Trending : ವಿಜ್ಞಾನಿ ಮಾರ್ಟೆನ್ ಮೆಲ್ಡಾಲ್ ಅವರು ರಸಾಯನಶಾಸ್ತ್ರದಲ್ಲಿ 2022ನೇ ಸಾಲಿನ ನೊಬೆಲ್ ಪುರಸ್ಕೃತರು. ಆ ದಿನ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆ ಅವರ ಸಹೋದ್ಯೋಗಿಗಳು ಅವರಿದ್ದಲ್ಲಿ ಧಾವಿಸಿ ವಿಷಯವನ್ನು ತಿಳಿಸಿದರು. ಆಗ ಮಾರ್ಟೆನ್ ಪ್ರತಿಕ್ರಿಯಿಸಿದ ಅಪೂರ್ವ ಕ್ಷಣಗಳ ವಿಡಿಯೋ ಈಗ ವೈರಲ್ ಆಗುತ್ತಿದೆ. ಮಾತು ಸೋತು ಮೌನ ಮತ್ತು ಖುಷಿ ಅಲೆಅಲೆಯಾಗಿ ಹರಡಿದ ಆ ಸಮಯ ಮಾತ್ರ ದಿವ್ಯ. ನೆಟ್ಟಿಗರು ಈ ವಿಡಿಯೋ ನೋಡಿ ಮೂಕವಿಸ್ಮಿತರಾಗಿದ್ದಾರೆ. ನೊಬೆಲ್ ಎಂಬ ಅತ್ಯುನ್ನತ ಪ್ರಶಸ್ತಿ ಮುಡಿಗೇರುವುದೆಂದರೆ ಸಾಮಾನ್ಯವೆ? ಇದರ ಹಿಂದಿನ ಶ್ರಮವನ್ನು ಊಹಿಸಲೂ ಅಸಾಧ್ಯ. ಹೀಗೆ ಸಾಧನೆಯು ತುತ್ತತುದಿ ತಲುಪಿದಾಗ ಸುತ್ತಮುತ್ತಲಿನ ಜನ ಹೆಮ್ಮೆಪಟ್ಟಾಗಲೇ ಅದು ಪ್ರಶಸ್ತಿಯ ಮತ್ತು ಪುರಸ್ಕೃತರ ಸಾರ್ಥಕತೆ.
ಡ್ಯಾನಿಶ್ ರಸಾಯನಶಾಸ್ತ್ರಜ್ಞ ಮಾರ್ಟೆನ್ ಮೆಲ್ಡಾಲ್ ಅವರನ್ನು ಚಪ್ಪಾಳೆ ಮತ್ತು ಹರ್ಷೋದ್ಗಾರಗಳಿಂದ ಅಭಿನಂದಿಸುವತ್ತಿರುವ ಈ ವಿಡಿಯೋ ಚಿತ್ರೀಕರಿಸಿದ್ದು ಅಕ್ಟೋಬರ್ 5ರಂದು ಡೆನ್ಮಾರ್ಕಿನ ಕೋಪನ್ಹೆಗನ್ನಲ್ಲಿ. ರಸಾಯನಶಾಸ್ತ್ರದಲ್ಲಿ ಕ್ಯಾರೊಲಿನ್ ಆರ್. ಬರ್ಟೊಝಿ, ಮಾರ್ಟೆನ್ ಮೆಲ್ಡಾಲ್ ಮತ್ತು ಕೆ. ಬ್ಯಾರಿ ಶಾರ್ಪ್‌ಲೆಸ್ ಅವರಿಗೆ ಕ್ಲಿಕ್ ಕೆಮಿಸ್ಟ್ರಿ ಮತ್ತು ಬಯೋಆರ್ಥೋಗೋನಲ್ ಕೆಮಿಸ್ಟ್ರಿ ಅಭಿವೃದ್ಧಿಗಾಗಿ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ.
ಈ ಅಪರೂಪದ ವಿಡಿಯೋ ನೋಡಿದ ನೆಟ್ಟಿಗರಂತೂ ಕರಗಿಹೋಗಿದ್ದಾರೆ. ‘ಎಂಥ ಅದ್ಭುತ ಇದು. ವೈದ್ಯಕೀಯ ಸಂಶೋಧನೆಯೊಂದಿಗೆ ತಮ್ಮ ಇಡೀ ಜೀವನ ಮುಡಿಪಾಗಿಟ್ಟ ಎಲ್ಲರಿಗೂ ಕೃತಜ್ಞತೆ’ ಎಂದಿದ್ದಾರೆ ನೆಟ್ಟಿಗರೊಬ್ಬರು.
ಟ್ರೆಂಡಿಂಗ್ ನ್ಯೂಸ್ ಓದಲು ಕ್ಲಿಕ್ ಮಾಡಿ