಿನ್​ ಮಾತ್ರ 13.5 ಪೌಂಡ್ ತೂಕದ ಕೃತಕ ಹೃದಯವನ್ನೇ ಅಳವಡಿಸಿಕೊಂಡು ಆಸ್ಪತ್ರೆಯಿಂದ ಹೊರಗೆ ಇದ್ದೇ ಬದುಕಲು ನಿರ್ಧರಿಸಿ ಕೊನೆಗೂ ಸಾಧಿಸಿ ತೋರಿಸಿದ್ದಾನೆ.

ಇದು 2016ರ ಘಟನೆಯಾದರೂ ಸಾಮಾಜಿಕ ಜಾಲತಾಣದಲ್ಲಿ ಈಗ ಮತ್ತೆ ಹರಿದಾಡಲಾರಂಭಿಸಿದ್ದು, ಹೃದಯವಿಲ್ಲದೇ ಬದುಕಿ ತೋರಿಸಿದವನು ಎಲ್ಲರ ಹೃದಯ ಗೆಲ್ಲುತ್ತಿದ್ದಾನೆ.

ಇದನ್ನೂ ಓದಿ:
Sanchari Vijay: ಸಂಚಾರಿ ವಿಜಯ್​ ದೇಹದಿಂದ ಲಿವರ್, 2 ಕಿಡ್ನಿ, 2 ಕಣ್ಣು, ಹೃದಯದ ವಾಲ್ವ್ ಪಡೆಯುತ್ತಿದ್ದೇವೆ; ವೈದ್ಯರ ಮಾಹಿತಿ 

Shocking: ಕೃತಕ ನಾಳವನ್ನು ಕತ್ತರಿಸುವ ಬದಲು ಎರಡು ವಾರದ ಹಸುಗೂಸಿನ ಹೆಬ್ಬೆರಳಿಗೇ ಕತ್ತರಿ ಹಾಕಿದ ನರ್ಸ್​; ಪೋಷಕರ ಆಕ್ರೋಶ