ಮಹಾರಾಷ್ಟ್ರ: ಮನುಷ್ಯರು ಸೇಡಿಗಾಗಿ ಹತ್ಯೆ, ಹಲ್ಲೆ ಮಾಡುವುದನ್ನು ಕೇಳಿದ್ದೇವೆ, ಕಂಡಿದ್ದೇವೆ. ಆದರೆ ಮಹಾರಾಷ್ಟ್ರದಲ್ಲೊಂದು ವಿಲಕ್ಷಣ ಘಟನೆಯೊಂದು ವರದಿಯಾಗಿದೆ. ನಾಯಿಗಳು ತಮ್ಮ ಮರಿಯನ್ನು ಕೊಂದಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಕೋತಿಗಳು ಒಂದೇ ಗ್ರಾಮದಲ್ಲಿ 250 ನಾಯಿಗಳನ್ನು ಹತ್ಯೆಗೈದ ಘಟನೆ ನಡೆದಿದೆ. ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಮಜಲ್ಗಾಂವ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹಲವು ದಿನಗಳ ಹಿಂದೆ ನಾಯಿಯೊಂದು ಕೋತಿ ಮರಿಯನ್ನು ಹಿಡಿದು ಕೊಂದು ಹಾಕಿತ್ತು. ಅದಕ್ಕೆ ಪ್ರತಿಯಾಗಿ ಕೋತಿಗಳ ಹಿಂಡು ಊರನ್ನು ಪ್ರವೇಶಿಸಿ ನಾಯಿ ಮರಿಗಳನ್ನು ತಮ್ಮ ಹಲ್ಲುಗಳಿಂದ ಕಚ್ಚುತ್ತಿವೆ. ಅಲ್ಲದೆ ಮರದ ಮೇಲೆ ಎಳೆದೊಯ್ದು ಮೇಲಿನಿಂದ ಎಸೆದು ಸಾಯಿಸುತ್ತಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಈ ಬಗ್ಗೆ ಹಲವು ಬಾರಿ ಅರಣ್ಯ ಅಧಿಕಾರಿಗಳಿಗೆ ದೂರು ನೀಡಿದ್ದೇವೆ. ಅವರು ಹಳ್ಳಿಗೆ ಬಂದು ಕೋತಿಗಳನ್ನು ಹಿಡಿಯಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗುತ್ತಿಲ್ಲ. ಇದೀಗ ಕೋತಿಗಳು ಊರಿನಲ್ಲಿ ನಾಯಿಗಳ ಮಾರಣಹೋಮವನ್ನೇ ನಡೆಸಿವೆ. ಕಳೆದ ಒಂದು ತಿಂಗಳಿನಿಂದ ಕೋತಿಗಳ ದಾಳಿಗೆ ಊರಿನಲ್ಲಿರುವ ನಾಯಿಗಳೆಲ್ಲ ಸಾವನ್ನಪ್ಪಿವೆ. ಆದರೂ ಕೋತಿಗಳಿಗೆ ಸೇಡು ತೀರಲಿಲ್ಲ. ಇದೀಗ ಶಾಲೆಗೆ ಹೋಗುವ ಮಕ್ಕಳ ಮೇಲೆ ದಾಳಿ ಮಾಡುತ್ತಿವೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕೋತಿಗಳ ಹಾವಳಿಯಿಂದ ಗ್ರಾಮದಲ್ಲಿ ಹೊರಗೆ ಓಡಾಡಲೂ ಜನ ಭಯ ಪಡುತ್ತಿದ್ದಾರೆ. ಈ ಸಮಸ್ಯೆಗೆ ಪರಿಹಾರ ಹುಡುಕುವುದೇ ಹಳ್ಳಿಯ ಜನರಿಗೆ ಸವಾಲಾಗಿ ಪರಿಣಮಿಸಿದೆ.
ಇದೇ ರೀತಿಯ ಇನ್ನೊಂದು ಘಟನೆ ಸಪ್ಟಂಬರ್ನಲ್ಲಿ ಕರ್ನಾಟಕದಲ್ಲೂ ನಡೆದಿದೆ. ಹೌದು. ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರ ಊರಿನಲ್ಲಿ ಕೋತಿಯೊಂದು ಗ್ರಾಮಸ್ಥರ ವಿರುದ್ಧ ಸೇಡು ತೀರಿಸಿಕೊಳ್ಳಲು 22ಕಿಮೀ ಪ್ರಯಾಣಿಸಿದ ಘಟನೆ ನಡೆದಿತ್ತು. ಶಾಲೆಯ ಆವರಣದಲ್ಲಿ ಕೋತಿ ತಿರುಗಾಟ ಆರಂಭಿಸಿದ್ದನ್ನು ಕಂಡ ಊರಿನ ಜನ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ತಿಳಿಸಿ ಕೋತಿಯನ್ನು ಹಿಡಿದು ಕಾಡಿಗೆ ಬಿಟ್ಟದ್ದರು. ಆದರೆ ವಿಪರ್ಯಾಸ ಎಂಬಂತೆ ಒಂದೇ ವಾರದಲ್ಲಿ ಕೋತಿ ಮತ್ತೆ ಊರನ್ನು ಪ್ರವೇಶಿಸಿತ್ತು. ನಂತರ ಅರಣ್ಯ ಅಧಿಕಾರಿಗಳು ಕೋತಿಯನ್ನು ಮತ್ತೆ ಸೆರೆಹಿಡಿದು ಊರಿನಿಂದ ದೂರ ಇರುವ ಕಾಡಿಗೆ ಬಿಟ್ಟಿದ್ದರು. ಇದರಿಂದ ಕೋತಿ ಕಾಟದ ಸಮಸ್ಯೆ ಪರಿಹಾರವಾಗಿತ್ತು.
ಇದನ್ನೂ ಓದಿ:
Viral Video: ಅಮ್ಮನ ಮದುವೆಯಲ್ಲಿ ಮಗಳ ಸಂಭ್ರಮ; ಈ ವಿಡಿಯೋ ನೋಡಿದರೆ ಅಚ್ಚರಿಯಾಗದಿರದು!
ಜನರ ಕುತೂಹಲ ತಣಿಸಿದ ಗೂಗಲ್!; 2021ರಲ್ಲಿ ರಿಲೇಷನ್ಶಿಪ್ ಬಗ್ಗೆ ಅತ್ಯಂತ ಹೆಚ್ಚು ಕೇಳಲಾದ ಪ್ರಶ್ನೆಗಳು ಇಲ್ಲಿವೆ ನೋಡಿ