ಚಳಿಗಾಲದಲ್ಲಿ ಎತ್ತ ನೋಡಿದರೂ ವಲಸೆ ಹಕ್ಕಿಗಳದೇ ಕಲವರ. ಪಕ್ಷಿಧಾಮಗಳು, ವನ್ಯಜೀವಿ ಧಾಮಗಳಲ್ಲಿ ವಲಸೆ ಹಕ್ಕಿಗಳು ಬೀಡು ಬಿಟ್ಟು ನೋಡುಗರ ಕಣ್ಮನ ಸೆಳೆಯುತ್ತವೆ. ಇದೀಗ ತಮಿಳುನಾಡಿನ ಕೊಡಿಯಾಕರೈನಲ್ಲಿರುವ ಪಾಯಿಂಟ್ ಕ್ಯಾಲಿಮರ್ ವನ್ಯಜೀವಿ ಮತ್ತು ಪಕ್ಷಿಧಾಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಲಸೆಗಳು ಬಂದಿದ್ದು ಪ್ರವಾಸಿಗರನ್ನು ಆಕರ್ಷಿಸಿದೆ. ಇದರ ವೀಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಸಾಲು ಸಾಲು ಪಕ್ಷಿಗಳು ಹಾರಾಡುವುದನ್ನು ಕಾಣಬಹದು.
ಮುಖ್ಯವಾಗಿ ಫ್ಲೆಮಿಂಗೋ ಪಕ್ಷಿಗಳು ಕೊಡಿಯಾಕರೈನ ಪಕ್ಷಿಧಾಮದಲ್ಲಿ ಕಾಣಿಸಿಕೊಂಡಿವೆ. ಇದರ ವೀಡಿಯೋವನ್ನು ತಮಿಳುನಾಡಿನ ಅರಣ್ಯ ಮತ್ತು ಪರಿಸರ ಹವಾಮಾನ ಬದಲಾವಣೆ ಕಾರ್ಯದರ್ಶಿ ಸುಪ್ರಿಯಾ ಸಾಹು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಡಿಸೆಂಬರ್ 25ರಂದು ಈ ವೀಡಿಯೋ ಹಂಚಿಕೊಳ್ಳಲಾಗಿದ್ದು, 8 ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದಿದೆ.
Point Calimere ( Kodiakarai ) Wildlife and Bird Sanctuary in Tamil Nadu is abuzz with thousands of migratory birds #TNForest pic.twitter.com/LyOoHn1Elz
— Supriya Sahu IAS (@supriyasahuias) December 25, 2021
20 ಚದರ ಕಿಮೀ ನಿತ್ಯಹರಿದ್ವರ್ಣ ಕಾಡುಗಳನ್ನು ಕೊಡಿಯಾಕರೈ ವನ್ಯಜೀವಿಧಾಮ ಆವರಿಸಿದ್ದು 250 ಜಾತಿಯ ವಿವಿಧ ಪಕ್ಷಿಗಳ ನೆಲೆಯಾಗಿದೆ. 1967ರಲ್ಲಿ ಕೊಡಿಯಾಕರೈಅನ್ನು ವನ್ಯ ಜೀವಿ ಮತ್ತು ಪಕ್ಷಿಧಾಮ ಎಂದು ತಮಿಳುನಾಡು ಸರ್ಕಾರ ಗುರುತಿಸಿ ಸಂರಕ್ಷಿಸುತ್ತಿದೆ. ಒಟ್ಟು ನಾಲ್ಕು ಜಾತಿ ಫ್ಲೆಮಿಂಗೋಗಳು ಅಮೆರಿಕಾದಲ್ಲಿ ಕಂಡುಬರುತ್ತವೆ. ಇನ್ನು ಎರಡು ಜಾತಿಯ ಫ್ಲೆಮಿಂಗೋಗಳು ಆಫ್ರಿಕಾ, ಏಷ್ಯಾ ಮತ್ತು ಯುರೋಪ್ ಖಂಡಗಳಲ್ಲಿ ಕಂಡುಬರುತ್ತವೆ. ಸಾರ್ವಜನಿಕವಾಗಿ ಸುಲಭವಾಗಿ ಕಾಣಿಸಕೊಳ್ಳುವ ಈ ಪಕ್ಷಿಗಳು ಪ್ರತಿ ವರ್ಷ ಚಳಿಗಾಲದ ಸಂದರ್ಭದಲ್ಲಿ ವಲಸೆ ಹೋಗುತ್ತವೆ.
ಸದ್ಯ ಪಕ್ಷಿಗಳ ಹಾರಾಟದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ವಾವ್ ಎಂದು ಉದ್ಘರಿಸಿದ್ದಾರೆ. ಚಳಿಗಾಲದಲ್ಲಿ ಸಂತಾನಕ್ಕಾಗಿ ಪಕ್ಷಿಗಳು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವಲಸೆಹೋಗುತ್ತವೆ. ಅವುಗಳ ಹಾರಾಟ, ಅವುಗಳ ನಡುವಿನ ಬಾಂದವ್ಯ ನೋಡುಗರನ್ನು ಮೈಮರೆಸುತ್ತವೆ.
ಇದನ್ನೂ ಓದಿ:
ಬಚ್ಪನ್ಕಾ ಪ್ಯಾರ್ ಖ್ಯಾತಿಯ ಸಹದೇವ್ ದಿರ್ಡೋಗೆ ಅಪಘಾತ: ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡ ಬಾದ್ ಶಾ