ಉದ್ದ ಕೂದಲನ್ನೇ ಉಡುಪಾಗಿಸಿಕೊಂಡು ಹೊಸ ಸ್ಟೈಲ್ ಎಂದ ವಿದೇಶಿ ಯುವತಿಗೆ ಅಕ್ಕಮಹಾದೇವಿ ಬಗ್ಗೆ ಹೇಳಿದ ವ್ಯಕ್ತಿ!
ವಿಡಿಯೋ ನೋಡಿ ವಿದೇಶಿಗರೆಲ್ಲಾ ಹುಬ್ಬೇರಿಸಿ, ವಾವ್, ಇದು ಅಸಾಧ್ಯವಾದ ಆಲೋಚನೆ, ತುಂಬಾ ಕ್ರೀಯಶೀಲ ಯೋಚನೆ, ಊಹಿಸೋದಕ್ಕೂ ಸಾಧ್ಯವಿಲ್ಲ ಎಂದೆಲ್ಲಾ ಬೆರಗುಗೊಳ್ಳುತ್ತಿದ್ದರೆ ಒಬ್ಬ ಭಾರತೀಯ ಮಾತ್ರ ನಮಗೆ ಇದೆಲ್ಲಾ ಹೊಸತು ಅಲ್ಲವೇ ಅಲ್ಲ ಎಂದು ಅಕ್ಕಮಹಾದೇವಿಯನ್ನ ನೆನೆಸಿಕೊಂಡಿದ್ದಾರೆ.
ಈ ಜಗತ್ತಿನಲ್ಲಿ ಫ್ಯಾಶನ್ ಪ್ರಿಯರು ಒಂದಲ್ಲಾ ಒಂದು ಹೊಸತನಗಳನ್ನು ಪರಿಚಯಿಸಿ ಅಚ್ಚರಿಗೊಳಿಸುತ್ತಲೇ ಇರುತ್ತಾರೆ. ಮಾಮೂಲಿ ಜನರೆಲ್ಲಾ ಒಂದೇ ಬಗೆಯ ವೇಷಭೂಷಣ, ಕೇಶವಿನ್ಯಾಸದಲ್ಲೇ ಸಂತೃಪ್ತಿ ಕಾಣುತ್ತಿದ್ದರೆ, ಫ್ಯಾಶನ್ ಪ್ರಿಯರೆಂದು ಕರೆಸಿಕೊಳ್ಳುವವರು ದಿನಕ್ಕೊಂದು ಅವತಾರ ಎತ್ತಿಬಂದು ಹೊಸತನಕ್ಕೆ ಕೊನೆಯೇ ಇಲ್ಲ, ಆಕಾಶವೇ ನಮಗೆ ಮಿತಿ ಎನ್ನುವಂತೆ ಬೆರಗುಗೊಳಿಸುತ್ತಾರೆ. ಆದರೆ, ಈ ಫ್ಯಾಶನ್ ಬಗ್ಗೆ ಅಪಸ್ವರ ಇಲ್ಲವೆಂದೇನಿಲ್ಲ. ಹಿಂದೆ ಮಾನವ ವಿಕಸನ ಹೊಂದುತ್ತಾ, ನಾಗರೀಕ ಪ್ರಪಂಚಕ್ಕೆ ತೆರೆದುಕೊಳ್ಳುತ್ತಾ ಒಂದೊಂದೇ ಬದಲಾವಣೆಗಳಿಗೆ ಒಗ್ಗಿಕೊಂಡು, ಸೊಪ್ಪುಸದೆಗಳಿಂದ ಮೈ ಮುಚ್ಚಿಕೊಳ್ಳಲಾರಂಭಿಸಿ, ಬಟ್ಟೆ ಕಂಡು ಹಿಡಿದನಾದರೂ ಈಗ ಟ್ರೆಂಡ್, ಫ್ಯಾಶನ್ ಎಂದೆಲ್ಲಾ ಜನರು ಬಟ್ಟೆಯಿಂದ ವಿಮುಖರಾಗುತ್ತಿದ್ದಾರೆ ಎಂದು ಅಸಮಾಧಾನಪಡುವವರೂ ಸಿಗುತ್ತಾರೆ. ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಾ ಹರಿದಾಡುತ್ತಿರುವ ಹುಡುಗಿಯೊಬ್ಬಳ ಪೋಸ್ಟ್ ಬಗ್ಗೆಯೂ ಇಂಥದ್ದೇ ಪರ, ವಿರೋಧದ ಮಾತುಗಳು ಕೇಳಿಬಂದಿವೆ. ಆದರೆ, ಆ ವಾದದ ನಡುವೆಯೂ ಆಕೆ ಪ್ರಸಿದ್ಧಳಾಗಿದ್ದಾಳೆ. ಗಮನಾರ್ಹ ಸಂಗತಿ ಎಂದರೆ ಕೂದಲು ಬಿಟ್ಟು ಮೈ ಮುಚ್ಚಿಕೊಂಡು ಪ್ರಸಿದ್ಧಳಾಗುತ್ತಿರುವ ಈ ವಿದೇಶಿ ಹುಡುಗಿಯ ವಿಡಿಯೋಗೆ ಹಾಕಲಾಗಿರುವ ಕಮೆಂಟ್ನಲ್ಲಿ ನಮ್ಮ ಅಕ್ಕಮಹಾದೇವಿಯವರನ್ನು ನೆನಪಿಸಿಕೊಂಡು ಇದೆಲ್ಲಾ ತುಂಬಾ ಹಳೇ ವಿಷಯ ಎಂದು ಒಬ್ಬರು ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಈ ವಿಡಿಯೋ, ಜನರು ಯಾವ ಮಟ್ಟಿಗೆ ಫ್ಯಾಶನ್ ಪ್ರಿಯರು, ಈಗಿನ ಕಾಲದವರು ಹೇಗೆಲ್ಲಾ ತಮ್ಮನ್ನು ತಾವು ಪ್ರದರ್ಶಿಸಿಕೊಳ್ಳುತ್ತಾರೆ ಎನ್ನುವುದಕ್ಕೆ ಉತ್ತಮ ಉದಾಹರಣೆಯಾಗಿದೆ. ವೈರಲ್ ಆದ ವಿಡಿಯೋದಲ್ಲಿ ಹುಡುಗಿಯೊಬ್ಬಳು ತನ್ನ ತಲೆಗೂದಲನ್ನು ಉದ್ದವಾಗಿ ಬಿಟ್ಟು ಅದರಿಂದಲೇ ತನ್ನ ಅಂಗಾಂಗಳನ್ನು ಮುಚ್ಚಿಕೊಂಡಿದ್ದಾಳೆ. ಈಗಿನ ಕಾಲದ ಹುಡುಗಿಯೊಬ್ಬಳು ಅಷ್ಟುದ್ದ ಕೂದಲು ಬಿಟ್ಟಿದ್ದು ಆಶ್ಚರ್ಯವಾದರೂ, ಅದಕ್ಕಿಂತಲೂ ಅಚ್ಚರಿ ಮೂಡಿಸುವುದೆಂದರೆ ಆಕೆ ತನ್ನ ಕೂದಲಿನಿಂದಲೇ ಮೈ ಮುಚ್ಚಿಕೊಂಡ ಪರಿ.
View this post on Instagram
ಆದರೆ, ನಮ್ಮಲ್ಲಿ ಬಹಳ ವರ್ಷಗಳ ಹಿಂದೆಯೇ ಅಕ್ಕಮಹಾದೇವಿ ವಸ್ತ್ರ ತ್ಯಾಗ ಮಾಡಿ ಹೀಗೆ ತನ್ನ ಕೇಶದಿಂದಲೇ ಮೈ ಮುಚ್ಚಿಕೊಳ್ಳುತ್ತಿದ್ದರು ಎನ್ನುವುದನ್ನು ಚಿಕ್ಕವರಿರುವಾಗಲೇ ಪಠ್ಯ ಪುಸ್ತಕಗಳಿಂದ ಓದಿ ತಿಳಿದುಕೊಂಡಿದ್ದೇವೆ. ಹೀಗಾಗಿ ಈ ವಿಡಿಯೋ ನೋಡಿ ವಿದೇಶಿಗರೆಲ್ಲಾ ಹುಬ್ಬೇರಿಸಿ, ವಾವ್, ಇದು ಅಸಾಧ್ಯವಾದ ಆಲೋಚನೆ, ತುಂಬಾ ಕ್ರೀಯಶೀಲ ಯೋಚನೆ, ಊಹಿಸೋದಕ್ಕೂ ಸಾಧ್ಯವಿಲ್ಲ ಎಂದೆಲ್ಲಾ ಬೆರಗುಗೊಳ್ಳುತ್ತಿದ್ದರೆ ಒಬ್ಬರು ಮಾತ್ರ ನಮಗೆ ಇದೆಲ್ಲಾ ಹೊಸತು ಅಲ್ಲವೇ ಅಲ್ಲ. ನಮ್ಮ ನೆಲದಲ್ಲಿ ಎಷ್ಟೋ ವರ್ಷಗಳ ಹಿಂದೆಯೇ ಅಕ್ಕಮಹಾದೇವಿ ಎನ್ನುವವರೊಬ್ಬರು ಕೇಶವನ್ನೇ ತನ್ನ ಉಡುಪನ್ನಾಗಿಸಿಕೊಂಡು ಬದುಕುತ್ತಿದ್ದರು ಎಂದು ಕಾಮೆಂಟ್ ಮಾಡುವ ಮೂಲಕ, ಅಕ್ಕಮಹಾದೇವಿಯರ ಬಗ್ಗೆ ವಿದೇಶಿಗರಿಗೆ ಹೇಳಿದ್ದಾರೆ.
ಇದನ್ನೂ ಓದಿ: ಸಿಇಓ ಜತೆ ಆನ್ಲೈನ್ ಮೀಟಿಂಗ್ ನಡೆಸುವಾಗ ಪೇಚಿಗೆ ಸಿಲುಕಿದ ಮಹಿಳಾ ಉದ್ಯೋಗಿ; ವೈರಲ್ ಆಯ್ತು ವಿಡಿಯೋ
ಸೀರೆಯುಟ್ಟು ಸಖತ್ ಆಗಿ ಹಾಡಿಗೆ ಹೆಜ್ಜೆ ಹಾಕಿದ ನಟಿ: ಸಾಮಾಜಿಕ ಜಾಲತಾಣಗಳಲ್ಲಿ ಈಕೆಯದ್ದೇ ಹವಾ