Viral : ಫ್ಲೊರಿಡಾದಲ್ಲಿ ಅಪ್ಪಳಿಸಿರುವ ಇಯಾನ್ ಚಂಡಮಾರುತದ ಅಟ್ಟಹಾಸದ ಕಥೆಗಳನ್ನು ಕೇಳುತ್ತಿದ್ದೀರಿ ನೋಡುತ್ತಿದ್ದೀರಿ. ನೂರಾರು ಜನರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ರಸ್ತೆ ಮನೆಗಳು ನಾಶವಾಗುತ್ತಿವೆ. ಇನ್ನು ಪ್ರಾಣಿ ಪಕ್ಷಿಗಳ ಕಥೆಯಂತೂ ಹೇಳತೀರದು. ಈ ಎಲ್ಲದರ ಮಧ್ಯೆಯೇ ವ್ಯಕ್ತಿಯೊಬ್ಬ ಅಳಿಲನ್ನು ರಕ್ಷಿಸಿದ ವಿಡಿಯೋ ವೈರಲ್ ಆಗುತ್ತಿದೆ. ನಿಂತ ಮಳೆನೀರಿನಲ್ಲಿ ನಡೆದುಕೊಂಡು ಹೋಗುತ್ತಿರುವ ಈ ವ್ಯಕ್ತಿಯ ಕಾಲನ್ನು ಏರಲು ಪ್ರಯತ್ನಿಸಿದೆ ಈ ಅಳಿಲು. ಅದು ವಾಪಾಸ್ ನೀರಿನೊಳಗೆ ಬೀಳದಂತೆ ಹುಷಾರಾಗಿ ಅದರೊಂದಿಗೆ ಚಲಿಸಿದ್ದಾನೆ ಈತ.
ಇದನ್ನು ಹೀಗೆ ಜೋಪಾನವಾಗಿ ಮನೆಗೆ ಕರೆದುಕೊಂಡು ಬಂದು ಅದಕ್ಕೆ ತಿಂಡಿತಿನಿಸನ್ನು ಕೊಟ್ಟಿದ್ದಾನೆ. ಮತ್ತದಕ್ಕೆ ಸ್ಕ್ರ್ಯಾಂಬಲ್ಸ್ ಎಂದು ಹೆಸರಿಟ್ಟಿದ್ದಾನೆ. ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡ ಈ ವಿಡಿಯೋ ನೋಡಿದ ನೆಟ್ಟಿಗರು ಈತನಿಗೆ ಧನ್ಯವಾದ ಅರ್ಪಿಸುತ್ತಿದ್ದಾರೆ. ಕರುಣಾಮಯಿ ಎಂದು ಹೊಗಳುತ್ತಿದ್ದಾರೆ. ದಿನವೂ ಸ್ಕ್ರ್ಯಾಂಬಲ್ಸ್ ಚಟುವಟಿಕೆಗಳ ಬಗ್ಗೆ ಅಪ್ಡೇಟ್ಗಾಗಿ ಈತನ ಖಾತೆಗೆ ಭೇಟಿ ಕೊಡುತ್ತಿದ್ದಾರೆ ಜನರು.
ಇದನ್ನು ಪೋಷಿಸಿ ಹೊರಬಿಟ್ಟರೂ ತನ್ನ ಪ್ರಾಣ ಉಳಿಸಿದ ಸ್ನೇಹಿತನ ಮನೆಗೆ ದಿನವೂ ಭೇಟಿಕೊಟ್ಟು ಹೋಗುತ್ತಿದೆ ಈ ಅಳಿಲು. ಕೃತಜ್ಞತೆ ಎನ್ನುವುದು ಪ್ರಾಣಿಯಲ್ಲಿಯೂ ಮನೋಗತವಾಗಿದೆ.
ಜೀವ ಜೀವವೇ ಅಲ್ಲವೆ? ಮನುಷ್ಯರಾದರೇನು ಪ್ರಾಣಿಯಾದರೇನು? ಸಂಕಷ್ಟದಲ್ಲಿರುವವರನ್ನು ರಕ್ಷಿಸುವುದೇ ಮನುಷ್ಯ ಧರ್ಮ ಅಲ್ಲವೆ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 6:16 pm, Wed, 12 October 22