Viral : ಆಟಿಸಮ್ (Autism) ಅಥವಾ ವಿಶಿಷ್ಟಚೇತನವುಳ್ಳ (Specially abled) ವ್ಯಕ್ತಿಗಳನ್ನು ಸಮಾಜ ಗೌರವದಿಂದ ಕಾಣುವ ನಡೆಯನ್ನು ರೂಢಿಸಿಕೊಳ್ಳುತ್ತಿದೆ ಎನ್ನುವುದು ಒಳ್ಳೆಯ ಬೆಳವಣಿಗೆ. ಇಂಥ ವ್ಯಕ್ತಿಗಳಲ್ಲಿ ಸಂಗೀತ, ಕ್ರೀಡೆ ಮತ್ತು ಕಲೆಗಳಿಗೆ ಸಂಬಂಧಿಸಿದ ವಿಶೇಷ ಪ್ರತಿಭೆ ಇರುತ್ತದೆ ಎನ್ನುವುದು ಕೂಡ ತಂತ್ರಜ್ಞಾನದ ಮೂಲಕ ಸಾಕಷ್ಟು ಜನರ ಅರಿವಿಗೆ ಬರತೊಡಗಿದೆ. ಹಾಗಾಗಿ ವಿಶಿಷ್ಟಚೇತನವಿರುವ ಮಕ್ಕಳನ್ನು, ವ್ಯಕ್ತಿಗಳನ್ನು ಜನರು ಪ್ರೋತ್ಸಾಹಿಸಲಾರಂಭಿಸಿದ್ದಾರೆ. ಇದಕ್ಕೆ ಉದಾಹರಣೆಯಾಗಿದೆ ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ. ಆಟಿಸಂ ಇರುವ ವ್ಯಕ್ತಿಯೊಬ್ಬರು ನೆಟ್ಟಿಗರ ವಿನಂತಿಯ ಮೇರೆಗೆ ಚಷ್ಮಾ ಹಾಕಿಕೊಂಡ ಹಸ್ಕಿ ನಾಯಿಯನ್ನು ಚಿತ್ರಿಸಿರುವ ವಿಡಿಯೋ ಇದಾಗಿದೆ.
ಗುಡ್ ನ್ಯೂಸ್ ಕರೆಸ್ಪಾಂಡೆಂಟ್ ಎಂಬ ಇನ್ಸ್ಟಾಗ್ರಾಂ ಪುಟದಲ್ಲಿ ಈ ವಿಡಿಯೋ ಅನ್ನು ಮರುಹಂಚಿಕೊಳ್ಳಲಾಗಿದೆ. ಮೂಲತಃ ಈ ವಿಡಿಯೋ drawingsbytrent ಎಂಬ ಪುಟದಲ್ಲಿ ಪೋಸ್ಟ್ ಆಗಿದೆ. ಈ ವಿಶಿಷ್ಟಚೇತನದ ವ್ಯಕ್ತಿಯ ಹೆಸರು ಟ್ರೆಂಟ್. ಇವರಲ್ಲಿರುವ ಪ್ರತಿಭೆ ಚಿತ್ರಕಲೆ. ಒಮ್ಮೆ ಇವರು ಚಿತ್ರ ಬಿಡಿಸಿದರೆ ಅದು ಪರ್ಫೆಕ್ಟ್! ಏಕೆಂದರೆ ಇವರು ಚಿತ್ರ ಬಿಡಿಸುವುದು ಮಾರ್ಕರ್ ಮೂಲಕ. 24 ವರ್ಷದ ಟ್ರೆಂಟ್ ಅವರ ಕಲೆ ಮತ್ತು ಚಟುವಟಿಕೆಗೆ ಸಂಬಂಧಿಸಿದ ವಿಡಿಯೋಗಳನ್ನು ಇಲ್ಲಿ ಕಾಣಬಹುದಾಗಿದೆ. ಟ್ರೆಂಟ್ ಅವರ ಕುಟುಂಬ ಈ ಇನ್ಸ್ಟಾಗ್ರಾಂ ಪುಟವನ್ನು ನಿರ್ವಹಿಸುತ್ತದೆ. ಟ್ರೆಂಟ್, ಫಾಲೋವರ್ಸ್ ಕೋರಿಕೆಯ ಮೇರೆಗೆ ಆಗಾಗ ಚಿತ್ರ ಬಿಡಿಸುತ್ತಿರುತ್ತಾರೆ.
ಕಲೆ ಎಂದರೆ ಪ್ರತಿಭೆ ಮತ್ತು ಪರಿಶ್ರಮದಿಂದ ಸಾಧಿಸುವಂಥದ್ದು. ಚಿತ್ರಕಲಾವಿದರು ಡ್ರಾಯಿಂಗ್ ಕಲಾವಿದರು ಪೆನ್ಸಿಲ್ ಜೊತೆ ಅಳಸುರಬ್ಬರ್ ಅನ್ನು ಸದಾ ಪಕ್ಕದಲ್ಲಿಟ್ಟುಕೊಳ್ಳುತ್ತಾರೆ. ಅಂದುಕೊಂಡಂತೆ ಚಿತ್ರ ಮೂಡುವವರೆಗೂ ಮತ್ತೆ ಮತ್ತೆ ಚಿತ್ರಿಸುತ್ತಲೇ ಇರುತ್ತಾರೆ. ಆದರೆ ಟ್ರೆಂಟ್ಗೆ ಇದ್ಯಾವುದೂ ಬೇಕಿಲ್ಲ. ಫಾಲೋವರ್ಸ್ ಕೋರಿಕೆಯ ಸಂದೇಶವನ್ನು ಇವರ ಕುಟುಂಬದವರು ಪ್ರಿಂಟೌಟ್ ತೆಗೆದು ಕೊಡುತ್ತಿದ್ದಂತೆ ಹಾಳೆಯ ಮೇಲೆ ಮಾರ್ಕರ್ನೊಂದಿಗೆ ಒಂದೇ ಏಟಿಗೆ ಚಿತ್ರ ಬಿಡಿಸಿಬಿಡುತ್ತಾರೆ.
ಆಟಿಸಮ್ಗೆ ಒಳಗಾದ ಅನೇಕರಲ್ಲಿ ಇಂಥ ದೈತ್ಯಪ್ರತಿಭೆ ಇದ್ದೇ ಇರುತ್ತದೆ. ಪ್ರೋತ್ಸಾಹಿಸಬೇಕಷ್ಟೇ. ಟ್ರೆಂಟ್ಗೆ ಎಲ್ಲರಂತೆ ಸಹಜವಾಗಿ ಸ್ಪಷ್ಟವಾಗಿ ಮಾತನಾಡಲು ಬಾರದು. ಆದರೆ ಇವರು ಬಿಡಿಸುವ ಚಿತ್ರಗಳು ಎಂದೂ ತೊದಲುವುದೇ ಇಲ್ಲ. ಹಾಗಾಗಿಯೇ ನೆಟ್ಟಿಗರು ಇವರ ಈ ಕಲೆಗೆ ಮಾರುಹೋಗಿದ್ದಾರೆ. ನನಗಂತೂ ಹೊಟ್ಟೆಕಿಚ್ಚಾಗುತ್ತಿದೆ ಇವರ ಡ್ರಾಯಿಂಗ್ ನೋಡುತ್ತಿದ್ದರೆ. ಏಕೆಂದರೆ ಒಂದು ಸರಳ ರೇಖೆಯನ್ನೂ ಕೂಡ ಒಂದೇ ಬಾರಿಗೆ ಎಳೆಯಲು ನನಗೆ ಸಾಧ್ಯವಿಲ್ಲ, ಟ್ರೆಂಟ್ ನಿಮಗೆ ಒಳ್ಳೆಯದಾಗಲಿ ಎಂದು ಒಬ್ಬರು ಹಾರೈಸಿದ್ದಾರೆ ನೆಟ್ಟಿಗರೊಬ್ಬರು. ಎಂಥ ಅದ್ಭುತ ಪ್ರತಿಭೆ ನಿಮ್ಮದು ಎಂದು ಮತ್ತೊಬ್ಬರು ಅಚ್ಚರಿ ಪಟ್ಟಿದ್ದಾರೆ.
ನಿಮ್ಮ ಸುತ್ತಮುತ್ತ ಇಂಥ ವ್ಯಕ್ತಿಗಳು ಸಾಕಷ್ಟು ಜನರಿರುತ್ತಾರೆ. ಅಂಥವರ ಬಗ್ಗೆ ಅನುಕಂಪವಿರಲಿ. ಅವರನಲ್ಲಿರುವ ಸಾಮರ್ಥ್ಯ, ಪ್ರತಿಭೆಯನ್ನು ದಯವಿಟ್ಟು ಪ್ರೋತ್ಸಾಹಿಸಿ. ಆಧುನಿಕ ಜಗತ್ತಿನಲ್ಲಿ ಇಂದು ಎಲ್ಲರಿಗೂ ಎಲ್ಲದಕ್ಕೂ ಸಮಾನ ಅವಕಾಶಗಳಿವೆ ಹಾಗೆಯೇ ಜೀವಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 6:13 pm, Mon, 17 October 22